ಬೆಂಗಳೂರು: ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ
ಬೆಂಗಳೂರು, ಎ. 17: ಕಥುವಾ, ಉನ್ನಾವ್ ಘಟನೆ ಸೇರಿದಂತೆ ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸುವ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಆಗ್ರಹಿಸಿ ವಿದ್ಯಾರ್ಥಿನಿಯರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಗಳವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಿಂದ ಆಯೋಜಿಸಿದ್ದ, ಖಂಡನಾ ಸಭೆ ಮತ್ತು ಜಾಥಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರು, ಮುಖಕ್ಕೆ ಬಟ್ಟೆ ಧರಿಸಿದ ನಗರದ ಮಹಾರಾಣಿ ಕಾಲೇಜಿನಿಂದ ಪುರಭವನದವರೆಗೂ ಜಾಗೃತಿ ಜಾಥಾ ನಡೆಸಿದರು. ನಂತರ ಪುರಭವನದ ಮುಂದೆ ಮೇಣದ ಬತ್ತಿ ಹಚ್ಚಿ ಅತ್ಯಾಚಾರ ಸಂತ್ರಸ್ತರಿಗೆ ಸಂತಾಪ ಸೂಚಿಸಿದರು.
ದೇಶದಲ್ಲಿ ದಿನದಿಂದ ದಿನಕ್ಕೆ ಹೆಣ್ಣಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ, ಹೆಣ್ಣು ಮಕ್ಕಳು ನಿರ್ಭೀತಿಯಿಂದ ಬದುಕು ನಡೆಸುವುದು ದುಸ್ತರವಾಗುತ್ತಿದೆ. ಸರಕಾರಗಳು ಈ ಕೂಡಲೇ ಎಚ್ಚೆತ್ತು ಹೆಣ್ಣು ಮಕ್ಕಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುತ್ತಿಲ್ಲ ಹೀಗಾಗಿ, ಅತ್ಯಾಚಾರಿಗಳಿಗೆ ಭಯವಿಲ್ಲದಂತಾಗಿದೆ. ಇಂತಹ ಪ್ರಕರಣಗಳಲ್ಲಿ ಆರೋಪಿಗಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಸರಕಾರಗಳು ಘಟನೆಗಳು ಸಂಭವಿಸಿದಾಗ ಕಾನೂನು ರಚಿಸುವ ಬದಲು ಘಟನಗೆ ಮುಂಚೆಯೇ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷೆ ಡಾ.ಕೃಪಾ ಆಳ್ವ ಮಾತನಾಡಿ, ಆಸಿಫಾ ಅತ್ಯಾಚಾರ ಪ್ರಕರಣ ದೇಶವೇ ತಲೆತಗ್ಗಿಸುವಂತಹದ್ದು, ಇಂತಹ ಹೀನ ಕೃತ್ಯಗಳ ವಿರುದ್ಧ ವಿದ್ಯಾರ್ಥಿಗಳು ಗಟ್ಟಿ ಧ್ವನಿಎತ್ತಬೇಕು ಎಂದು ಕರೆ ನೀಡಿದರು.
ಆಸಿಫಾಳ ಮೇಲೆ 8ದಿನಗಳ ಕಾಲ ಸತತವಾಗಿ ಅತ್ಯಾಚಾರ ನಡೆಸಿ, ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಮೃಗಗಳಿಗಿಂತ ಕಡೆಯಾದ ವರ್ತನೆ ತೋರುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅತ್ಯಾಚಾರ ಪ್ರಕರಣಕ್ಕೆ ದೇಶದಲ್ಲಿ ಬಲಿಷ್ಠ ಕಾನೂನು ರಚನೆಯಾಗಬೇಕು. ಈ ಸಂಬಂದ ರಾಷ್ಟ್ರಪತಿ, ಹಾಗೂ ಉಪರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ಜಸ್ಟೀಸ್ ಫಾರ್ ಆಸಿಫಾ ಎಂಬ ಘೋಷಣೆಗಳನ್ನು ಕೂಗಿದರು. ಅನನ್ಯ ಎಜುಕೇಶನ್ ಅಂಡ್ ಎಂಪವರ್‌ಮೆಂಟ್ ಟ್ರಸ್ಟ್, ಸಮಾಜ ಪರಿವರ್ತನಾ ಆಂದೋಲನದ ಸದಸ್ಯರು ಹಾಗೂ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.