ವಾರ್ನರ್ ಬ್ರದರ್ಸ್ ಮಾರ್ಕ್ಸ್ ಬ್ರದರ್ಸ್

Update: 2018-04-15 11:32 GMT

ಅಮೆರಿಕೆಯ ಪ್ರಸಿದ್ಧ ಚಿತ್ರ ನಿರ್ಮಾಪಕರೂ ಹಾಗೂ ಕಲಾವಿದರಾಗಿದ್ದ ಮಾರ್ಕ್ಸ್ ಸೋದರರ ಬಗ್ಗೆ ಪಿ.ಲಂಕೇಶರು ಬರೆದಿರುವ ಲೇಖನವಿದು. ಯಾವುದೇ ಒಂದು ಕಲೆಯು ಉದ್ಯಮವಾದಾಗ ಅಲ್ಲಿ ಉಂಟಾಗುವ ಹಿತಾಸಕ್ತಿಗಳ ಸಂಘರ್ಷ, ವ್ಯಾಪಾರಿ ಮೌಲ್ಯಗಳ ವಿಚಿತ್ರ ಸನ್ನಿವೇಶಗಳು ಹಾಗೂ ಅವನ್ನು ಮೀರಲೆತ್ನಿಸುವ ಕಲಾವಿದರ ಜಾಣತನಗಳನ್ನು ಈ ಲೇಖನ ನಿರೂಪಿಸುತ್ತದೆ.

ವಾರ್ನರ್ ಬ್ರದರ್ಸ್‌ ಶ್ರೀಮಂತಿಕೆಯಿಂದ ಸೊಕ್ಕಿ ಜಗತ್ತನ್ನೇ ಕೊಳ್ಳಬಲ್ಲ ಛಾತಿ ಪಡೆದಿದ್ದರೆ, ಮಾರ್ಕ್ಸ್ ಬ್ರದರ್ಸ್‌ ಬೀದಿನಾಟಕ, ಹಳ್ಳಿ ಆಟ, ತಮಾಷೆ ಪ್ರದರ್ಶನಗಳಿಂದ ಮುಂದೆ ಬಂದವರು. ತಮಾಷೆ ಇವರ ವೈಶಿಷ್ಟ್ಯ. ಬಡಿದಾಟ, ಕುಣಿದಾಟ, ಜೋಕುಗಳು, ವ್ಯಂಗ್ಯ ಇವರ ಶೈಲಿ. ಚಾರ್ಲಿ ಚಾಪ್ಲಿನ್, ಹೆರಾಲ್ಡ್ ಲಾಯ್ಡ್ ಮುಂತಾದವರು ಪ್ರಸಿದ್ಧಿಗೆ ಬರುವುದಕ್ಕೆ ಮುನ್ನವೇ ಇಡೀ ಅಮೆರಿಕವನ್ನು ಸುತ್ತಿ ತಮ್ಮ ‘ಶೋ’ಗಳಿಂದ ಅಷ್ಟಿಷ್ಟು ದುಡ್ಡು ಮಾಡಿದವರು; ಬಡತನದಿಂದ ಮೇಲೆ ಬಂದು ಮೂಕಿ ಸಿನೆಮಾಗಳ ಮೂಲಕ, ಆಮೇಲೆ ಟಾಕಿ ಸಿನೆಮಾಗಳ ಮೂಲಕ ಎಲ್ಲರನ್ನೂ ರಂಜಿಸಿದವರು.

