'ಮೌಲ್ಯಮಾಪನ ಕೇಂದ್ರಗಳಿಗೆ ಕಾಫಿ, ಟೀ ಉಡುಗೊರೆ ನೀಡಿ ರಾಜಕೀಯ ಪ್ರಚಾರಕ್ಕೆ ಆಸ್ಪದ ನೀಡಿದರೆ ಶಿಸ್ತು ಕ್ರಮ'

Update: 2018-04-18 18:21 GMT

ಬೆಂಗಳೂರು, ಎ.18: ಚುನಾವಣೆ ರಂಗೇರುತ್ತಿರುವುದರಿಂದ ಕೆಲ ಮುಖಂಡರು ಮೌಲ್ಯಮಾಪನ ಕೇಂದ್ರಗಳಿಗೆ ಉಚಿತವಾಗಿ ಕಾಫಿ-ಟೀ, ತಿಂಡಿ, ಊಟ, ಉಡುಗೊರೆ ಮತ್ತಿತರ ಕೊಡುಗೆಗಳನ್ನು ಕಳುಹಿಸುವ ಸಾಧ್ಯತೆ ಇರುತ್ತದೆ. ಮೌಲ್ಯಮಾಪಕರು ಅದನ್ನು ಸ್ವೀಕರಿಸಿ ರಾಜಕೀಯ ಪ್ರಚಾರಕ್ಕೆ ಆಸ್ಪದ ನೀಡಿದ್ದು ಕಂಡು ಬಂದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಚ್ಚರಿಕೆ ನೀಡಿದೆ.

ರಾಜ್ಯಾದ್ಯಂತ ಎಪ್ರಿಲ್‌ನ ಎರಡನೆ ವಾರದಲ್ಲಿ 228 ಕೇಂದ್ರಗಳಲ್ಲಿ ಎಸೆಸೆಲ್ಸಿ ಮೌಲ್ಯಮಾಪನ ಕಾರ್ಯ ನಡೆಯಲಿದ್ದು, ಪ್ರತಿ ಕೇಂದ್ರಕ್ಕೆ ಒಬ್ಬರಂತೆ ಜಂಟಿ ಮುಖ್ಯಸ್ಥರು, 6,551 ಉಪ ಮುಖ್ಯಸ್ಥರು, 58,923 ಸಹಾಯಕ ಮೌಲ್ಯ ಮಾಪಕರು ಸೇರಿ ಒಟ್ಟಾರೆ ಮೌಲ್ಯಮಾಪನ ಕಾರ್ಯದಲ್ಲಿ 65,715 ಸಿಬ್ಬಂದಿ ಕೆಲಸ ಮಾಡಲಿದ್ದಾರೆ. 

ಮೌಲ್ಯಮಾಪನ ಕೇಂದ್ರಕ್ಕೆ ಅಧಿಕೃತ ವ್ಯಕ್ತಿಗಳನ್ನು ಹೊರತು ಪಡಿಸಿ ಇತರರಿಗೆ ಕಡ್ಡಾಯವಾಗಿ ಪ್ರವೇಶ ನಿಷೇಧಿಸಿದೆ. ಎಲ್ಲ ಮೌಲ್ಯಮಾಪನ ಕೇಂದ್ರಗಳ ಸುತ್ತಲಿನ 200 ಮಿ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಗುರುತಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷದ ವ್ಯಕ್ತಿಗಳಾಗಲಿ ಮೌಲ್ಯಮಾಪನ ಕೇಂದ್ರ ಪ್ರವೇಶಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಲ್ಲದೆ, ಲೇಖಕರು- ಪ್ರಕಾಶಕರು ಪುಸ್ತಕ ಮಾರಾಟಕ್ಕಾಗಿ ಮೌಲ್ಯಮಾಪನ ಕೇಂದ್ರದ ಸುತ್ತಮುತ್ತ ಸುಳಿದಾಡುವಂತಿಲ್ಲ. ಈ ಎಲ್ಲದರ ಬಗ್ಗೆ ಮೌಲ್ಯಮಾಪಕರು ಕಟ್ಟುನಿಟ್ಟಾಗಿ ನಿಗಾ ವಹಿಸಬೇಕು ಎಂದು ಕಟ್ಟಾಜ್ಞೆ ವಿಧಿಸಲಾಗಿದೆ.

'ಚುನಾವಣೆ ಹಿನ್ನೆಲೆಯಲ್ಲಿ ಮೌಲ್ಯಮಾಪನ ಕೇಂದ್ರದ ಸುತ್ತಮುತ್ತ ಹೆಚ್ಚಿನ ಭದ್ರತೆ ಕಲ್ಪಿಸುವ ಜತೆಗೆ ಮೌಲ್ಯಮಾಪಕರಿಗೆ ಕೆಲವು ಸೂಚನೆ ನೀಡಿದ್ದೇವೆ, ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು’.
 -ವಿ. ಸುಮಂಗಲಾ, ನಿರ್ದೇಶಕಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News