ಜೋಯ್ಡಾ ಕಾಡೊಳಗಿನ ಒಡಲು ಬಿಡುಗಡೆ

Update: 2018-04-14 18:56 GMT

ಭಾರತದ ಜನಸಂಖ್ಯೆಯಲ್ಲಿ 14 ಕೋಟಿ ಜನ ಆದಿವಾಸಿಗಳು ಇದ್ದಾರೆ. ಈ ದೇಶದ ರಕ್ತಚರಿತ್ರೆಯಲ್ಲಿ ಆದಿವಾಸಿಗಳದ್ದು ಕರುಣಾಜನಕ ಅನುಭವ. ದೇಶಿ ಜ್ಞಾನ ಇರುವ ಬುಡಕಟ್ಟುಗಳು ವಸಾಹತುಶಾಹಿಗಳ ಎದುರು ಸೋಲನ್ನು ಅನುಭವಿಸಬೇಕಾದ್ದು ದುರಂತ. ನೈಸರ್ಗಿಕ ಸಂಪತ್ತಿನ ನಡುವೆ ಬದುಕುತ್ತಿರುವ ಆದಿವಾಸಿಗಳು ಶಿಕ್ಷಣ ಇಲ್ಲದಿರುವಿಕೆ ಮತ್ತು ಮುಗ್ಧತೆಯ ಕಾರಣಕ್ಕೆ ಅಭಿವೃದ್ಧಿ ಮತ್ತು ಆಣೆಕಟ್ಟು ಸಂಬಂಧಿ ವಿಷಯಗಳಲ್ಲಿ ಬದುಕನ್ನೇ ಕಳಕೊಂಡರು. ರಾಜ್ಯದ ಹಲವಾರು ಕಡೆಗಳಲ್ಲಿ ಆದಿವಾಸಿ ಸಮುದಾಯಗಳು ವಾಸಿಸುತ್ತಿವೆ. ದುರ್ಗಮ ಅರಣ್ಯಗಳಲ್ಲಿ ವಾಸಿಸುವ ಇವರಿಗೆ ಸಂಘಟಿತ ಹೋರಾಟಕ್ಕೆ ಸಾಧ್ಯವಾಗಿಲ್ಲ. ಇವರ ಶಿಕ್ಷಣ ಆರೋಗ್ಯಕ್ಕೆ ಸಂಬಂಧಿಸಿ ಕೆಲವು ಅಧ್ಯಯನಗಳಾಗಿವೆ ಬಿಟ್ಟರೆ ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಅಧ್ಯಯನಗಳು ಹಾಗೂ ಎಚ್ಚರಿಕೆ ಮೂಡಿಸುವ ಬರಹಗಳ ಪುಸ್ತಕಗಳು ಬಂದಿಲ್ಲ. ‘‘ಜೋಯ್ಡೆ: ಕಾಡೊಳಗಿನ ಒಡಲು’’ ಪುಸ್ತಕ ಆ ನಿಟ್ಟಿನಲ್ಲಿ ಸಾಕಷ್ಟು ಗಂಭೀರ ಅಧ್ಯಯನ ನಡೆಸಿ ಬರೆದ ಪುಸ್ತಕವಾಗಿದೆ. ಅರಣ್ಯವಾಸಿಗಳ ಸಾಂಸ್ಕೃತಿಕ ಬದುಕು, ದೇಶಿ ಜ್ಞಾನ ಶಿಸ್ತುಗಳ ಬಗ್ಗೆಯೂ ಒಳಗೊಂಡಿರುವ ಈ ‘‘ಕಾಡೊಳಗಿನ ಒಡಲು’’ ಪುಸ್ತಕವು ಅರಣ್ಯ ಹಕ್ಕುಗಳ ಹೋರಾಟಕ್ಕೊಂದು ಮಾರ್ಗದರ್ಶಿ ಹಾಗೂ ಜನಪ್ರತಿನಿಧಿಗಳಿಗೆ ಮತ್ತು ಸರಕಾರಕ್ಕೆ ಕಣ್ಣು ತೆರೆಯಿಸುವ ಉತ್ತಮ ಕೆಲಸ ಈ ಪುಸ್ತಕದಿಂದಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರಾಕೃತಿಕ ಸಂಪತ್ತು ಏಕಕಾಲದಲ್ಲಿ ವರವೂ ಸ್ಥಳೀಯರಿಗೆ ಶಾಪವೂ ಆಗಿದ್ದು ಹೌದು. ಕುಣಬಿ ಬುಡಕಟ್ಟು ಸಮುದಾಯವು ಅರಣ್ಯವಾಸಿಯಾಗಿದ್ದು ಯಾವುದೇ ರಾಜಕೀಯ ಆಮಿಷಕ್ಕೆ ಬಲಿಯಾಗದೇ ನಿಸರ್ಗಪರವಾಗಿ ಬದುಕುತ್ತಿರುವವರಾಗಿದ್ದಾರೆ. ಆದರೆ ಇನ್ನೂ ತನಕ ಅಧಿಕೃತ ಬುಡಕಟ್ಟು ಘೋಷಣೆ ಆಗದಿರುವುದು ದುಃಖದ ವಿಷಯ. ಈಗಾಗಲೇ ಇವರ ಮೇಲೆ ಕಸ್ತೂರಿ ರಂಗನ್ ವರದಿ ಮತ್ತು ಅರಣ್ಯ ಕಾಯ್ದೆಗಳು ಎರಗಿವೆ. ಅರಣ್ಯೋತ್ಪನ್ನಗಳ ಮೇಲೆ ಹಕ್ಕು ಕಳಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿಯೇ ದೇಶದ ವಿವಿಧೆಡೆ ಜಲ್, ಜಂಗಲ್, ಜಮೀನ್ ಆಂದೋಲನ ನಡೆಯುತ್ತಿದೆ. ಈ ಭಾಗದಲ್ಲಿ ಕೂಡ ಇಲ್ಲಿಯ ರೈತ ಸಂಘ ಅಂಥ ಸಾಕಷ್ಟು ಹೋರಾಟಗಳನ್ನು ನಡೆಸಿದ ಉದಾಹರಣೆ ಇಲ್ಲಿದೆ. ಸಂಶೋಧಕ ಜಯಾನಂದ ಡೇರೇಕರ್ ‘‘ಜೋಯ್ಡಿದ ಕುರಿತು ಅದರಲ್ಲೂ ಕುಣಬಿ ಸಮುದಾಯದ ಕುರಿತು ಬಹು ಆಯಾಮದಿಂದ ನೋಡಿ ಬರೆದ ಕೃತಿ ಇದು. ಈವರೆಗೆ ಇಂಥದ್ದೊಂದು ಸಮಗ್ರ ಅಧ್ಯಯನ ಬಂದಿರಲಿಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮತ್ತು ಜೋಯ್ಡೆದ ಸಮಗ್ರ ಅಧ್ಯಯನದ ಕುರಿತು ನಡೆಸಿದ ಹಲವು ಹೋರಾಟಗಳನ್ನು ಇಲ್ಲಿ ದಾಖಲಿಸಿದ್ದಾರೆ. ಕುಣಬಿಗಳ ಕಲೆ, ಆಹಾರ, ನಂಬಿಕೆ, ಹಬ್ಬ ಹರಿದಿನ, ಅವರ ಮೂಲ ಇತ್ಯಾದಿಗಳ ಬಗ್ಗೆ ಸವಿವರವಾದ ವಿಮರ್ಶಾತ್ಮಕವಾದ ಒಳನೋಟಗಳನ್ನುಳ್ಳ ಕೃತಿ ಇದಾಗಿದ್ದು, ಪ್ರತಿಯೊಬ್ಬರೂ ಇದನ್ನು ಓದಲೇ ಬೇಕಾದ ಅವಶ್ಯಕತೆ ಇದೆ. ಕುಣಬಿಗಳ ಮಧ್ಯೆ ಕೆಲಸ ಮಾಡುತ್ತಿರುವ ನನಗಂತೂ ಈ ಕೃತಿ ತುಂಬಾ ಖುಷಿ ಕೊಟ್ಟಿದೆ’’ ಎಂದಿದ್ದಾರೆ.

