ಕೋಮು ವಿಷಬೀಜ ಬಿತ್ತುವ ಬಿಜೆಪಿಯಿಂದ ದೇಶಕ್ಕೆ ಗಂಡಾಂತರ: ನಟ ಪ್ರಕಾಶ್ ರೈ

Update: 2018-04-20 14:58 GMT

ಬೆಂಗಳೂರು, ಎ. 20: ಬಿಜೆಪಿ ಜನರಲ್ಲಿ ಕೋಮು ವಿಷ ಬೀಜ ಬಿತ್ತುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ದೇಶ ದೊಡ್ಡ ಗಂಡಾಂತರ ಎದುರಿಸಲಿದೆ. ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳೇ ಅದಕ್ಕೆ ಪುರಾವೆಯಾಗಿವೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಆತಂಕ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ನಾಯಕರು ಪ್ರಜಾಪ್ರಭುತ್ವವನ್ನು ಗೌರವಿಸದೆ ಮತೀಯ ದ್ವೇಷವನ್ನು ಬಿತ್ತುತ್ತಿದ್ದಾರೆ. ಅಲ್ಪಸಂಖ್ಯಾತರು ಆತಂಕದಲ್ಲಿ ಜೀವನ ನಡೆಸುವಂತೆ ಮಾಡುತ್ತಿದ್ದಾರೆ. ಈ ಬೆಳವಣಿಗೆ ಗಮನಿಸಿದರೆ ದೇಶವನ್ನು ಅಪಾಯದಂಚಿಗೆ ತಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

ಕೇಂದ್ರದ ಸಚಿವ ಅನಂತಕುಮಾರ್ ಹೆಗಡೆ ಬೆಂಗಾವಲು ವಾಹನಕ್ಕೆ ಅಪಘಾತವಾಗಿದೆ. ಅದನ್ನೂ ರಾಜಕೀಯಕ್ಕೆ ಬಳಕೆ ಮಾಡಲು ಮುಂದಾಗುತ್ತಿದ್ದಾರೆ. ನಾನು ಬಿಜೆಪಿ ವಿರೋಧಿ, ಕೋಮವಾದದ ವಿರೋಧಿ. ಈ ಅಂಶವನ್ನು ಜನತೆಗೆ ತಿಳಿಸುತ್ತಿದ್ದೇನೆ. ಅದನ್ನು ಅರ್ಥೈಸಿಕೊಳ್ಳುವುದು ಹಾಗೂ ಮತ ಹಾಕುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ನಾನು ಏನು ಹೇಳಬೇಕು ಎನ್ನುವುದು ಹೇಳುತ್ತೇನೆ. ಕೇಳುವುದು ಬಿಡುವುದು ಅವರಿಗೆ ಬಿಟ್ಟದ್ದಾಗಿದೆ ಎಂದು ಹೇಳಿದರು.

ರಾಜಕೀಯ ಕೇಂದ್ರಗಳಾಗಬಾರದು: ಧರ್ಮ ನಮ್ಮ ಸ್ವಂತದ್ದು. ಹಿಂದೂ, ಸಿಖ್, ಮುಸ್ಲಿಂ, ಲಿಂಗಾಯತ, ಕ್ರೈಸ್ತ ಧರ್ಮಗಳು ಹಾಗೂ ಮಠ-ಮಂದಿರಗಳು ರಾಜಕೀಯ ಕೇಂದ್ರಗಳಾಗಬಾರದು. ರಾಜಕೀಯ ನಾಯಕರು ಮಠ-ಮಂದಿರಗಳಿಗೆ ಭೇಟಿ ನೀಡುವ ಸಂಸ್ಕೃತಿ ಸ್ವತಂತ್ರ ಬಂದಾಗಿನಿಂದಲೂ ನಡೆಯುತ್ತಿದೆ. ಆದರೆ, ಮತದಾರರು ಇದಕ್ಕೆ ಮರುಳಾಗದೆ, ನಮ್ಮ ಜಾತಿ, ಧರ್ಮದ ವ್ಯಕ್ತಿ ಎಂದು ಮತ ಚಲಾವಣೆ ಮಾಡದೆ, ಜನಪರ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

