‘ಈ ವರ್ಷದ ಐಪಿಎಲ್‌ನಲ್ಲಿ ರಶೀದ್ ಖಾನ್ ಶ್ರೇಷ್ಠ ಪ್ರದರ್ಶನ ನೀಡಲಿದ್ದಾರೆ’

Update: 2018-04-17 19:00 GMT

ಹೊಸದಿಲ್ಲಿ, ಎ.17: ‘‘ಈ ವರ್ಷದ ಐಪಿಎಲ್‌ನಲ್ಲಿ ಅಫ್ಘಾನಿಸ್ತಾನದ ಆಫ್-ಸ್ಪಿನ್ನರ್ ರಶೀದ್ ಖಾನ್ ಪರಿಣಾಮಕಾರಿ ಪ್ರದರ್ಶನ ನೀಡಲಿದ್ದಾರೆ’’ ಎಂದು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಕೋಚ್ ಟಾಮ್ ಮೂಡಿ ಅಭಿಪ್ರಾಯಪಟ್ಟಿದ್ದಾರೆ.

 ಅಕ್ಟೋಬರ್ 2015ರಲ್ಲಿ 17ರ ಹರೆಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿರುವ ರಶೀದ್ ಫೆಬ್ರವರಿಯಲ್ಲಿ ಟ್ವೆಂಟಿ-20 ಹಾಗೂ ಏಕದಿನ ಕ್ರಿಕೆಟ್ ಮಾದರಿಯಲ್ಲಿ ನಂ.1 ಬೌಲರ್ ಆಗಿ ಹೊರಹೊಮ್ಮಿದ ಮೊದಲ ಕಿರಿಯ ಕ್ರಿಕೆಟಿಗ ಎನಿಸಿಕೊಂಡಿದ್ದರು.

 ಸನ್‌ರೈಸರ್ಸ್ ತಂಡ ಕಳೆದ ವರ್ಷ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ 4 ಕೋಟಿ ರೂ.ಗೆ ರಶೀದ್‌ರನ್ನು ಖರೀದಿಸಿತ್ತು. ಈ ವರ್ಷ ನಡೆದ ಆಟಗಾರರ ಹರಾಜಿನಲ್ಲಿ ಸನ್‌ರೈಸರ್ಸ್ ತಂಡ ರೈಟ್-ಟು-ಮ್ಯಾಚ್ ಆಯ್ಕೆಯ ಮೂಲಕ 9 ಕೋ.ರೂ. ನೀಡಿ ರಶೀದ್‌ರನ್ನು ತಂಡದಲ್ಲೇ ಉಳಿಸಿಕೊಂಡಿತ್ತು. ರಶೀದ್ ಓರ್ವ ಅತ್ಯುತ್ತಮ ಆಟಗಾರ. ಕಳೆದ ವರ್ಷ ಹೈದರಾಬಾದ್ ತಂಡದಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದರು. ವಿಶ್ವದೆಲ್ಲೆಡೆ ನಡೆಯುತ್ತಿರುವ ವಿವಿಧ ಟೂರ್ನಿಗಳಲ್ಲೂ ತಮ್ಮ ಪ್ರದರ್ಶನ ಮಟ್ಟ ಉತ್ತಮಪಡಿಸಿಕೊಳ್ಳುತ್ತಿದ್ದಾರೆ. ಅವರು ದೇಶದ ಪರವಾಗಿಯೂ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ’’ ಎಂದು ಮೂಡಿ ಹೇಳಿದ್ದಾರೆ.

ರಶೀದ್ ಕಳೆದ ತಿಂಗಳು ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 100 ವಿಕೆಟ್ ಪೂರೈಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ದಾಖಲೆಯನ್ನು ಹಿಂದಿಕ್ಕಿದ್ದರು.

ಐಪಿಎಲ್ ಹಾಗೂ ಆಸ್ಟ್ರೇಲಿಯದ ಬಿಗ್ ಬ್ಯಾಶ್ ಸಹಿತ ವಿಶ್ವದಾದ್ಯಂತ ನಡೆಯುವ ಪ್ರಮುಖ ಟ್ವೆಂಟಿ-20 ಲೀಗ್‌ಗಳಲ್ಲಿ ರಶೀದ್ ಸ್ಟ್ರೈಕ್ ಬೌಲರ್ ಆಗಿ ಗಮನ ಸೆಳೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News