ಜೆಡಿಎಸ್ ನ ದತ್ತರನ್ನು ಗೆಲ್ಲಿಸಲು ಅಪ್ರಯೋಜಕ ಆನಂದ್‌ಗೆ ಕಾಂಗ್ರೆಸ್ ಟಿಕೆಟ್: ಕಡೂರು ನಂಜಪ್ಪ
ಬೆಂಗಳೂರು, ಎ.18: ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ ಜೆಡಿಎಸ್‌ನ ದತ್ತರನ್ನು ಗೆಲ್ಲಿಸುವ ಸಲುವಾಗಿ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಅಪ್ರಯೋಜಿತ ಅಭ್ಯರ್ಥಿ ಆನಂದ್ ಎಂಬುವವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕಡೂರು ಸಿ.ನಂಜಪ್ಪ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡೂರು ಕ್ಷೇತ್ರದಲ್ಲಿ ಕಳೆದ 46 ವರ್ಷಗಳಿಂದ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಅಲ್ಲದೆ, ಕ್ಷೇತ್ರದಲ್ಲಿ ಶೂನ್ಯ ಸ್ಥಿತಿಯಲ್ಲಿದ್ದ ಪಕ್ಷವನ್ನು ಇಂದು ಪಕ್ಷದ ಭದ್ರಕೋಟೆಯಾಗಿ ಮಾಡಲು ಸಾಕಷ್ಟು ಶ್ರಮ ವಹಿಸಿದ್ದೇನೆ. ಆದರೂ, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿಲ್ಲ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಟಿಕೆಟ್ ತಪ್ಪಿಸಲಾಗಿತ್ತು ಎಂದು ದೂರಿದರು.
ಕಡೂರು ಕ್ಷೇತ್ರದಲ್ಲಿ ಯಾವುದೇ ಆಕಾಂಕ್ಷೆಯಿಲ್ಲದೆ ಪಕ್ಷಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ನನ್ನ ಪ್ರಯತ್ನದಿಂದಾಗಿ ಗ್ರಾಮ ಪಂಚಾಯತ್ ಚುನಾವಣೆಯಿಂದ ಜಿಲ್ಲಾ ಪಂಚಾಯತ್ ಚುನಾವಣೆವರೆಗೂ ಅತಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸಿದ್ದೇವೆ. 59 ಗ್ರಾಮ ಪಂಚಾಯತ್ ಗಳಲ್ಲಿ 36, 6 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ 5 ಹಾಗೂ 24 ತಾಲೂಕು ಪಂಚಾಯತ್ ಗಳಲ್ಲಿ 14 ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ, ಈ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಸಿಎಂಗೆ ಮನವಿ ಸಲ್ಲಿಸಿದ್ದ ಸಂದರ್ಭದಲ್ಲಿ ಅವರು ಭರವಸೆ ನೀಡಿದ್ದರು. ಆದರೆ, ಕೊನೆ ಹಂತದಲ್ಲಿ ಕೈ ಬಿಟ್ಟು, ತಮ್ಮ ಸ್ವಜಾತಿಯವರಾದ ಆನಂದ್ ಎಂಬುವವರಿಗೆ ಟಿಕೆಟ್ ಕೊಡಿಸಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಸದಸ್ಯರಲ್ಲದ ಬೇರೆ ಪಕ್ಷಗಳಿಂದ ಬರುವವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಕಾಂಗ್ರೆಸ್ಸನ್ನು ಸರ್ವನಾಶ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ವಲಸಿಗರಿಗೆ ಮಣೆ ಹಾಕುವ ಮೂಲಕ ಮೂಲ ಕಾಂಗ್ರೆಸಿಗರನ್ನು ಕಡೆಗಣಿಸುತ್ತಿದ್ದಾರೆ. ಹೀಗಾಗಿ, ನನಗೆ ಟಿಕೆಟ್ ನೀಡದೆ ವಂಚನೆ ಮಾಡಿದ್ದು, ಈ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಕೊನೆಯವರೆಗೂ ಕಾಯುತ್ತೇನೆ. ನನಗೆ ನ್ಯಾಯ ಸಿಗಲಿಲ್ಲ ಎಂದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.