ಮತದಾನ ಮಾಡುವಂತೆ ಪ್ರೇರೇಪಿಸಲು ವಿಶಿಷ್ಟ ವಿವಾಹ ಆಮಂತ್ರಣ ಪತ್ರಿಕೆ ಮಾಡಿದ ಜೋಡಿ
ಬೆಂಗಳೂರು,ಎ.20 : ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸಲು ಸರಕಾರ ಹಲವು ಕಾರ್ಯಯೋಜನೆಗಳನ್ನು ಹಾಕಿಕೊಂಡಂತೆಯೇ ಎ.27ರಂದು ವಿವಾಹವಾಗಲಿರುವ ಹಾನಗಲ್ ನ ಸಿದ್ದಪ್ಪ ದೊಡ್ಡಚಿಕ್ಕಣ್ಣನವರ್ ಹಾಗೂ ರಾಣೆಬೆನ್ನೂರಿನ ಜ್ಯೋತಿಯ ಮದುವೆ ಆಮಂತ್ರಣ ಪತ್ರಿಕೆಯೂ ಈ ನಿಟ್ಟಿನಲ್ಲಿ ತನ್ನದೇ ಕೊಡುಗೆ ನೀಡಿದೆ.
ಸಾಮಾಜಿಕ ಕಾರ್ಯಕರ್ತರೂ ಆಗಿರುವ ಸಿದ್ದಪ್ಪ ತಮ್ಮ ವಿವಾಹ ಆಮಂತ್ರಣ ಪತ್ರಿಕೆಯ ಮೂಲಕ ಮತದಾರರಲ್ಲಿ ಜಾಗೃತಿಯುಂಟು ಮಾಡಲು ಬಯಸಿದ್ದಾರೆ. ಅದಕ್ಕೆಂದೇ ಅವರ ವಿವಾಹ ಆಮಂತ್ರಣ ಪತ್ರಿಕೆ ಮತದಾರರ ಗುರುತು ಪತ್ರವನ್ನೇ ಹೋಲುತ್ತಿದೆ.
ಕನ್ನಡ ಭಾಷೆಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿದ ಕನ್ನಡ ಸೃಜನಶೀಲ ಬಳಗ ಇದರ ರಾಜ್ಯ ಅಧ್ಯಕ್ಷರಾಗಿರುವ ಹಾಗೂ ಗೋವಾದಲ್ಲಿ ಭಾರತೀಯ ರೈಲ್ವೆ ಅಧಿಕಾರಿಯಾಗಿರುವ ಸಿದ್ದಪ್ಪ ಪೊಲೀಸ್ ಕಾನ್‍ಸ್ಟೇಬಲ್ ಆಗಿರುವ ತಮ್ಮ ಸ್ನೇಹಿತ ಕರಿಬಸಪ್ಪ ಗೊಂಡಿ ಅವರ ಜತೆ ಚರ್ಚಿಸಿ ಮತದಾರರ ಗುರುತು ಪತ್ರವನ್ನೇ ಹೋಲುವಂತಹ ವಿವಾಹ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದಾರೆ.
ಅವರ ಆಮಂತ್ರಣ ಪತ್ರಿಕೆಯಲ್ಲಿ ಮತದಾರರ ಗುರುತು ಪತ್ರದಲ್ಲಿರುವ ಚುನಾವಣಾ ಆಯೋಗದ ಲಾಂಛನವಿರುವಡೆ ರಾಷ್ಟ್ರ ಲಾಂಛನದ ಚಿತ್ರವಿದ್ದು ಯುನೀಕ್ ಕೋಡ್ ಆಗಿ ಎಸ್‍ಜೆಎಂಆರ್ ಜಿ 270422018 ಆಗಿದೆ. ಇದು ಅವರಿಬ್ಬರ ಹೆಸರು ಹಾಗೂ ಮದುವೆ ದಿನಾಂಕವನ್ನು ಸೂಚಿಸುತ್ತದೆ.
ಆಮಂತ್ರಣ ಪತ್ರಿಕೆಯ ಒಂದು ಭಾಗದಲ್ಲಿ ವರ ಹಾಗೂ ವಧುವಿನ ಹೆಸರು, ವಿವಾಹದ ಸ್ಥಳ, ದಿನಾಂಕ ಮತ್ತು ವಧೂವರರ ಚಿತ್ರಗಳಿದ್ದರೆ, ಇನ್ನೊಂದು ಮಗ್ಗುಲಲ್ಲಿ ಕುಟುಂಬ ಸ್ನೇಹಿತ ವರ್ಗಕ್ಕೆ ಮದುವೆಗೆ ಆಮಂತ್ರಿಸುವ ಜತೆಗೆ ಜವಾಬ್ದಾರಿಯಿಂದ ಮತದಾನ ಮಾಡುವಂತೆಯೂ ಆಗ್ರಹಿಸಲಾಗಿದೆ.
ನಿಮ್ಮ ಮತ ಅಮೂಲ್ಯ ಎಂದೂ ಬರೆಯಲಾಗಿದೆ. ರಕ್ತದಾನದ ಮಹತ್ವವನ್ನೂ ಅದು ಸಾರಿ ಹೇಳಿದ್ದು ಜತೆಗೆ ತಮ್ಮ ಮತಗಳನ್ನು ಮಾರಾಟ ಮಾಡದಂತೆಯೂ ಜನರನ್ನು ಆಗ್ರಹಿಸಲಾಗಿದೆ.
ತಮ್ಮ ವಿವಾಹ ಆಮಂತ್ರಣ ಪತ್ರಿಕೆಯನ್ನು ಮತದಾರರ ಗುರುತು ಪತ್ರದಂತೆ ಮುದ್ರಿಸಲು ದಂಪತಿ ಜಿಲ್ಲಾಧಿಕಾರಿಯ ಪೂರ್ವಾನುಮತಿ ಪಡೆದಿದ್ದಾರೆಂದು ತಿಳಿದು ಬಂದಿದೆ.