ಈ ಜಗಳದಲ್ಲಿ ತೊಡಗಿದವರು ವಿಚಿತ್ರ ಜನ. ಒಂದು ಕಡೆ ಹಾಲಿವುಡ್‌ನ ಪ್ರಖ್ಯಾತ ನಿರ್ಮಾಪಕರಾದ ‘‘ವಾರ್ನರ್ ಬ್ರದರ್ಸ್‌’’ ಇವರು ಇಬ್ಬರು. ಜಾಕ್ ಮತ್ತು ಹ್ಯಾರಿ. ಈ ಶತಮಾನದ ಆದಿಭಾಗದಲ್ಲಿ ಅದ್ದೂರಿ ಚಿತ್ರಗಳನ್ನು ಮಾಡಿದವರು ವಾರ್ನರ್ ಬ್ರದರ್ಸ್‌. ಕೋಟ್ಯಂತರ ಡಾಲರ್ ಖರ್ಚು ಮಾಡಿ ಅವತ್ತಿನ ಪ್ರಖ್ಯಾತ ನಟರಾದ ಹಂಫ್ರೆ ಬೊಗಾರ್ಟ್, ಸ್ಪೆನ್ಸರ್, ರಾಬರ್ಟ್ ಟೇಲರ್, ರಾಕ್ ಹಡ್ಸನ್ ಮುಂತಾದವರನ್ನೂ, ಅಂದಿನ ಅಪ್ಸರೆಯರಾದ ರೀಟಾ ಹೇವರ್ತ್, ಏವಾ ಗಾರ್ಡನರ್, ಇನ್‌ಗ್ರಿಡ್ ಬರ್ಗ್‌ಮನ್ ಮುಂತಾದವರನ್ನೂ ಚಿತ್ರದಲ್ಲಿ ಮಿಂಚಿಸಿ ಕೊಪ್ಪರಿಗೆಗಟ್ಟಲೆ ಹಣ ಮಾಡಿದವರು ವಾರ್ನರ್ ಬ್ರದರ್ಸ್‌. ಹಾಲಿವುಡ್ ತನ್ನ ಹಣ, ವೈಭವ ಗಳಿಸಿದ್ದೇ ಅವರಿಂದ.

ಇವರ ಎದುರಾಳಿ ‘‘ಮಾರ್ಕ್ಸ್ ಬ್ರದರ್ಸ್‌’’.

ಮಾರ್ಕ್ಸ್ ಬ್ರದರ್ಸ್‌ರನ್ನು ವಾರ್ನರ್ ಬ್ರದರ್ಸ್‌ಗೆ ಹೋಲಿಸಿದರೆ ತಮಾಷೆ ತಿಳಿಯುತ್ತದೆ. ವಾರ್ನರ್ ಬ್ರದರ್ಸ್‌ ಶ್ರೀಮಂತಿಕೆಯಿಂದ ಸೊಕ್ಕಿ ಜಗತ್ತನ್ನೇ ಕೊಳ್ಳಬಲ್ಲ ಛಾತಿ ಪಡೆದಿದ್ದರೆ, ಮಾರ್ಕ್ಸ್ ಬ್ರದರ್ಸ್‌ ಬೀದಿನಾಟಕ, ಹಳ್ಳಿ ಆಟ, ತಮಾಷೆ ಪ್ರದರ್ಶನಗಳಿಂದ ಮುಂದೆ ಬಂದವರು. ತಮಾಷೆ ಇವರ ವೈಶಿಷ್ಟ್ಯ. ಬಡಿದಾಟ, ಕುಣಿದಾಟ, ಜೋಕುಗಳು, ವ್ಯಂಗ್ಯ ಇವರ ಶೈಲಿ. ಚಾರ್ಲಿ ಚಾಪ್ಲಿನ್, ಹೆರಾಲ್ಡ್ ಲಾಯ್ಡ್ ಮುಂತಾದವರು ಪ್ರಸಿದ್ಧಿಗೆ ಬರುವುದಕ್ಕೆ ಮುನ್ನವೇ ಇಡೀ ಅಮೆರಿಕವನ್ನು ಸುತ್ತಿ ತಮ್ಮ ‘ಶೋ’ಗಳಿಂದ ಅಷ್ಟಿಷ್ಟು ದುಡ್ಡು ಮಾಡಿದವರು; ಬಡತನದಿಂದ ಮೇಲೆ ಬಂದು ಮೂಕಿ ಸಿನೆಮಾಗಳ ಮೂಲಕ, ಆಮೇಲೆ ಟಾಕಿ ಸಿನೆಮಾಗಳ ಮೂಲಕ ಎಲ್ಲರನ್ನೂ ರಂಜಿಸಿದವರು. ಈ ಮಾರ್ಕ್ಸ್ ಬ್ರದರ್ಸ್‌ ಐದು ಜನ. ಇವರ ಹೆಸರೂ ವಿಚಿತ್ರವಾಗಿವೆ. ಚಿಕೋ, ಗ್ರೋಚೋ, ಗುಮ್ಮೋ, ಹಾರ್ಪೋ ಮತ್ತು ಜಿಪ್ಟೊ ಎಂಬವು ಈ ಐವರ ಹೆಸರು - ವರದಾಚಾರ್, ಶ್ರೀಧರ್, ಶೇಷಾಚಾರ್ ಎಂಬಂತೆ ವಾರ್ನರ್ ಬ್ರದರ್ಸ್‌ ಇದ್ದರೆ ರಂಗ, ಕೆಂಗ, ನಿಂಗ, ಮಾದ, ಮೂಕ ಎಂಬಂತೆ ಈ ಮಾರ್ಕ್ಸ್ ಸೋದರರು. ಈ ಐವರು ತಮ್ಮ ತಾಯಿ ಮಿನ್ನಿ ಜೊತೆಗೆ ನಾಟಕದ ಕಂಪೆನಿ ಮಾಡಿಕೊಂಡು ಊರೂರು ಸುತ್ತಿ ಸಿನೆಮಾ ಮಾಡತೊಡಗಿ ‘ಮಾರ್ಕ್ಸ್ ಬ್ರದರ್ಸ್‌’ ಎಂಬ ಸಿನೆಮಾ ಕಂಪೆನಿ ಆರಂಭಿಸಿದರು. ಈ ಐವರಲ್ಲಿ ಗ್ರೋಚೋ ತುಂಬ ಬುದ್ಧ್ದಿವಂತ; ಉಳಿದ ಸೋದರರು ತಮ್ಮ ಹಾಸ್ಯಮಯ ಹುಚ್ಚಾಟದಲ್ಲಿ ತೊಡಗಿದ್ದರೆ ಗ್ರೋಚೋ ಜಾಣತನದ ನಿರೂಪಣೆ ಮಾಡುವನು, ಕತೆ ಹೇಳುವನು. ತಮಾಷೆ ಸೇರಿಸುವನು. ಇವರು ಎ ನೈಟ್ ಇನ್ ಕ್ಯಾಸಬ್ಲಾಂಕಾ ಎಂಬ ಚಿತ್ರವನ್ನು 1946 ರಲ್ಲಿ ಮಾಡಿದರು.

