ಜೋಕೆ, ಇವು ನಿಮ್ಮ ಯಕೃತ್ತಿಗೆ ಹಾನಿಯನ್ನುಂಟು ಮಾಡುತ್ತವೆ

Update: 2018-04-20 11:01 GMT

ಮದ್ಯಪಾನವೊಂದೇ ಯಕೃತ್ತಿಗೆ ಹಾನಿಯನ್ನುಂಟು ಮಾಡುತ್ತದೆ. ಮದ್ಯವನ್ನೇ ಸೇವಿಸದಿದ್ದರೆ ಯಕೃತ್ತಿಗೆ ಹಾನಿಯಾಗುವ ಪ್ರಶ್ನೆಯೇ ಇಲ್ಲ ಮತ್ತು ಅದು ಆರೋಗ್ಯಯುತವಾಗಿರುತ್ತದೆ ಎನ್ನುವುದನ್ನು ಹೆಚ್ಚಿನವರು ಗಟ್ಟಿಯಾಗಿ ನಂಬಿಕೊಂಡಿದ್ದಾರೆ.

ಆದರೆ ಯಕೃತ್ತಿಗೆ ಹಾನಿಯನ್ನುಂಟು ಮಾಡುವ ಇನ್ನೂ ಕೆಲವು ವಿಷಯ ಗಳಿವೆ ಮತ್ತು ಈಗಾಗಲೇ ಅವು ನಮ್ಮ ದಿನಚರಿಯಲ್ಲಿ ಸೇರಿಕೊಂಡಿವೆ ಎನ್ನುವ ಸತ್ಯ ಅಚ್ಚರಿಯನ್ನುಂಟು ಮಾಡಬಹುದು. ನಾವು ಬಳಸುತ್ತಿ ರುವ ಸಂಸ್ಕರಿತ ಸಕ್ಕರೆ ಇದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಿದೆ. ನಾವು ಆರೋಗ್ಯಕರವಾದ ಆಹಾರವನ್ನು ಸೇವಿಸದಿದ್ದರೆ ಮತ್ತು ಅತಿಯಾಗಿ ಆ್ಯಂಟಿಬಯಾಟಿಕ್‌ಗಳನ್ನು ಸೇವಿಸುತ್ತಿದ್ದರೆ ಅದೂ ಯಕೃತ್ತಿಗೆ ಹಾನಿಯನ್ನುಂಟು ಮಾಡಬಹುದು.

 ಜೀರ್ಣಕ್ರಿಯೆಯನ್ನು ಉತ್ತೇಜಿಸುವುದು,ಚಯಾಪಚಯ ವ್ಯವಸ್ಥೆ ಯನ್ನು ಉತ್ತಮಗೊಳಿಸುವುದು ಮತ್ತು ನಂಜುಗಳನ್ನು ಶರೀರದಿಂದ ಹೊರಹಾಕುವುದು ಯಕೃತ್ತಿನ ಪ್ರಮುಖ ಕಾರ್ಯಗಳಾಗಿವೆ. ನಾವು ಸೇವಿಸುವ ಪ್ರತಿಯೊಂದೂ ಯಕೃತ್ತಿನ ಮೂಲಕವೇ ಹಾದು ಹೋಗುತ್ತದೆ. ಹೀಗಾಗಿ ಯಕೃತ್ತು ಆರೋಗ್ಯಯುತವಾಗಿರಬೇಕೆಂದರೆ ಆರೋಗ್ಯಕರ ಜೀವನಶೈಲಿ ಮತ್ತು ಸಮತೋಲಿತ ಆಹಾರ ಅಗತ್ಯವಾಗಿದೆ.

ನಮ್ಮ ದಿನಚರಿಯಲ್ಲಿ ಸೇರಿಕೊಂಡಿರುವ,ಯಕೃತ್ತಿಗೆ ಹಾನಿಯನ್ನುಂಟು ಮಾಡುವ ಅಂಶಗಳ ಕುರಿತು ಮಾಹಿತಿಯಿಲ್ಲಿದೆ....

► ಖಿನ್ನತೆ ನಿವಾರಕಗಳು

 ಖಿನ್ನತೆಯ ನಿವಾರಣೆಗಾಗಿ ಔಷಧಿಗಳನ್ನು ಸೇವಿಸುತ್ತಿರುವವರು ಯಕೃತ್ ಸಮಸ್ಯೆಯ ಸಣ್ಣ ಸುಳಿವು ಕಂಡುಬಂದರೂ ತಕ್ಷಣವೇ ತಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಕೆರಳುವಿಕೆ,ಬಳಲಿಕೆ ಇತ್ಯಾದಿಗಳು ಅತಿಯಾಗಿ ಖಿನ್ನತೆ ನಿವಾರಕಗಳ ಸೇವನೆಯ ಲಕ್ಷಣಗಳಾಗಿವೆ. ಏಕೆಂದರೆ ಖಿನ್ನತೆ ನಿವಾರಕಗಳಲ್ಲಿಯ ರಾಸಾಯನಿಕಗಳು ಯಕೃತ್ತಿಗೆ ಹಾನಿಯ ನ್ನುಂಟು ಮಾಡುತ್ತವೆ. ಇದನ್ನು ಹೆಪಟೋಟೊಕ್ಸಿಸಿಟಿ ಎಂದು ಕರೆಯುತ್ತಾರೆ.

