ಲೆಕ್ಕ ಮಾಡಬಲ್ಲ ಪೆನ್ ಕಂಡುಹಿಡಿದ ಕಾಶ್ಮೀರದ 9 ವರ್ಷದ ಬಾಲಕ!

Update: 2018-04-16 09:21 GMT

ಶ್ರೀನಗರ, ಎ.16: ಕಾಶ್ಮೀರದ ಗುರೇಝ್ ಕಣಿವೆ ಸಮೀಪದ 9 ವರ್ಷದ ಬಾಲಕನೊಬ್ಬ ಲೆಕ್ಕ ಮಾಡಬಲ್ಲ ವಿಶೇಷ ಪೆನ್ ಕಂಡುಹಿಡಿದು ಎಲ್ಲರ ಹುಬ್ಬೇರಿಸಿದ್ದಾನೆ.

ಈ ಬಾಲಕನ ಹೆಸರು ಮುಝಫ್ಫರ್ ಅಹ್ಮದ್. “ಇದು ವಿಶೇಷ ಪೆನ್. ಈ ಪೆನ್ ನಲ್ಲಿ ಯಾರಾದರೂ ಬರೆಯಲು ಆರಂಭಿಸಿದರೆ ಅದು ಪದಗಳನ್ನು ಲೆಕ್ಕ ಹಾಕಲು ಆರಂಭಿಸುತ್ತದೆ. ಈ ಸಂಖ್ಯೆಗಳು ಪೆನ್ ನಲ್ಲಿರುವ ಸಣ್ಣ ಎಲ್ ಸಿಡಿ ಮಾನಿಟರ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಇಷ್ಟೇ ಅಲ್ಲದೆ ಸಂದೇಶದ ಮೂಲಕ ಮೊಬೈಲ್ ನಲ್ಲೂ ಕಾಣಿಸಿಕೊಳ್ಳುತ್ತದೆ” ಎನ್ನುತ್ತಾನೆ 9 ವರ್ಷದ ಬಾಲಕ ಮುಝಫ್ಫರ್.

ಹೆಚ್ಚು ಬರೆಯದ ಕಾರಣ ಪರೀಕ್ಷೆಯಲ್ಲಿ ತನಗೆ ಕಡಿಮೆ ಅಂಕ ಸಿಕ್ಕಿದ ಸಂದರ್ಭ ಪದಗಳನ್ನು ಲೆಕ್ಕ ಹಾಕಬಲ್ಲ ಪೆನ್ ಕಂಡು ಹಿಡಿಯುವ ಐಡಿಯಾ ಹೊಳೆಯಿತು ಎಂದು ಮುಝಫ್ಫರ್ ಹೇಳುತ್ತಾನೆ.

“ನಾನು ಕಡಿಮೆ ಬರೆದ ಕಾರಣ ಪರೀಕ್ಷೆಯಲ್ಲಿ ಕಡಿಮೆ ಅಂಕ ಲಭಿಸಿತ್ತು. ಇದರಿಂದ ನಾನು ಚಿಂತಿತನಾಗಿದ್ದೆ. ಈ ಸಂದರ್ಭ ನನಗೆ ಲೆಕ್ಕ ಹಾಕಬಲ್ಲ ಪೆನ್ ಹೊಳೆಯಿತು” ಎಂದು ಬಾಲಕ ಹೇಳುತ್ತಾನೆ.

ರಾಷ್ಟ್ರೀಯ ಆವಿಷ್ಕಾರ ಫೆಡರೇಶನ್ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಈ ಪೆನ್ ನ ಮೂಲ ಮಾದರಿಯನ್ನು ಪ್ರದರ್ಶಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮುಝಫ್ಫರ್ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News