ಗ್ರೋಚೋ ಮಾರ್ಕ್ಸ್ ಬಗ್ಗೆ ಇನ್ನಷ್ಟು ಹೇಳಬೇಕು. ಈತ ಮಾಡಿದ್ದೆಲ್ಲ, ಆಡಿದ್ದೆಲ್ಲ ತಮಾಷೆಯಾಗಿತ್ತು; ಒಮ್ಮೆ ಯಾವುದೋ ಒಂದು (ನಮ್ಮ ಡಂಬಾಯದ ತರಹದ) ಗುಂಪು ಈತನ ಪ್ರೋತ್ಸಾಹಕ್ಕಾಗಿ ಬಂದಿತು. ಅವರು ಮಾತಾಡುವುದಕ್ಕೆ ಮುಂಚೆ ಗ್ರೋಚೋ ಹೇಳಿದ, ‘‘ಅದೇನೇ ಇರಲಿ, ಅದಕ್ಕೆ ನಾನು ವಿರೋಧಿ!’’ ಅವರು ತಣ್ಣಗೆ ಹೋದರು. ಒಬ್ಬ ಸೋದರ ಒಮ್ಮೆ ಹೇಳಿದ, ‘‘ಜಾಡಮಾಲಿ ಬಂದಿದ್ದಾನೆ’’ ಅದಕ್ಕೆ ಗ್ರೋಚೋ, ‘‘ನಮಗೇನೂ ಬೇಕಿಲ್ಲ ಅಂತ ಹೇಳು!’’

