ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿಗೂಡಿಸಿ: ಪ್ರಕಾಶ್‌ ರೈ

Update: 2018-04-20 14:04 GMT

ಬೆಂಗಳೂರು, ಎ.20: ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಗಂಭೀರ ಅಪರಾಧ ಪ್ರಕರಣ ಹಾಗೂ ಹೇರಿಕೆ ಸಂಸ್ಕೃತಿ ವಿರುದ್ಧ ಧ್ವನಿಗೂಡಿಸಿ ಎಂದು ಬಹುಭಾಷಾ ನಟ, ಚಿಂತಕ ಪ್ರಕಾಶ್ ರೈ ಕರೆ ನೀಡಿದರು.

ಶುಕ್ರವಾರ ನಗರದ ಅರಮನೆ ರಸ್ತೆಯ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ, ಶೈಕ್ಷಣಿಕ ಸಾಲಿನ ವಾರ್ಷಿಕ ಚಟುವಟಿಕೆಗಳ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದುಷ್ಕೃತ್ಯಗಳು, ದೌರ್ಜನ್ಯಗಳಿಗೆ ಅಂತ್ಯ ಕಾಣಿಸಬೇಕಿದೆ ಎಂದರು.

ಹೆಣ್ಣು ಮಕ್ಕಳು ಬೃಹತ್ ಶಕ್ತಿಯಾಗಿ ರೂಪುಗೊಳ್ಳಬೇಕು. ಇಂದಿನ ಆಗು ಹೋಗುಗಳನ್ನು ಅರಿಯಬೇಕು. ಪ್ರಶ್ನಾರ್ಹ ಮನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಯಶಸ್ಸು ಸಾಧಿಸುವ ಜತೆಗೆ ಇನ್ನಷ್ಟು ಜಾಗೃತರಾಗಬೇಕು ಎಂದ ಅವರು, ಈ ದೇಶದ ಉತ್ತಮ ಭವಿಷ್ಯ ಹೆಣ್ಣು ಮಕ್ಕಳು, ಮಹಿಳೆಯರನ್ನು ಅವಲಂಬಿಸಿದೆ. ನನಗೆ ನನ್ನ ತಾಯಿಯೇ ಸ್ಫೂರ್ತಿ ಎಂದು ನುಡಿದರು.

ಗಂಡಸರಿಗಿಂತಲೂ ಹೆಣ್ಣು ಮಕ್ಕಳಿಗೆ ಜವಾಬ್ದಾರಿ ಹೆಚ್ಚು. ಇಂದಿನ ಜನನಾಯಕರು ಅಥವಾ ಯಾವುದೇ ಸಂಸ್ಥೆಗಳನ್ನು ನಡೆಸುವವರು ತೆಗೆದುಕೊಳ್ಳುವ ನಿರ್ಧಾರ ಜನಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ದೇಶದಲ್ಲಿ ಒಬ್ಬ ಹೆಣ್ಣು ಮಗಳು ವಿದ್ಯಾವಂತಳಾಗಿ ವಿಚಾರಗಳನ್ನು ಸೂಕ್ಷ್ಮವಾಗಿ ಗ್ರಹಿಸುವಂತವಳಾಗಬೇಕು, ಯೋಚಿಸುವಂತವಳಾಗಬೇಕು. ಗ್ರಹಿಕೆಯಿಂದ ಪ್ರತಿಭಟನೆ ತೋರುವಂತಹ ದಿಟ್ಟ ಮಹಿಳೆ ಆರೋಗ್ಯ ಸಮಾಜ ಹಾಗೂ ದೇಶದ ನಿಜವಾದ ಶಕ್ತಿ ಎಂದು ಹೇಳಿದರು.

ನನ್ನ ದೇಶದ ಯುವಜನರು ನೀವು. ದೇಶಕ್ಕೆ ಅತ್ಯಗತ್ಯವಾದ ಶಕ್ತಿವಂತರು. ನನಗೆ ಯುವಜನರು ಮತ ಬ್ಯಾಂಕ್ ಅಲ್ಲ. ಜೀವನದಲ್ಲಿ ಓದು, ವೃತ್ತಿ ಮಾತ್ರ ಮುಖ್ಯವಲ್ಲ. ನಾನು ಕೇವಲ ವೃತ್ತಿಗಾಗಿ ಓದಿದ್ದರೆ ನಿಮ್ಮೆಲ್ಲರ ಮನಸ್ಸನ್ನು ಗೆಲ್ಲುತ್ತಿರಲಿಲ್ಲ. ವಿದ್ಯಾರ್ಥಿಗಳು ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು. ಜತೆಗೆ ಸದಭಿರುಚಿಯ ನಾಟಕ, ಸಿನಿಮಾಗಳನ್ನು ನೋಡಬೇಕು. ದಿನಂಪ್ರತಿ ಪತ್ರಿಕೆಗಳನ್ನು ಓದಬೇಕು.ವಿದ್ಯೆ ಕೆಲಸ, ಹಣ ಸಂಪಾದನೆಗೆ ಸೀಮಿತಗೊಳ್ಳುತ್ತದೆ. ಆದರೆ, ನಮ್ಮ ಸುತ್ತಮುತ್ತಲಿನ ಬದುಕನ್ನು ಅರ್ಥ ಮಾಡಿಸುವುದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಾಯಕ ರಘು ದೀಕ್ಷಿತ್, ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಟಿ.ಮಂಜುನಾಥ್ ಇನ್ನಿತರೆ ವಿಭಾಗಗಳ ಸಂಚಾಲಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News