ನರೋದಾ-ಪಾಟಿಯಾ ಗಲಭೆ ಪ್ರಕರಣ:ಬಿಜೆಪಿಯ ಮಾಜಿ ಸಚಿವೆ ಮಾಯಾ ಕೊಡ್ನಾನಿ ಖುಲಾಸೆ

Update: 2018-04-20 07:06 GMT

ಅಹ್ಮದಾಬಾದ್, ಎ.20: ಗುಜರಾತ್‌ನಲ್ಲಿ 2002ರಲ್ಲಿ ನಡೆದ ನರೋದಾ-ಪಾಟಿಯಾ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ಹೈಕೋರ್ಟ್ ಬಿಜೆಪಿಯ ಮಾಜಿ ಸಚಿವೆ ಮಾಯಾ ಕೊಡ್ನಾನಿಯವರನ್ನು ಖುಲಾಸೆಗೊಳಿಸಿದೆ. ಬಜರಂಗ ದಳದ ಮಾಜಿ ನಾಯಕ ಬಾಬು ಬಜರಂಗಿಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯ ತೀರ್ಪನ್ನು ಎತ್ತಿ ಹಿಡಿದಿದೆ.

ಪ್ರಕರಣದ ಪ್ರಮುಖ ಆರೋಪಿ ಕೊಡ್ನಾನಿ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪ ಹಾಗೂ ಘಟನಾ ಸ್ಥಳದಲ್ಲಿ ಇದ್ದರೆನ್ನುವುದು ಸಾಬೀತಾಗಿಲ್ಲ. 11 ಸಾಕ್ಷಿಗಳ ಪೈಕಿ ಒಬ್ಬರೂ ಕೂಡ ಕೊಡ್ನಾನಿ ವಿರುದ್ಧ ದೂರು ದಾಖಲಾದ ಸಂದರ್ಭದಲ್ಲಿ ಅವರ ಹೆಸರನ್ನು ಹೇಳಿಲ್ಲ. ಹೀಗಾಗಿ ಅವರು ಪ್ರಕರಣದಲ್ಲಿ ಖುಲಾಸೆಯಾಗಿದ್ದಾರೆ ಎಂದು ಗುಜರಾತ್ ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.

 2012ರ ಆಗಸ್ಟ್‌ನಲ್ಲಿ ವಿಶೇಷ ತನಿಖಾ ತಂಡದ(ಸಿಟ್) ವಿಶೇಷ ನ್ಯಾಯಾಧೀಶೆ ಜೋಶ್ನಾ ಯಾಗ್ನಿಕ್ ಅವರು ಕೊಡ್ನಾನಿ ಸಹಿತ 32 ಮಂದಿ ದೋಷಿಗಳು ಎಂದು ತೀರ್ಪು ನೀಡಿತ್ತು. ಕೊಡ್ನಾನಿಗೆ 28 ತಿಂಗಳ ಸೆರೆವಾಸ ವಿಧಿಸಿತ್ತು. ಬಜರಂಗ್‌ಗೆ ಜೀವವಾಧಿ ಶಿಕ್ಷೆ ಪ್ರಕಟಿಸಿತ್ತು. ಏಳು ಆರೋಪಿಗಳಿಗೆ 21 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಉಳಿದ ಆರೋಪಿಗಳಿಗೆ 14 ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಿತ್ತು. ಸಾಕ್ಷಿಗಳ ಕೊರತೆಯ ಕಾರಣ 29 ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು.

ಆರೋಪಿಗಳು ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಸಾಕ್ಷಿಗಳ ಕೊರತೆಯ ಕಾರಣ 29 ಆರೋಪಿಗಳನ್ನು ದೋಷಮುಕ್ತಗೊಳಿಸುವುದನ್ನು ಪ್ರಶ್ನಿಸಿ ಸಿಟ್ ಮೇಲ್ಮನವಿ ಸಲ್ಲಿಸಿತ್ತು.

ಇಂದು ನೀಡಿದ ತೀರ್ಪಿನಲ್ಲಿ ಗುಜರಾತ್ ಹೈಕೋರ್ಟ್ 31 ಆರೋಪಿಗಳ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಗೋಧ್ರಾ ಗಲಭೆ ನಡೆದ ಮರುದಿನ ನಡೆದಿರುವ ನರೋದಾ-ಪಾಟಿಯಾ ಹಿಂಸಾಚಾರದಲ್ಲಿ ಮಹಿಳೆಯರು-ಮಕ್ಕಳು ಸಹಿತ 97 ಜನರು ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News