ಇಂಟರ್ನೆಟ್‌ನಲ್ಲಿ ಪ್ರತಿ ಕ್ಷಣವೂ ಅಮೂಲ್ಯ,ಅಲ್ಲಿ ಒಂದು ಸೆಕಂಡ್‌ನಲ್ಲಿ ಏನೇನಾಗುತ್ತದೆ ಎಂಬ ಮಾಹಿತಿಯಿಲ್ಲಿದೆ

Update: 2018-04-18 11:17 GMT

ಇಂಟರ್ನೆಟ್ ಅಥವಾ ಅಂತರ್ಜಾಲವು ಒಂದು ಅದ್ಭುತ ಜಗತ್ತು. ಇಂದು ಮನುಷ್ಯ ಅನ್ನಾಹಾರಗಳಿಲ್ಲದೆಯೂ ಬದುಕಬಲ್ಲ,ಆದರೆ ಇಂಟರ್ನೆಟ್ ಇಲ್ಲದೆ ಬದುಕುವುದಿಲ್ಲ ಎನ್ನುವ ಸ್ಥಿತಿಯಿದೆ. 

1960ರ ದಶಕದಲ್ಲಿ ಅಮೆರಿಕದಲ್ಲಿ ವಿವಿಧ ಇಲಾಖೆಗಳಲ್ಲಿಯ ಕಂಪ್ಯೂಟರ್‌ಗಳ ಪರಸ್ಪರ ಸಂಪರ್ಕಕ್ಕಾಗಿ ರೂಪಿಸಲಾಗಿದ್ದ ಪರಿಣಾಮಕಾರಿ ವ್ಯವಸ್ಥೆ ಶೀಘ್ರವೇ ಇಡೀ ಜಗತ್ತನ್ನೇ ಸಂಪರ್ಕಿಸುವ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳ ಸಂಕೀರ್ಣ ಜಾಲದ ರೂಪವನ್ನು ಪಡೆದುಕೊಂಡಿತ್ತು. ಈಗಂತೂ ವಿಶ್ವವು ಅಂತರ್ಜಾಲವನ್ನು ಬಳಸುವ ರೀತಿಯಲ್ಲಿ ಸಾಗರದಷ್ಟು ಬದಲಾವಣೆಯಾಗಿದೆ. ಇಂದು ಅಂತರ್ಜಾಲವಿಲ್ಲದಿದ್ದರೆ ಅವೆಷ್ಟೋ ಪ್ರಮುಖ ಕೆಲಸಗಳು ಸ್ಥಗಿತಗೊಳ್ಳುತ್ತವೆ.

ಸಾರಿಗೆ, ವೈದ್ಯಕೀಯ ಕ್ಷೇತ್ರ, ಬ್ಯಾಂಕಿಂಗ್, ವಿಮಾನಯಾನ, ಪತ್ರಿಕೋದ್ಯಮ,.....ಹೀಗೆ ಯಾವುದೇ ಕ್ಷೇತ್ರವನ್ನು ಹೆಸರಿಸಿದರೂ ಅದು ಒಂದಲ್ಲ ಒಂದು ವಿಧದಲ್ಲಿ ಅಂತರ್ಜಾಲವನ್ನು ಅವಲಂಬಿಸಿರುತ್ತದೆ. ಇಂತಹ ಅಂತರ್ಜಾಲ ಲೋಕದಲ್ಲಿ ಒಂದು ಸೆಕಂಡ್‌ನ ಅವಧಿಯಲ್ಲಿ ಏನೇನು ನಡೆದು ಹೋಗುತ್ತದೆ ಎನ್ನುವುದು ನಿಮಗೆ ಗೊತ್ತೇ...?

ಜನಪ್ರಿಯ ಸಾಮಾಜಿಕ ಮಾಧ್ಯಮವಾಗಿರುವ ಟ್ವಿಟರ್‌ನಲ್ಲಿ ಒಂದು ಸೆಕೆಂಡ್‌ನೊಳಗೆ ಸುಮಾರು 8,000 ಟ್ವೀಟ್‌ಗಳು ರವಾನೆಯಾಗುತ್ತವೆ. ನೀವು ಈ ಸಾಲನ್ನು ಓದುವಷ್ಟರಲ್ಲಿ ಈಗಾಗಲೇ ಸುಮಾರು 24,000 ಟ್ವೀಟ್‌ಗಳು ರವಾನೆಯಾಗಿಬಿಟ್ಟಿವೆ.

ಇನ್ನೊಂದು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿ ಒಂದು ಸೆಕೆಂಡ್‌ನಲ್ಲಿ ಸುಮಾರು 839 ಫೋಟೊಗಳು ಅಂತರ್ಜಾಲದಲ್ಲಿ ಅಪ್‌ಲೋಡ್ ಆಗುತ್ತವೆ.

ಟಂಬ್ಲರ್ ಕೂಡ ಒಂದು ಸಾಮಾಜಿಕ ಮಾಧ್ಯಮ. ಇಲ್ಲಿ ಪ್ರತಿ ಒಂದು ಸೆಕಂಡ್‌ನಲ್ಲಿ 1,364 ಟಂಬ್ಲರ್ ಪೋಸ್ಟ್‌ಗಳು ನಡೆಯುತ್ತವೆ.

ಸ್ಕೈಪ್‌ನಲ್ಲಿ ಪ್ರತಿ ಒಂದು ಸೆಕಂಡ್‌ನಲ್ಲಿ 3,085 ಕರೆಗಳು ನಡೆಯುತ್ತವೆ.

ಒಂದೇ ಒಂದು ಸೆಕೆಂಡ್‌ನಲ್ಲಿ ಅಂತರ್ಜಾಲವು 55,618 ಜಿಬಿಗಳಷ್ಟು ಮಾಹಿತಿ ಸಂಚಾರಕ್ಕೆ ಸಾಕ್ಷಿಯಾಗುತ್ತದೆ.

ಗೂಗಲ್ ಸರ್ಚ್‌ನಲ್ಲಿ ಒಂದು ಸೆಕಂಡ್‌ನಲ್ಲಿ ಸುಮಾರು 66,365 ವಿಚಾರಣೆಗಳು ದಾಖಲಾಗುತ್ತವೆ.

ಒಂದು ಸೆಕಂಡ್‌ನಲ್ಲಿ ಯು ಟ್ಯೂಬ್‌ನಲ್ಲಿ ಸುಮಾರು 73,411 ವೀಡಿಯೊಗಳನ್ನು ವೀಕ್ಷಿಸಲಾಗುತ್ತದೆ ಎಂದರೆ ಅಚ್ಚರಿಯಾಗು ತ್ತಿದೆಯೇ?

ಹಳೆಯ ಕಾಲದ ಅಂಚೆ ವಿಧಾನವನ್ನು ಮರೆಯುವಂತೆ ಮಾಡಿರುವ ಇ-ಮೇಲ್ ವ್ಯವಸ್ಥೆಯಲ್ಲಿ ಪ್ರತಿ ಒಂದು ಸೆಕಂಡ್‌ನಲ್ಲಿ 26,82,322 ಮೇಲ್‌ಗಳನ್ನು ಕಳುಹಿಸಲಾಗುತ್ತದೆ.

ನಂಬಿದರೆ ನಂಬಿ,ಬಿಟ್ಟರೆ ಬಿಡಿ....ನೀವು ಈ ಸಾಲುಗಳನ್ನು ಓದುವಷ್ಟರಲ್ಲಿ ವಿಶ್ವಾದ್ಯಂತ 80,46,966 ಇ-ಮೇಲ್‌ಗಳು ರವಾನೆಯಾಗಿವೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News