ಡ್ರೋನ್ ತಂತ್ರಜ್ಞಾನ ಬಳಸಲು ಶೀಘ್ರದಲ್ಲೇ ನಿಯಮ: ಕೇಂದ್ರ

Update: 2018-04-16 15:49 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಎ.16: ಡ್ರೋನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅನುಸರಿಸ ಬೇಕಾದ ನಿಯಮಗಳನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ಕೇಂದ್ರ ಸರಕಾರ ಸೋಮವಾರ ತಿಳಿಸಿದೆ.

ಜೊತೆಗೆ ಡ್ರೋನ್‌ನ ವಿವಿಧ ರೀತಿಯ ಬಳಕೆಯನ್ನು ನಿಯಂತ್ರಿಸಲು ಫ್ರಾನ್ಸ್‌ನ ಸಕ್ರಿಯ ಬೆಂಬಲದೊಂದಿಗೆ ಅಂತರ್‌ರಾಷ್ಟ್ರೀಯ ಡ್ರೋನ್ ಮೈತ್ರಿಯನ್ನು ನಡೆಸುವ ಬಗ್ಗೆಯೂ ಸರಕಾರ ಚಿಂತಿಸುತ್ತಿರುವುದಾಗಿ ತಿಳಿಸಿದೆ. ಭದ್ರತಾ ಸಂಸ್ಥೆಗಳು, ಉತ್ಪಾದಕರು, ಜಾಗತಿಕ ನಿಯಂತ್ರಕರು ಮತ್ತು ಅನ್ವೇಷಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ನಿಯಮಗಳನ್ನು ರಚಿಸಲಾಗುವುದು ಎಂದು ನಾಗರಿಕ ವೈಮಾನಿಕ ರಾಜ್ಯ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ.

ಸಿಐಐ ಆಯೋಜಿಸಿದ್ದ ಭಾರತ-ಫ್ರಾನ್ಸ್ ಭದ್ರತೆ ಮತ್ತು ವಾಯುಯಾನ ಸಹಕಾರ ಸಭೆಯಲ್ಲಿ ಮಾತನಾಡಿದ ಸಿನ್ಹಾ, ಡ್ರೋನ್‌ಗೆ ಸಂಬಂಧಪಟ್ಟಂತೆ ಭಾರತ ಮತ್ತು ಫ್ರಾನ್ಸ್ ಯಾಕೆ ಒಂದಾಗಿ ಕಾರ್ಯನಿರ್ವಹಿಸಬಾರದು. ಎರಡೂ ದೇಶಗಳು ಜೊತೆಯಾಗಿ ಅಂತರ್‌ರಾಷ್ಟ್ರೀಯ ಡ್ರೋನ್ ಮೈತ್ರಿಯನ್ನು ರಚಿಸುವ ಅಗತ್ಯವಿದೆ ಎಂದು ತಿಳಿಸಿದ್ದರು. ಈ ಸಭೆಯಲ್ಲಿ ಭಾರತ ಮತ್ತು ಫ್ರಾನ್ಸ್‌ನ ಭದ್ರತಾ ಮತ್ತು ವಾಯುಯಾನ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News