► ಮೃದು ಪಾನೀಯಗಳು

 ಮೃದು ಪಾನೀಯಗಳು ಕೃತಕ ಸಿಹಿಕಾರಕಗಳನ್ನೊಳಗೊಂಡಿರುತ್ತವೆ ಎನ್ನುವುದೇ ಸಮಸ್ಯೆ. ಈ ಪೈಕಿ ಹೆಚ್ಚಿನವು ಇಂಗಾಲೀಕೃತ ಪಾನೀಯ ಗಳಾಗಿರುತ್ತವೆ,ಅಂದರೆ ಅಂಗಾರಾಮ್ಲವನ್ನು ಒಳಗೊಂಡಿರುತ್ತವೆ. ಇವೆರಡೂ ಯಕೃತ್ತಿಗೆ ಆರೋಗ್ಯಕರವಲ್ಲ. ಹೆಚ್ಚಿನ ವಿಧಗಳ ಸಕ್ಕರೆ ಯಲ್ಲಿರುವ ಫ್ರುಕ್ಟೋಸ್ ಯಕೃತ್ತಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತದೆ.

► ಪ್ಯಾಕ್ ಮಾಡಲಾದ ಆಹಾರ

ಹೆಚ್ಚಿನ ಪ್ಯಾಕೇಜ್ಡ್ ಆಹಾರಗಳು ಟ್ರಾನ್ಸ್‌ಫ್ಯಾಟ್‌ಗಳನ್ನು ಒಳಗೊಂಡಿದ್ದು ಇವು ಆರೋಗ್ಯಕ್ಕೆ ಮತ್ತು ಯಕೃತ್ತಿಗೆ ಒಳ್ಳೆಯದಲ್ಲ. ಫ್ರೆಂಚ್ ಫ್ರೈಸ್,ಚಿಪ್ಸ್ ಮತ್ತು ಬರ್ಗರ್ ಇತ್ಯಾದಿಗಳು ಈ ಗುಂಪಿಗೆ ಸೇರಿವೆ. ಅಧಿಕ ಸ್ಯಾಚ್ಯುರೇಟೆಡ್ ಫ್ಯಾಟ್‌ಗಳಿರುವ ಆಹಾರದ ಅತಿಯಾದ ಸೇವನೆ ಯಿಂದಾಗಿ ಯಕೃತ್ತು ಹೆಚ್ಚಿನ ಶ್ರಮವನ್ನು ಪಡಬೇಕಾಗುತ್ತದೆ. ಕಾಲಕ್ರಮೇಣ ಇದು ಸಿರೋಸಿಸ್‌ಗೆ ಕಾರಣವಾಗುವ ಉರಿಯೂತ ವನ್ನುಂಟು ಮಾಡುತ್ತದೆ.

► ಉಪ್ಪು

 ಉಪ್ಪು ಅಧಿಕವಾಗಿರುವ ಆಹಾರಗಳು ಕೂಡ ಫ್ಯಾಟಿ ಲಿವರ್ ಕಾಯಿಲೆಗೆ ಕಾರಣವಾಗುತ್ತವೆ ಎನ್ನುವುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಅತಿಯಾದ ಉಪ್ಪಿನ ಸೇವನೆ ವಯಸ್ಕರಲ್ಲಿ ಯಕೃತ್ತಿಗೆ ಹಾನಿಯನ್ನುಂಟು ಮಾಡುತ್ತದೆ. ಹೃದ್ರೋಗ ಮತ್ತು ಆಘಾತಕ್ಕೆ ಮುಖ್ಯ ಕಾರಣವಾಗಿರುವ ರಕ್ತದೊತ್ತಡಕ್ಕೂ ಅತಿಯಾದ ಉಪ್ಪಿನ ಸೇವನೆಗೂ ಹತ್ತಿರದ ನಂಟಿದೆ. ಅಲ್ಲದೆ ಅತಿಯಾದ ಉಪ್ಪಿನ ಸೇವನೆ ಫೈಬ್ರೋಸಿಸ್‌ಗೆ ಸಂಬಂಧಿಸಿದ ಯಕೃತ್ತಿನ ಕೋಶಗಳಲ್ಲಿ ಬದಲಾವಣೆಗಳಿಗೂ ಕಾರಣವಾಗುತ್ತದೆ. ಹೀಗಾಗಿ ಸೇವಿಸುವ ಆಹಾರದಲ್ಲಿ ಉಪ್ಪು ಕಡಿಮೆ ಪ್ರಮಾಣದಲ್ಲಿದ್ದರೆ ಒಳ್ಳೆಯದು.

