ಅಮಿತ್ ಶಾ ರಾಜ್ಯಕ್ಕೆ ಬರುವುದು ಪ್ರೀತಿ, ಕಾಳಜಿಯಿಂದಲ್ಲ: ಕೆ.ಜೆ.ಜಾರ್ಜ್

Update: 2018-04-20 13:41 GMT

ಬೆಂಗಳೂರು, ಎ.20: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರ್ನಾಟಕ್ಕೆ ಬರುವುದು ರಾಜ್ಯದ ಮೇಲಿನ ಪ್ರೀತಿ, ಕಾಳಜಿಯಿಂದಲ್ಲ, ಸುಳ್ಳಿನ ರಾಜಕೀಯಕ್ಕಾಗಿ ಮಾತ್ರ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಆರೋಪಿಸಿದರು.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾಗೆ ರಾಜ್ಯದ ಕುರಿತು ಏನೇನೂ ಗೊತ್ತಿಲ್ಲ. ಆ ಕುರಿತು ತಿಳಿದುಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಆದರೂ ಬೆಂಗಳೂರಿನ ಕುರಿತು ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಇವರ ಸುಳ್ಳಿನ ಪ್ರಚಾರ ಹಿಟ್ಲರ್‌ನ ಮಾಧ್ಯಮ ಸಲಹೆಗಾರ ಗೊಬೆಲ್ಸ್‌ನಂತಿದೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಆಡಳಿತದಲ್ಲಿ ಬೆಂಗಳೂರಿನಲ್ಲಾಗಿರುವ ಸಮಗ್ರ ಅಭಿವೃದ್ಧಿಯ ಕುರಿತು ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಅಮಿತ್ ಶಾಗೆ ಕಳಿಸಿಕೊಡುತ್ತೇನೆ. ಅದನ್ನು ಗಂಭೀರವಾಗಿ ಅಧ್ಯಯನ ಮಾಡಿ ಟೀಕೆ, ಟಿಪ್ಪಣಿ ಮಾಡಲಿ. ಕೇವಲ ಸುಳ್ಳಿನ ಪ್ರಚಾರ ಮಾಡಿ ಜನತೆಯನ್ನು ದಾರಿತಪ್ಪಿಸುವುದು ಬೇಡವೆಂದು ಅವರು ಹೇಳಿದರು.

ಬಿಜೆಪಿ ಆಡಳಿತದಲ್ಲಿ ಬೆಂಗಳೂರು ಗಾರ್ಬೆಜ್ ಸಿಟಿಯೆಂದು ಕುಖ್ಯಾತಿ ಪಡೆದಿತ್ತು. ರಾತ್ರಿ ಸಮಯದಲ್ಲಿ ಟೆಂಡರ್‌ಗಳಿಗೆ ಅನುಮೋದನೆ ನೀಡಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟು ಬಿಬಿಎಂಪಿಯನ್ನು ಸಾಲದಲ್ಲಿ ಮುಳುಗಿಸಿತ್ತು. ಆದರೆ, ಕಾಂಗ್ರೆಸ್ ಆಡಳಿತದಲ್ಲಿ ಬಿಬಿಎಂಪಿಯ ಎಲ್ಲ ಸಾಲಗಳನ್ನು ತೀರಿಸಿ, ಕಸದ ನಿರ್ವಹಣೆಗೆ ತ್ಯಾಜ್ಯ ನಿರ್ವಹಣೆ ಘಟಕಗಳನ್ನು ನಿರ್ಮಿಸಲಾಗಿದೆ. ಬೆಂಗಳೂರಿನ ಮುಖ್ಯ ರಸ್ತೆಗಳನ್ನು ಟೆಂಡರ್ ಶ್ಯೂರ್ ರಸ್ತೆಗಳನ್ನಾಗಿ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.

ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಸರಕಾರ 350 ಕೋಟಿ ರೂ. ನೀಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ. ಈಗಾಗಲೆ ನೂರಕ್ಕೂ ಹೆಚ್ಚು ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, ಕೇಂದ್ರ ಸರಕಾರ ಒಂದು ಕೋಟಿ ರೂ. ಕೂಡಾ ನೀಡಿಲ್ಲ. ಆದರೆ, ರಾಜಕೀಯ ಭಾಷಣಗಳಲ್ಲಿ ಮೆಟ್ರೋ ರೈಲು ಯೋಜನೆ ನಮ್ಮ ಆಡಳಿತದಲ್ಲಿ ಜಾರಿಗೆ ಬಂತು. ಸಬ್ ಅರ್ಬನ್ ಯೋಜನೆಗೆ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿದೆ ಎಂದು ಸುಳ್ಳು ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು. ಕಾರ್ಯಕ್ರಮದಲ್ಲಿ ಜನಹಿತ ಪಕ್ಷದ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಈ ವೇಳೆ ಕಾಂಗ್ರೆಸ್‌ನ ರಾಷ್ಟ್ರೀಯ ಮಾಧ್ಯಮ ಸಂಯೋಜಕಿ ಪ್ರಿಯಾಂಕಾ ಚತುರ್ವೇದಿ ಉಪಸ್ಥಿತರಿದ್ದರು.

ಬಸವ ಜಯಂತಿಯೆಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಕಿದ ಹೂ ಮಾಲೆಯನ್ನು ಶಿವಶರಣ ಬಸವಣ್ಣನೆ ತಿರಸ್ಕರಿಸಿದ್ದಾನೆ. ಅಮಿತ್ ಶಾಗೆ ಶಿವಶರಣ ಬಸವಣ್ಣನ ತತ್ವಗಳ ಕುರಿತು ಅಂತರಂಗದಲ್ಲಿ ಗೌರವವಿದ್ದರೆ ಹಾರವನ್ನು ಎಸೆಯುತ್ತಿರಲಿಲ್ಲ. ಬಸವಣ್ಣನ ಪಾದಕ್ಕೆ ಗೌರವದಿಂದ ನಮಿಸುತ್ತಿದ್ದರು ಎಂದು ತಿಳಿಸಿದರು. ಕೇವಲ ತೋರಿಕೆಗಾಗಿ ಅಮಿತ್ ಶಾ ಬಸವ ಜಯಂತಿಯೆಂದು ಬಸವಣ್ಣನಿಗೆ ನಮಿಸಲು ಹೋಗಿದ್ದಾರೆ. ಅವರ ಸುಳ್ಳಿನ ಪ್ರಚಾರಕ್ಕೆ ಬಸವಣ್ಣ ತಕ್ಕ ಪ್ರತಿಕ್ರಿಯೆಯನ್ನು ಕೊಟ್ಟಿದ್ದಾರೆ. ಇನ್ನು ಮುಂದಾದರು ರಾಜ್ಯ ಹಾಗೂ ಬೆಂಗಳೂರು ಕುರಿತು ಸರಿಯಾಗಿ ತಿಳಿದುಕೊಂಡು ಮಾತನಾಡಲಿ.

- ಕೆ.ಜೆ.ಜಾರ್ಜ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News