ಆದದ್ದು ಇಷ್ಟು. 1946 ರಲ್ಲಿ ಈ ಸೋದರರು ‘ಎ ನೈಟ್ ಇನ್ ಕ್ಯಾಸಬ್ಲಾಂಕಾ’ ಎಂಬ ಚಿತ್ರ ಮಾಡುವುದಾಗಿ ಪ್ರಕಟಿಸಿದರು. ಅದಕ್ಕೆ ಐದು ವರ್ಷ ಮುಂಚೆ ಕ್ಯಾಸಬ್ಲಾಂಕಾ ಎಂಬ ಚಿತ್ರವನ್ನು ವಾರ್ನರ್ ಬ್ರದರ್ಸ್‌ ಮಾಡಿದ್ದರು. ಮಾರ್ಕ್ಸ್ ಸೋದರರು ತಮ್ಮ ‘ಎ ನೈಟ್ ಇನ್ ಕ್ಯಾಸಬ್ಲಾಂಕಾ’ವನ್ನು ಪ್ರಕಟಿಸಿದೊಡನೆ ವಾರ್ನರ್ ಬ್ರದರ್ಸ್‌ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ತಮ್ಮ ವಕೀಲರಿಂದ ನೋಟಿಸ್ ಕೊಡಿಸಿ ‘‘ಕ್ಯಾಸಬ್ಲಾಂಕಾ ಎಂಬ ಹೆಸರನ್ನು ನೀವು ಬಳಸಕೂಡದು, ಹುಷಾರ್’’ ಎಂದು ತಿಳಿಸಿದರು. ಗ್ರೋಚೋ ಮಾರ್ಕ್ಸ್ ಈ ವಾರ್ನರ್ ಬ್ರದರ್ಸ್‌ ಬಗ್ಗೆ ಸಿಟ್ಟಿನಿಂದ ಕೂತು ಯೋಚಿಸಿದ. ಅವರಿಗೆ ಕಾನೂನುಬದ್ಧ ಉತ್ತರ ಕೊಡಬಹುದಿತ್ತು. ತರ್ಕಬದ್ಧವಾಗಿ ವಾದಿಸಬಹುದಿತ್ತು. ಸಿಟ್ಟಿನಿಂದ ಕೂಗಾಡಬಹುದಿತ್ತು. ಗ್ರೋಚೋ ಅದೊಂದನ್ನೂ ಮಾಡಲಿಲ್ಲ. ತನ್ನಲ್ಲಿದ್ದ ಹಾಸ್ಯ, ವಿಡಂಬನೆಯ ಅಸ್ತ್ರ ತೆಗೆದು ಪ್ರಯೋಗಿಸಿದ. ಆತನ ಕಾಗದ ಸಾರಾಂಶದಲ್ಲಿ ಹೀಗಿತ್ತು:

‘‘ಪ್ರಿಯ ವಾರ್ನರ್ ಸೋದರರೇ,

ತಾವು ಸಿನೆಮಾ ಮಾಡುವವರೆಂದು ತಿಳಿದಿದ್ದೆ, ನೀವು ನಗರಗಳನ್ನು ಆಕ್ರಮಿಸಿಕೊಳ್ಳುವ ಶೂರರು ಎಂದು ನನಗೆ ಗೊತ್ತಿರಲಿಲ್ಲ. ಹೀಗೆ ನೀವು ಕ್ಯಾಸಬ್ಲಾಂಕಾ ನಗರವನ್ನು ವಶಪಡಿಸಿಕೊಂಡಿರುವುದು ನನಗೆ ಸಂತೋಷದ ಸುದ್ದಿ. ನಿಮ್ಮ ಅಪ್ಪ ನಿಮ್ಮ ಸ್ಟುಡಿಯೋ ಇರುವ ಬರ್‌ಬ್ಯಾಂಕ್ ಬಡಾವಣೆಗೆ ಬರುವ ಮುನ್ನ ಆಫ್ರಿಕಾದ ಪಶ್ಚಿಮ ಭಾಗದಲ್ಲಿರುವ ಕ್ಯಾಸಬ್ಲಾಂಕಾ ನಗರದ ಮೇಲೆ ಕಣ್ಣು ಹಾಕಿದ್ದ ಎಂದು ಕಾಣುತ್ತದೆ. 1471ರಲ್ಲಿ ನಿಮ್ಮ ತಾತನ ಮುತ್ತಾತನಾದ ಫರ್ಡಿನೆಂಡ್ ಬಲ್ಟೋವಾ ವಾರ್ನರ್ ಕೂಡ ಈ ಬಗ್ಗೆ ಕನಸು ಕಂಡಿರಬೇಕು. ಹೀಗಾಗಿ ನೀವು ಈಗ ಅದನ್ನು ವಶಪಡಿಸಿಕೊಂಡಿದ್ದೀರಿ. ತುಂಬಾ ಸಂತೋಷ. ಈ ಬಗ್ಗೆ ನಿಮ್ಮ ಕಾನೂನು ವಿಭಾಗ ನಮಗೆ ನೋಟಿಸ್ ಕೊಟ್ಟಿದೆ.