► ಜಂಕ್ ಫುಡ್

ಜಂಕ್ ಪುಡ್‌ಗಳು ಯಕೃತ್ತಿಗೆ ಖಂಡಿತ ಹಾನಿಯನ್ನುಂಟು ಮಾಡುವ ಅತ್ಯಂತ ಅನಾರೋಗ್ಯಕರ ಆಹಾರಗಳಲ್ಲಿ ಸೇರಿವೆ. ಕರಿದ ಆಹಾರಗಳಲ್ಲಿ ಕೊಬ್ಬು ಮತ್ತು ಸಕ್ಕರೆಯ ಅಂಶಗಳಿರುವುದರಿಂದ ಅವುಗಳಿಂದ ದೂರ ಉಳಿಯುವುದು ಅಗತ್ಯ. ಜಂಕ್ ಫುಡ್‌ಗಳ ಸೇವನೆ ಕಾಲಕ್ರಮೇಣ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಇದು ಸಿರೋಸಿಸ್‌ನ್ನುಂಟು ಮಾಡುತ್ತದೆ.

► ಬೊಜ್ಜು

  ಬೊಜ್ಜು ಫ್ಯಾಟಿ ಲಿವರ್ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಅದು ಟೈಪ್ 2 ಮಧುಮೇಹ,ಇನ್ಸುಲಿನ್ ಪ್ರತಿರೋಧ, ಹೃದ್ರೋಗ, ಹೆಚ್ಚಿನ ರಕ್ತದೊತ್ತಡ,ಸಂಧಿವಾತ,ಪಿತ್ಥಕಲ್ಲು,ಕರುಳಿನ ಕ್ಯಾನ್ಸರ್,ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಇತ್ಯಾದಿ ಗಂಭೀರ ಸಮಸ್ಯೆಗಳ ಅಪಾಯವನ್ನೂ ಹೆಚ್ಚಿಸುತ್ತದೆ. ಯಕೃತ್ತಿನಲ್ಲಿ ಕೊಬ್ಬು ಸಂಗ್ರಹಗೊಳ್ಳುವುದರಿಂದ ಉಂಟಾಗುವ ಹಲವಾರು ಸಮಸ್ಯೆಗಳಿಗೆ ನಾನ್ ಅಲ್ಕೋಹಾಲಿಕ್ ಫ್ಯಾಟಿ ಲಿವರ್ ಕಾಯಿಲೆಯೆಂದು ಕರೆಯಲಾಗುತ್ತದೆ ಮತ್ತು ಇದು ಸಾಮಾನ್ಯ ವಾಗಿ ಬೊಜ್ಜು ಅಥವಾ ಅತಿಯಾದ ದೇಹತೂಕ ಹೊಂದಿರುವ ವ್ಯಕ್ತಿಗಳಲ್ಲಿ ಕಂಡು ಬರುತ್ತದೆ.

► ವಿಟಾಮಿನ್ ಎ ಪೂರಕಗಳು

 ವಿಟಾಮಿನ್ ಎ ಪೂರಕಗಳು ಯಕೃತ್ತಿಗೆ ಹಾನಿಯನ್ನುಂಟು ಮಾಡುತ್ತವೆ ಎನ್ನುವುದು ಅಚ್ಚರಿಯನ್ನುಂಟು ಮಾಡಬಹುದು. ಹೌದು, ಅತಿಯಾದ ವಿಟಾಮಿನ್ ಸೇವನೆ ಮತ್ತು ನಿಯಾಸಿನ್‌ನ ಅಧಿಕ ಡೋಸ್ ಯಕೃತ್ತಿಗೆ ಹಾನಿಯನ್ನುಂಟು ಮಾಡುತ್ತವೆ. ದಿನಕ್ಕೆ 3000 ಮೈಕ್ರೋಗ್ರಾಮ್‌ಗಿಂತ ಅಧಿಕ ವಿಟಾಮಿನ್ ಎ ಸೇವನೆ ಯಕೃತ್ತಿಗೆ ಒಳ್ಳೆಯದಲ್ಲ.