ಸಾಧನಾ ಮಾನವ ಹಕ್ಕುಗಳ ಸಂಸ್ಥೆಯ ಡಾ. ಇಸಬೆಲ್ಲಾದಾಸ್ ‘‘ಹಾಗೆ ನೋಡಿದರೆ ಜೋಯ್ಡೆದ ಹೋರಾಟಕ್ಕೆ ನಾಯಕತ್ವ ಕೊಡಬಹುದಾದ ಕೃತಿ ಇದು. ಇಲ್ಲಿಯ ಅತಿ ಹಿಂದುಳಿದ ಸಮುದಾಯದ ಕುರಿತು ಲೇಖಕರಿಗಿರುವ ಕಾಳಜಿ ಮತ್ತು ಈ ವರೆಗೆ ಅವರು ನಡೆಸಿದ ಹೋರಾಟದ ಅನುಭವ ಈ ಪುಸ್ತಕವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ’’ ಎಂದಿದ್ದಾರೆ. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಶಾಂತಾರಾಮ ನಾಯಕ ಪ್ರಕಾರ ಈ ಪುಸ್ತಕ ಸಮಗ್ರ ಜೋಯ್ಡಾ ಜನತೆಯ ಬದುಕು ಮತ್ತು ಹೋರಾಟದ ಸಮಗ್ರ ದಾಖಲೆಯೂ ಆಗಿದೆ. ಲೇಖಕರಾದ ಡಾ. ವಿಠಲ ಭಂಡಾರಿ ಮತ್ತು ಯಮುನಾ ಗಾಂವ್ಕರ್ ರವರು ಜೋಯ್ಡಾದ ಸಮಗ್ರ ಅಭಿವೃದ್ಧಿಗಾಗಿ ಅರಣ್ಯವಾಸಿಗಳ ಭೂಮಿ ಹಕ್ಕಿಗಾಗಿ ಮತ್ತು ಕುಣಬಿ, ಗೌಳಿಗರಿಗೆ ಬುಡಕಟ್ಟು ಮಾನ್ಯತೆ ಪಡೆಯಲು ಹೋರಾಟದ ಭಾಗವಾಗಿ ಈ ಪುಸ್ತಕ ಪ್ರಕಟಿಸಿದ್ದಾರೆ. ಆಸಕ್ತಿದಾಯಕ ಕೃತಿ ಇದು.

Writer - ದೇವಿಶ್ರೀ

contributor

Editor - ದೇವಿಶ್ರೀ

contributor

Similar News