ಐಪಿಎಲ್‌ನಲ್ಲಿ ಸುನೀಲ್ ನರೇನ್‌ಗೆ 100 ವಿಕೆಟ್

Update: 2018-04-17 18:57 GMT

ಕೋಲ್ಕತಾ, ಎ.17: ವೆಸ್ಟ್ ಇಂಡೀಸ್‌ನ ಸುನೀಲ್ ನರೇನ್ ಐಪಿಎಲ್‌ನಲ್ಲಿ ನೂರನೇ ವಿಕೆಟ್ ಪಡೆದಿದ್ದಾರೆ.

ಈಡನ್ ಗಾರ್ಡನ್ಸ್‌ನಲ್ಲಿ ಸೋಮವಾರ ನಡೆದ ಐಪಿಎಲ್‌ನ 13ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಕೋಲ್ಕತಾ ನೈಟ್‌ರೈಡರ್ಸ್‌ ತಂಡ 71 ರನ್‌ಗಳ ಭರ್ಜರಿ ಜಯ ಗಳಿಸಿತ್ತು. ಸುನೀಲ್ ನರೇನ್ 18ಕ್ಕೆ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗೆಲುವಿಗೆ 201 ರನ್ ಗಳಿಸಬೇಕಿದ್ದ ಡೆಲ್ಲಿ ಡೇರ್ ಡೆವಿಲ್ಸ್ ತಂಡ 14.2 ಓವರ್‌ಗಳಲ್ಲಿ 129 ರನ್‌ಗಳಿಗೆ ಆಲೌಟಾಗಿದೆ. ಸುನೀಲ್ ನರೇನ್ ಮತ್ತು ಕುಲ್‌ದೀಪ್ ಯಾದವ್ ( 32ಕ್ಕೆ 3)ಪ್ರಹಾರಕ್ಕೆ ಸಿಲುಕಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಬೇಗನೇ ಇನಿಂಗ್ಸ್ ಮುಗಿಸಿದೆ.

ಡೆಲ್ಲಿ ತಂಡದ ರಿಷಬ್ ಪಂತ್ (43), ಗ್ಲೆನ್ ಮ್ಯಾಕ್ಸ್‌ವೆಲ್ (47) ಇವರನ್ನು ಹೊರತುಪಡಿಸಿದರೆ ತಂಡದ ಇತರ ಯಾರಿಂದಲೂ ಎರಡಂಕೆಯ ಕೊಡುಗೆ ಲಭ್ಯವಾಗಲಿಲ್ಲ.

 ಕೋಲ್ಕತಾ ತಂಡಕ್ಕೆ ನಿತೀಶ್ ರಾಣಾ (35 ಎಸೆತಗಳಲ್ಲಿ 59 ರನ್) ಮತ್ತು ರಸೆಲ್ 12 ಎಸೆತಗಳಲ್ಲಿ 6 ಸಿಕ್ಸರ್‌ಗಳ ನೆರವಿನಲ್ಲಿ 41 ರನ್ ಗಳಿಸಿ ತಂಡದ ಸ್ಕೋರ್ 200ಕ್ಕೆ ತಲುಪಲು ನೆರವಾಗಿದ್ದರು. ಇದರಿಂದಾಗಿ ಕೋಲ್ಕತಾ ತಂಡ ಎರಡನೇ ಗೆಲುವು ದಾಖಲಿಸಿತ್ತು.

ವೆಸ್ಟ್‌ಇಂಡೀಸ್‌ನ ಆಲ್‌ರೌಂಡರ್ ರಸೆಲ್ ಕಳೆದ ವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 36 ಎಸೆತಗಳಲ್ಲಿ 1 ಬೌಂಡರಿ 11 ಸಿಕ್ಸರ್ ನೆರವಿನಲ್ಲಿ ಅಜೇಯ 88 ರನ್ ಗಳಿಸಿದ್ದರು.

    ನಿನ್ನೆ ನಡೆದ ಪಂದ್ಯದಲ್ಲಿ ಮುಹಮ್ಮದ್ ಶಮಿ ಎರಡು ಓವರ್‌ಗಳಲ್ಲಿ 6 ಸಿಕ್ಸರ್‌ಗಳನ್ನು ಜಮೆ ಮಾಡಿದ್ದರು. ನಿತೀಶ್ ರಾಣಾ ನೈಟ್ ರೈಡರ್ಸ್‌ ಪರ ಮೊದಲ ಅರ್ಧಶತಕ ದಾಖಲಿಸಿದ್ದರು.

  ನರೇನ್‌ಗೆ ಅಗ್ರಸ್ಥಾನ: ಈ ಬಾರಿ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪೈಕಿ ನರೇನ್ ಅಗ್ರಸ್ಥಾನದಲ್ಲಿದ್ದಾರೆ. ನರೇನ್ 112ನೇ ಓವರ್‌ನ 3ನೇ ಎಸೆತದಲ್ಲಿ ಕ್ರಿಸ್ ಮೊರಿಸ್ (2) ವಿಕೆಟ್ ಪಡೆಯುವ ಮೂಲಕ ಐಪಿಎಲ್‌ನಲ್ಲಿ 100ನೇ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಅದೇ ಓವರ್‌ನ 5ನೇ ಎಸೆತದಲ್ಲಿ ವಿಜಯ್ ಶಂಕರ್ (2) ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. 14ನೇ ಓವರ್‌ನ 5ನೇ ಎಸೆತದಲ್ಲಿ ಶಮಿ ವಿಕೆಟ್ ಕಬಳಿಸಿದ ನರೇನ್ ಪಡೆದ ವಿಕೆಟ್‌ಗಳ ಸಂಖ್ಯೆಯನ್ನು 3ಕ್ಕೆ ಏರಿಸಿದರು. ಈ ಆವೃತ್ತಿಯ ಐಪಿಎಲ್‌ನಲ್ಲಿ ನರೇನ್ 117ಕ್ಕೆ 8 ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News