► ಸಕ್ಕರೆ

 ಸಂಸ್ಕರಿತ ಸಕ್ಕರೆಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅದು ಫ್ಯಾಟಿ ಲಿವರ್ ಕಾಯಿಲೆಗೆ ಕಾರಣವಾಗುತ್ತದೆ. ಕೊಬ್ಬನ್ನು ತಯಾರಿಸಲು ಯಕೃತ್ತು ಫ್ರುಕ್ಟೋಸ್‌ನ್ನು ಬಳಸುತ್ತದೆ. ಹೆಚ್ಚುವರಿ ಸಂಸ್ಕರಿತ ಸಕ್ಕರೆ ಮತ್ತು ಫ್ರುಕ್ಟೋಸ್ ಹೆಚ್ಚು ಕೊಬ್ಬು ಸಂಗ್ರಹಗೊಳ್ಳಲು,ತನ್ಮೂಲಕ ಯಕೃತ್ತಿನ ಕಾಯಿಲೆಗೆ ಕಾರಣವಾಗುತ್ತವೆ. ಹೀಗಾಗಿ ಸಂಸ್ಕರಿತ ಸಕ್ಕರೆಯ ಬದಲು ಸಾವಯವ ಜೇನು ಅಥವಾ ಕಂದು ಸಕ್ಕರೆಯಂತಹ ಆರೋಗ್ಯಕರ ಪರ್ಯಾಯಗಳ ಬಳಕೆಯನ್ನು ಅಭ್ಯಾಸ ಮಾಡಿಕೊಳ್ಳಿ.

► ವಿಟಾಮಿನ್ ಡಿ ಪೂರಕಗಳು

ವಿಟಾಮಿನ್ ಡಿ ಮೂಳೆಗಳಿಗೆ ಕ್ಯಾಲ್ಸಿಯಂ ಒದಗಿಸಲು ಅಗತ್ಯವಾಗಿದೆ ಯಾದರೂ ಪೂರಕಗಳ ರೂಪದಲ್ಲಿ ಅದರ ಅತಿಯಾದ ಸೇವನೆ ಯಕೃತ್ತಿಗೆ ಹಾನಿಯನ್ನುಂಟು ಮಾಡಬಹುದು. ದಿನಕ್ಕೆ 1250 ಮೈಕ್ರೋಗ್ರಾಂ ಮತ್ತು ಅದಕ್ಕಿಂತ ಹೆಚ್ಚಿನ ವಿಟಾಮಿನ್ ಡಿ ಪೂರಕಗಳ ಸೇವನೆಯು ಯಕೃತ್ತಿನಲ್ಲಿ ನಂಜಿನ ಅಂಶವನ್ನು ಹೆಚ್ಚಿಸುತ್ತದೆ.

► ಕೆಂಪು ಮಾಂಸ

 ಕೆಂಪು ಮಾಂಸವು ಅಧಿಕ ಪ್ರೋಟಿನ್‌ನ್ನು ಒಳಗೊಂಡಿದೆಯಾದರೂ ಅಧಿಕ ಕೊಬ್ಬನ್ನೂ ಹೊಂದಿದೆ ಮತ್ತು ಇದು ಯಕೃತ್ತಿಗೆ ತೊಂದರೆಯನ್ನುಂಟು ಮಾಡುತ್ತದೆ. ಅದರಲ್ಲಿಯ ಸ್ಯಾಚುರೇಟೆಡ್ ಫ್ಯಾಟ್‌ಗಳು ಕೊಲೆಸ್ಟ್ರಾಲ್‌ನ್ನು ಹೆಚ್ಚಿಸುತ್ತವೆ,ಯಕೃತ್ತಿನ ಕಾಯಿಲೆ ಮತ್ತು ಹೃದ್ರೋಗಗಳ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತವೆ. ನಿಮ್ಮ ಜೀರ್ಣಾಂಗಕ್ಕೆ ಕೆಂಪು ಮಾಂಸವನ್ನು ಸೂಕ್ತವಾಗಿ ವಿಭಜಿಸಲು ಸಾಧ್ಯವಾಗದಿದ್ದರೆ ಮತ್ತು ನೀವು ಅರಗಿಸಿಕೊಳ್ಳಲು ಸಾಧ್ಯವಾಗದಷ್ಟು ಕೆಂಪು ಮಾಂಸವನ್ನು ಸೇವಿಸುತ್ತಿದ್ದರೆ ತ್ಯಾಜ್ಯ ಉತ್ಪನ್ನಗಳು ಯಕೃತ್ತಿನಲ್ಲಿ ಸಂಗ್ರಹಗೊಳ್ಳುತ್ತವೆ. ಹೀಗಾಗಿ ಕೆಂಪು ಮಾಂಸದ ಸೇವನೆಗೆ ಒಂದು ಮಿತಿಯಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News