ನಿಮ್ಮ ನಿಲುವೇ ನನಗೆ ಅರ್ಥವಾಗುತ್ತಿಲ್ಲ. ಐದು ವರ್ಷದ ಹಿಂದೆ ಬಿಡುಗಡೆಯಾಗಿ ಪೆಟ್ಟಿಗೆ ಸೇರಿರುವ ನಿಮ್ಮ ‘ಕ್ಯಾಸಬ್ಲಾಂಕಾ’ದ ಪ್ರಸಿದ್ಧ ನಟ ಹಂಘ್ರಿ ಬೊಗಾರ್ಟ್‌ನನ್ನು ಜನ ನನ್ನ ತಮ್ಮ ಹಾರ್ಪೋ ಎಂದು ತಪ್ಪು ತಿಳಿಯಲಿಕ್ಕಿಲ್ಲ. ನಾನಂತೂ ಪ್ರಯತ್ನಿಸಿ ಯಾರು ಬೊಗಾರ್ಟ್, ಯಾರು ಹಾರ್ಪೋ ಎಂದು ಗೊತ್ತು ಹಚ್ಚುತ್ತೇನೆ.

ಸರಿ, ಕ್ಯಾಸಬ್ಲಾಂಕಾ ನಗರವನ್ನು ನಿಮ್ಮ ನಗರ ಎಂದು ನೀವು ಹೇಳಿಕೊಂಡ ಮೇಲೆ.... ‘ವಾರ್ನರ್ ಬ್ರದರ್ಸ್‌’ ಎಂಬುದನ್ನಂತೂ ನಿಮ್ಮದೇ ಎಂದು ಮೊಳೆ ಬಡಿದಿಟ್ಟುಕೊಂಡಿರುವುದರಲ್ಲಿ ನನಗೆ ಸಂಶಯವಿಲ್ಲ. ‘ವಾರ್ನರ್ ಬ್ರದರ್ಸ್‌’ ಎಂಬುದನ್ನೇ ನೋಡೋಣ. ಇದರಲ್ಲಿರುವ ಬ್ರದರ್ಸ್‌ ಎಷ್ಟರಮಟ್ಟಿಗೆ ನಿಮ್ಮದು - ನಮ್ಮ ಕಂಪೆನಿಯ ಹೆಸರೂ ‘ಮಾರ್ಕ್ಸ್ ಬ್ರದರ್’. ನಿಮ್ಮಲ್ಲಿರುವ ಬ್ರದರ್ಸ್‌ನ, ನಮ್ಮಲ್ಲಿರುವ ಬ್ರದರ್ಸ್‌ನ ಅರ್ಥ ಸೋದರರು, ಅಣ್ಣತಮ್ಮಂದಿರು, ಒಡಹುಟ್ಟಿದವರು. ನಿಮ್ಮ ಬ್ರದರ್ಸ್‌ ನಮ್ಮ ಬ್ರದರ್ಸ್‌ ಬೇರೆ ಎಂಬುದು ನಿಜ, ಆದರೆ ಬ್ರದರ್ಸ್‌ ನಿಘಂಟಿನ ಶಬ್ದ. ಅದನ್ನೂ ನೀವು ವಶಪಡಿಸಿ ಕೊಂಡಿದ್ದೀರೋ... ತಿಳಿಯಲಿಲ್ಲ. ಏಕೆಂದರೆ ‘ಅಣ್ಣಾ ಒಂದು ಕಾಸು ಕೊಡು’ ‘ತಮ್ಮಾ ಹೀಗೆ ಮಾಡಬೇಡ’ ಮುಂತಾದ್ದನ್ನು ಜನ ಮಾತನಾಡಿಕೊಳ್ಳುತ್ತಾರೆ. ನಿಮಗೆ ಬೇಸರವಾಗಬಹುದು. ಈಗಾಗಲೇ ಬ್ರದರ್ಸ್‌ ಕಮಜೋವ್, ಡ್ಯಾನ್ ಬ್ರದರ್ಸ್‌, ಸ್ಮಿತ್ ಬ್ರದರ್ಸ್‌ ಮುಂತಾದ್ದೆಲ್ಲ ಬಂದುಬಿಟ್ಟಿವೆ. ಇನ್ನು ನೀವು ಇಬ್ಬರು ಸೋದರರು.... ಜಾಕ್ ಮತ್ತು ಹ್ಯಾರಿ. ಹ್ಯಾರಿ ಎಂಬ ಹೆಸರನ್ನೇ ತೆಗೆದುಕೊಳ್ಳೋಣ. ಹ್ಯಾರಿ ಎಂಬುದು ಜಗತ್ತಿನಲ್ಲೇ ಅನನ್ಯ ಹೆಸರು ಎಂಬ ನಂಬಿಕೆಯಲ್ಲಿ ಹ್ಯಾರಿ ತನ್ನ ಚೆಕ್‌ಗಳಿಗೆ ಸಹಿ ಹಾಕಬಹುದು. ಆದರೆ ನಾನು ಬಲ್ಲಂತೆ ಲಕ್ಷಾಂತರ ಹ್ಯಾರಿಗಳಿವೆ; ಅವುಗಳಲ್ಲೊಬ್ಬ ಹ್ಯಾರಿ ಎಂಬ ದಗಾಕೋರ ಮತ್ತು ಹ್ಯಾರಿ ಎಂಬ ಭಿಕಾರಿಯನ್ನು ನಾನು ವೈಯಕ್ತಿಕವಾಗಿ ಬಲ್ಲೆ...

