ನೀವು ಖರೀದಿಸುವ ಚಿನ್ನಾಭರಣಗಳ ಬೆಲೆ ಹೇಗೆ ನಿಗದಿಯಾಗುತ್ತದೆ ಗೊತ್ತೇ....?

Update: 2018-04-17 15:04 GMT

ಚಿನ್ನದ ಮೇಲೆ ಭಾರತೀಯರಿಗಿರುವಷ್ಟು ಮೋಹ ಜಗತ್ತಿನಲ್ಲಿ ಬೇರ್ಯಾವುದೇ ದೇಶದಲ್ಲಿಲ್ಲ. ಅಕ್ಷಯ ತೃತೀಯಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ, ಮದುವೆ ಸೀಝನ್ನಿನಲ್ಲಿ ಚಿನ್ನಾಭರಣಗಳ ವ್ಯಾಪಾರದ ಭರಾಟೆ ಜೋರಾಗಿಯೇ ಇರುತ್ತದೆ. ಸಾಮಾನ್ಯವಾಗಿ ಚಿನ್ನಾಭರಣಗಳ ಅಂಗಡಿಗೆ ಹೋದಾಗ ನಮಗೆ ಬೇಕಾದ ವಿನ್ಯಾಸದ ಒಡವೆಯನ್ನು ಆಯ್ಕೆ ಮಾಡುವುದರಲ್ಲಿಯೇ ಸಮಯವನ್ನು ಕಳೆಯುತ್ತೇವೆಯೇ ಹೊರತು ಅಂಗಡಿಯಾತ ಹೇಳಿದ ದರವನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಇದು ತಪ್ಪು. ನಾವು ಒಡವೆಗೆ ಅಂತಿಮವಾಗಿ ತೆರುವ ಬೆಲೆಯ ಮೇಲೆ ಚಿನ್ನದ ದರ, ತಯಾರಿಕೆ ಶುಲ್ಕ,ವೇಸ್ಟೇಜ್, ಹರಳುಗಳ ಮೌಲ್ಯ ಇತ್ಯಾದಿಗಳು ಪರಿಣಾಮವನ್ನು ಬೀರುವುದರಿಂದ ಅಂಗಡಿಯಾತ ಹೇಳಿದ ದರವನ್ನೇ ನಾವು ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳಬೇಕಿಲ್ಲ. ಪ್ರಸ್ತುತ ದೇಶದಲ್ಲಿ ನಿಗದಿತ ಬಿಲ್ಲಿಂಗ್ ವ್ಯವಸ್ಥೆಯಿಲ್ಲ ಮತ್ತು ಚಿನ್ನಾಭರಣಗಳ ದರಗಳು ವ್ಯಾಪಾರಿಯಿಂದ ವ್ಯಾಪಾರಿಗೆ ಬದಲಾಗುತ್ತಿರುತ್ತವೆ. ಪ್ರತಿ ನಗರವೂ ತನ್ನದೇ ಆದ ಜ್ಯುವೆಲರಿ ಅಸೋಸಿಯೇಷನ್ ಹೊಂದಿರುತ್ತದೆ ಮತ್ತು ಈ ಅಸೋಸಿಯೇಷನ್‌ಗಳು ಪ್ರತಿದಿನ ಬೆಳಿಗ್ಗೆ ಅಂದಿನ ಚಿನ್ನದ ದರಗಳನ್ನು ಘೋಷಿಸುತ್ತವೆ. ಇದೇ ಕಾರಣದಿಂದ ಬೇರೆ ಬೇರೆ ನಗರಗಳಲ್ಲಿ ಬೇರೆ ಬೇರೆ ದರಗಳಿರುತ್ತವೆ.

ಕ್ಯಾರಟ್‌ಲೇನ್‌ನ ಹಿರಿಯ ಉಪಾಧ್ಯಕ್ಷ(ಮಾರಾಟ ವಿಭಾಗ) ಅತುಲ್ ಸಿನ್ಹಾ ಅವರು ಚಿನ್ನಾಭರಣಗಳ ಅಂಗಡಿಯಲ್ಲಿ ಒಡವೆಗಳ ಬೆಲೆಗಳನ್ನು ಹೇಗೆ ನಿರ್ಧರಿಸಲಾಗುತ್ತದೆ ಎನ್ನುವುದನ್ನು ಹೀಗೆ ವಿವರಿಸಿದ್ದಾರೆ.

