ಕಥುವಾ ಪ್ರಕರಣ: ರಾಜ್ಯದ ಹೊರಗೆ ವಿಚಾರಣೆ ನಡೆಸಲು ಕುಟುಂಬದಿಂದ ಮನವಿ

Update: 2018-04-15 15:08 GMT

ಜಮ್ಮು, ಎ.15: ಅತ್ಯಾಚಾರಕ್ಕೀಡಾಗಿ ಹತ್ಯೆಗೈಯಲ್ಪಟ್ಟಿರುವ ಎಂಟರ ಹರೆಯದ ಬಾಲಕಿಯ ಹೆತ್ತವರು ಈ ಪ್ರಕರಣದ ವಿಚಾರಣೆಯನ್ನು ರಾಜ್ಯದಿಂದ ಹೊರಗೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಲು ನಿರ್ಧರಿಸಿದ್ದಾರೆ. ಕಥುವಾ ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ದಾಖಲಿಸದಂತೆ ಕ್ರೈಂ ಬ್ರಾಂಚ್ ಪೊಲೀಸರನ್ನು ಸ್ಥಳೀಯ ವಕೀಲರು ತಡೆದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜ್ಯದಿಂದ ಹೊರಗೆ ವರ್ಗಾವಣೆ ಮಾಡಲು ತಾವು ನಿರ್ಧರಿಸಿರುವುದಾಗಿ ಮೃತಳ ಕುಟುಂಬದ ಪರ ವಕೀಲರು ತಿಳಿಸಿದ್ದಾರೆ. ದೋಷಾರೋಪ ಪಟ್ಟಿಯನ್ನು ದಾಖಲಿಸಲು ಸ್ಥಳೀಯ ವಕೀಲರು ತಡೆಯುತ್ತಿರುವುದನ್ನು ಗಮನಿಸಿದಾಗ ಈ ಪ್ರಕರಣದ ವಿಚಾರಣೆಯು ಜಮ್ಮುವಿನಲ್ಲಿ ಶಾಂತಿಯುತವಾಗಿ ನಡೆಯಲು ಸಾಧ್ಯವಿಲ್ಲ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ಹಾಗಾಗಿ ಪ್ರಕರಣದ ವಿಚಾರಣೆಯನ್ನು ಇತರ ರಾಜ್ಯಕ್ಕೆ ವರ್ಗಾಯಿಸುವಂತೆ ನಾವು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಲಿದ್ದೇವೆ ಎಂದು ವಕೀಲರು ತಿಳಿಸಿದ್ದಾರೆ. ಕಥುವಾ ಮತ್ತು ಉನ್ನಾವೊ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ದೇಶದ ಹಲವೆಡೆ ರವಿವಾರದಂದು ಜನರು ಕ್ಯಾಂಡಲ್ ಲೈಟ್ ಮಾರ್ಚ್ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News