ಇನ್ನು, ಜಾಕ್ ಬಗ್ಗೆ ಹೇಳುವುದಾದರೆ ಅಸಂಖ್ಯ ಜಾಕ್‌ಗಳಲ್ಲಿ ಜಾಕ್ ‘ದಿ ಜಯಂಟ್ ಕಿಲ್ಲರ್’ ಮತ್ತು ‘ಜಾಕ್ ದಿ ರಿಪರ್’ ಬಗ್ಗೆ ನೀವೂ ಕೇಳಿರಬಹುದು. ಜಯಂಟ್ ಕಿಲ್ಲರ ಕತೆ ಜಗತ್ಪ್ರಸಿದ್ಧವಾಗಿದೆ; ಜಾಕ್ ದಿ ರಿಪ್ಪರ್ ಕುಖ್ಯಾತ ಕೊಲೆಗಡುಕ ಎಂಬ ಬಗ್ಗೆ ನಾನು ಪ್ರತ್ಯೇಕ ಹೇಳಬೇಕಾಗಿಲ್ಲ. ಖ್ಯಾತ ಜಾನಪದ ಕತೆ ಜಾಕ್ ಮತ್ತು ಹುರುಳಿಗಿಡವನ್ನು ನೀವು ಓದಿರಬಹುದು.

‘ವಾರ್ನರ್’ ಕೂಡ ಅನೇಕರ ಹೆಸರಾಗಿದೆ. ಇನ್ನು ನಿಮ್ಮ ಬರ್‌ಬ್ಯಾಂಕ್ ಸ್ಟುಡಿಯೋ ಬಗ್ಗೆ ಒಂದು ಮಾತು. ಬರ್‌ಬ್ಯಾಂಕ್ ಎಂಬ ಜಾಗ ಒಂದಾನೊಂದು ಕಾಲದಲ್ಲಿ ಬರ್‌ಬ್ಯಾಂಕ್ ಎಂಬ ತರಕಾರಿ ಕೃಷಿಕನ ಜಾಗವಾಗಿತ್ತೆಂದು ನಾನು ಇತಿಹಾಸದಲ್ಲಿ ಓದಿದ್ದೇನೆ. ಆತ ಸಜ್ಜನ ನಾಗರಿಕನಾಗಿದ್ದ; ಯಾರಿಗೂ ತೊಂದರೆ ಕೊಡದ ವ್ಯಕ್ತಿಯಾಗಿದ್ದ. ಆತ ಮರ್ಯಾದೆಯಿಂದ ತರಕಾರಿ ಬೆಳೆಯುತ್ತಿದ್ದ. ಬರ್‌ಬ್ಯಾಂಕ್‌ನಲ್ಲಿ ಈಗ ನಿಮ್ಮ ಸ್ಟುಡಿಯೋ ಸ್ಥಾಪಿತವಾಗಿದೆ. ನಿಮ್ಮ ಸ್ಟುಡಿಯೋದಿಂದ ಹೊಮ್ಮಿ ಬರುತ್ತಿರುವ ಮಸಾಲೆ ಚಿತ್ರಗಳು, ಅದ್ಭುತ ಕಳ್ಳೆಪುರಿಯಂಥ ಕೃತಿಗಳನ್ನು ಆತನ ದೆವ್ವ ನೋಡಿ ನಡುಗುತ್ತಿರಬೇಕು - ನಿಮ್ಮ ಕ್ಯಾಸಬ್ಲಾಂಕಾ ಗೋಲ್ಡ್ ಡಿಗ್ಗರ್ಸ್‌ನಂಥ ಚಿತ್ರಗಳು ಅವನಲ್ಲಿ ಸಂಕೋಚದ ನೋವು ಮೂಡಿಸಿರಬೇಕು.