ಚಿನ್ನಾಭರಣದ ಅಂತಿಮ ಬೆಲೆ=ಪ್ರತಿ ಗ್ರಾಂ ಚಿನ್ನ(22 ಕ್ಯಾರಟ್ ಅಥವಾ 18 ಕ್ಯಾರಟ್)ದ ಬೆಲೆXಗ್ರಾಮ್‌ಗಳಲ್ಲಿ ತೂಕ+ತಯಾರಿಕೆ ಶುಲ್ಕ+ಶೇ.3 ಜಿಎಸ್‌ಟಿ(ಒಡವೆಯ ಬೆಲೆ+ತಯಾರಿಕೆ ವೆಚ್ಚಗಳ ಮೇಲೆ)

ಇದನ್ನು ತಿಳಿದುಕೊಳ್ಳಲು ಈ ಕೆಳಗಿನ ಉದಾಹರಣೆ ನಿಮಗೆ ನೆರವಾಗಬಹುದು.

ಘೋಷಿತ ಬೆಲೆ ಪ್ರತಿ 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ 27,350 ರೂ.ಎಂದಿಟ್ಟುಕೊಳ್ಳಿ. ನೀವು 9.6 ಗ್ರಾಂ ತೂಕದ ಚೈನ್ ಖರೀದಿಸಲು ಬಯಸಿದ್ದರೆ ಅದರ ದರವನ್ನು ಹೀಗ ಲೆಕ್ಕ ಹಾಕಲಾಗುತ್ತದೆ.

ಒಂದು ಗ್ರಾಂ ಚಿನ್ನದ ಬೆಲೆ 27,350/10=2,735 ರೂ.

9.6 ಗ್ರಾಂ ಚಿನ್ನದ ಬೆಲೆ=2,735 ರೂ.X9.6 ಅಂದರೆ 26,256 ರೂ.

ತಯಾರಿಕೆ ವೆಚ್ಚ ಶೇ.10 ಎಂದಿಟ್ಟುಕೊಂಡರೆ ಅದು 2625.60 ರೂ.ಆಗುತ್ತದೆ

ಅಲ್ಲಿಗೆ ಒಟ್ಟು 28881.60 ರೂ.ಆಗುತ್ತದೆ. ಇದಕ್ಕೆ ಶೇ.3ರಷ್ಟು ಜಿಎಸ್‌ಟಿ 866.44 ರೂ.ಸೇರಿಸಿದರೆ ಚಿನ್ನದ ಚೈನಿನ ಅಂತಿಮ ಬೆಲೆ 29,748.04 ರೂ.ಆಗುತ್ತದೆ.

ಇಲ್ಲಿ ನೀವು ತೆರುವ ತಯಾರಿಕೆ ವೆಚ್ಚದಲ್ಲಿ ವೇಸ್ಟೇಜ್ ಸೇರಿರಬಹುದು ಅಥವಾ ವೇಸ್ಟೇಜ್ ಎಂದು ಪ್ರತ್ಯೇಕವಾಗಿ ವೆಚ್ಚವನ್ನು ಅಂಗಡಿಯಾತ ಸೇರಿಸಬಹುದು. ಇಲ್ಲಿ ಚೌಕಾಶಿ ಮಾಡಿದರೆ ಅಂತಿಮ ದರ ಕೆಲವು ರೂಪಾಯಿಗಳಷ್ಟು ಕಡಿಮೆಯೂ ಆಗಬಹುದು ಎನ್ನುವುದು ನೆನಪಿರಲಿ.

ಕೆಲವೊಮ್ಮೆ ನೀವು ಖರೀದಿಸುವ ಆಭರಣದಲ್ಲಿ ಹರಳುಗಳೂ ಇರುತ್ತವೆ. ಇಂತಹ ಸಂದರ್ಭದಲ್ಲಿ ಹರಳುಗಳ ತೂಕವನ್ನು ಕಳೆದು ಚಿನ್ನದ ತೂಕವನ್ನು ಲೆಕ್ಕ ಹಾಕಕಲಾಗಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ. ಇಲ್ಲದಿದ್ದರೆ ಹರಳುಗಳಿಗೂ ಚಿನ್ನದ ಬೆಲೆಯನ್ನು ತೆರಬೇಕಾಗುತ್ತದೆ. ಚಿನ್ನದ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಬಿಎಸ್‌ಐ ಸ್ಟಾಂಡರ್ಡ್ ಹಾಲ್‌ಮಾರ್ಕ್ ಇರುವ ಆಭರಣಗಳನ್ನೇ ಖರೀದಿಸುವುದನ್ನು ಮರೆಯಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News