ವಾರ್ನರ್ ಸೋದರರೇ, ತಪ್ಪು ತಿಳಿಯಬೇಡಿ. ನೀವು ದೊಡ್ಡ, ಗಂಭೀರ ಮನುಷ್ಯರು, ನಾವು ಸಾಮಾನ್ಯರು - ನೀವು ಕ್ಯಾಸಬ್ಲಾಂಕಾ, ಹ್ಯಾರಿ, ಜಾಕ್ ಮುಂತಾದವನ್ನು ಆಕ್ರಮಿಸಿಕೊಂಡು ಕೃತಾರ್ಥರಾಗಿದ್ದೀರಿ. ನಿಮ್ಮ ಕಾನೂನು ಇಲಾಖೆಯ ಉತ್ಸಾಹೀ, ತರುಣ ವಕೀಲರು ನಿಮ್ಮ ಆಕ್ರಮಿತ ಪ್ರದೇಶ, ಹೆಸರುಗಳನ್ನು ರಕ್ಷಿಸಲು ಹಗಲಿರುಳೂ ಶ್ರಮಿಸುತ್ತಿದ್ದಾರೆ. ಅವರನ್ನು ನಾನು ಊಹಿಸಬಲ್ಲೆ. ಕಪ್ಪು ಗುಂಗುರು ಕೂದಲ, ಗಂಭೀರ ವದನದ ಆಧುನಿಕ ಪೋಷಾಕಿನ ಈ ಕಾನೂನು ತಜ್ಞರು ನಮ್ಮಂಥವರಿಗೆ ತಮ್ಮ ಆಕ್ರಮಿತ ವಿಷಯಗಳ ಬಗ್ಗೆ ಹೇಳುತ್ತಾರೆ; ನಿಮಗಾಗಿ ಅವನ್ನೆಲ್ಲ ರಕ್ಷಿಸಲು ಹಗಲಿರುಳೂ ಶ್ರಮಿಸುತ್ತಾರೆ. ಕೇಸ್‌ಗಳನ್ನು ಗೆದ್ದು ತಮ್ಮ ಗುಂಗುರುಕೂದಲನ್ನು ಇನ್ನಷ್ಟು ಗುಂಗುರು ಮಾಡಿಕೊಂಡು ಹೆಮ್ಮೆ ಪಡುವುದು ಅವರ ಜೀವನೋದ್ದೇಶ’’. ...ಮೇಲಿನ ಕಾಗದ ಬರೆದ ಗ್ರೋಚೋ ಮಾರ್ಕ್ಸ್ ಉತ್ತರಕ್ಕಾಗಿ ಕಾದ. ವಾರ್ನರ್ ಸೋದರರ ಕಾನೂನು ಇಲಾಖೆಯ ಗುಂಗುರುಕೂದಲ ತರುಣರಿಗೆ ಆ ಕಾಗದದ ಹಾಸ್ಯವೇ ಹೊಳೆಯಲಿಲ್ಲ. ಅವರು ಗಾಢವಾಗಿ ವಿಚಾರ ಮಾಡಿ ಉತ್ತರಿಸಿದರು: ‘‘ಗ್ರೋಚೋ ಮಾರ್ಕ್ಸ್ ಅವರೇ, ತಮ್ಮ ಕಾಗದ ಬಂದಿದೆ. ವಿಷಯ ತಿಳಿದುಕೊಂಡಿದ್ದೇವೆ. ತಾವು ದಯವಿಟ್ಟು ತಮ್ಮ ‘ದಿ ನೈಟ್ ಇನ್ ಕ್ಯಾಸಬ್ಲಾಂಕಾ’ ಚಿತ್ರದ ಸಂಕ್ಷಿಪ್ತ ಕತೆಯನ್ನು ನಮಗೆ ಕಳಿಸಿಕೊಡಿ’’.

.... ಇದನ್ನು ಕಂಡ ಗ್ರೋಚೋ ತಣ್ಣಗೆ ಉತ್ತರಿಸಿದ. ಕತೆಯನ್ನು ಮನಸ್ಸಿಗೆ ಬಂದಂತೆ ಸೃಷ್ಟಿಸಿ ತನ್ನ ಪಾತ್ರ, ತನ್ನ ನಾಲ್ವರು ತಮ್ಮಂದಿರ ಪಾತ್ರಗಳನ್ನು ವಿವರಿಸಿ ಮತ್ತೊಂದು ಹಾಸ್ಯಮಯ ಕಾಗದ ಬರೆದ. ಇದಕ್ಕೆ ವಾರ್ನರ್ ಸೋದರರ ಕಾನೂನು ಇಲಾಖೆ, ಕತೆ ಸರಿಯಾಗಿ ಅರ್ಥವಾಗುತ್ತಿಲ್ಲ. ದಯವಿಟ್ಟು ಸರಳವಾಗಿ ಬರೆಯಿರಿ ಎಂದು ಬರೆಯಿತು.

.... ಗ್ರೋಚೋ ಮತ್ತೊಂದು ಕಾಗದ ಬರೆದ, ‘‘ಹೋದ ಸಲ ನಾನು ಕಳಿಸಿದ ಕತೆಯಲ್ಲಿ ಅನೇಕ ಬದಲಾವಣೆಗಳಿವೆ. ನನ್ನ ತಮ್ಮಂದಿರೆಲ್ಲ ಪ್ರಾಣಿ, ಪಕ್ಷಿಗಳಾಗಿ ಅಭಿನಯಿಸಲಿದ್ದಾರೆ. ನಿಮ್ಮ ಬೊಗಾರ್ಟ್ ಪಾತ್ರವನ್ನು ಬೇರೆಯವರಿಗೆ ಕೊಡಲಾಗಿದೆ’’ ಮುಂತಾಗಿ ಗೇಲಿ ಮಾಡಿದ.

ಅಲ್ಲಿಗೆ ವಿವಾದ, ಪತ್ರ ವ್ಯವಹಾರ ಮುಕ್ತಾಯಗೊಂಡಿತು. ವಾರ್ನರ್ ಸೋದರರ ತಕರಾರು ಮತ್ತು ಗ್ರೋಚೋ ಮಾರ್ಕ್ಸ್ ಪತ್ರಗಳು ಇತಿಹಾಸ ಸೇರಿದವು.

ಇಡೀ ಪ್ರಕರಣದ ಪಾತ್ರಧಾರಿಗಳು ಮತ್ತು ವಿಡಂಬನೆಗಾಗಿ ಮೇಲಿನ ಟಿಪ್ಪಣಿ ನೀಡಿದ್ದೇನೆ. ಸರಕಾರಿ ಇಲಾಖೆಯಂಥ ವಾರ್ನರ್ ಬ್ರದರ್ಸ್‌ಗೆ ಗೆರಿಲ್ಲಾ ರೀತಿಯ ಗ್ರೋಚೋ ಗುಂಪು ಹಾಸ್ಯದಿಂದಲೇ ಬುದ್ಧಿ ಕಲಿಸಿದ್ದು ಕುತೂಹಲಕರವಾಗಿದೆ.

ಕೃಪೆ: ಈ ನರಕ ಈ ಪುಳಕ ಕೃತಿ

Writer - ಪಿ. ಲಂಕೇಶ

contributor

Editor - ಪಿ. ಲಂಕೇಶ

contributor

Similar News