ಯೋಚಿಸಿ ಮತದಾನ ಮಾಡಿ: ಮತದಾರರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯೋಚನೆ ಮಾಡಿ ಮತದಾನ ಮಾಡಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ನಾವು ಪ್ರಶ್ನೆ ಮಾಡಲು ಸಾಧ್ಯವಾಗುತ್ತದೆ. ಹಣ, ಹೆಂಡ, ಜಾತಿ, ಧರ್ಮಕ್ಕೆ ಮತ ಹಾಕಿದರೆ ನಮ್ಮ ಪ್ರಶ್ನೆ ಮಾಡುವ ಹಕ್ಕನ್ನು ಕಸಿದುಕೊಳ್ಳುತ್ತಾರೆ ಎಂದು ರೈ ಎಚ್ಚರಿಸಿದರು.

ತಜ್ಞರಿಂದ ಪರಿಹಾರ ಕಂಡುಕೊಳ್ಳಬೇಕು: ಕಾವೇರಿ ಕರ್ನಾಟಕದ ಜೀವನದಿಯಾಗಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಹೋಗಿ ಬರುವವರೆಲ್ಲಾ ಮಾತನಾಡಲು ಸಾಧ್ಯವೆ. ಈ ಬಗ್ಗೆ ಜನರ ಭಾವನೆಗಳನ್ನು ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಒಳ್ಳೆಯದು ಎಂಬುದು ಪ್ರಶ್ನೆಯಾಗಿದೆ. ಒಂದು ಟಿಎಂಸಿ ನೀರಿನ ಪ್ರಮಾಣ ಗೊತ್ತಿಲ್ಲದವರೂ ಮಾತನಾಡುತ್ತಿದ್ದಾರೆ ಎಂದರು.

ಡ್ಯಾಮ್ ನಿರ್ಮಾಣವಾಗಿ ಎಷ್ಟು ದಿನವಾಗಿದೆ ಎಂಬುದು ಗೊತ್ತಿಲ್ಲ. ಕಾವೇರಿ ವಿಚಾರದಲ್ಲಿ ಭಾಷೆ ಪ್ರವೇಶಿಸಿದ್ದು ಹೇಗೆ ಎಂಬುದು ಗೊತ್ತಾಗುತ್ತಿಲ್ಲ. ಈ ವಿಚಾರವನ್ನು ಹದಗೆಡಿಸಲಾಗಿದ್ದು, ಏಕ ಕಾಲಕ್ಕೆ ಪರಿಹಾರ ಸಿಗಲು ಸಾಧ್ಯವೇ ಇಲ್ಲವಾಗಿದೆ. ತಜ್ಞರ ಮಾರ್ಗದರ್ಶನದಲ್ಲಿ ಸೂಕ್ತ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯಲಿದ್ದೀರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಅಂಶ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.

ನಾನು ಆರಂಭ ಮಾಡಿರುವ ಜಸ್ಟ್ ಆಸ್ಕಿಂಗ್ ಮೂಲಕ ಒಂದು ಮುಖವಾಗಿ ಮಾತನಾಡುವುದಿಲ್ಲ. ಬದಲಿಗೆ, ಅಧ್ಯಯನ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಆ ಮೂಲಕ ಸಾಹಿತ್ಯವನ್ನು ಎಲ್ಲರಿಗೂ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಲೇಖಕರು, ಉಪನ್ಯಾಸಕರು, ನಿವೃತ್ತ ಅಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ಸಾಹಿತ್ಯ ಬೆಳೆಸಬೇಕು, ರಂಗಭೂಮಿ ಹಾಡಿನ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂಬ ಆಶಯವನ್ನಿಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ಜಸ್ಟ್ ಆಸ್ಕಿಂಗ್ ಎಂಬುದು ರಾಜಕೀಯ ಪಕ್ಷವಲ್ಲ. ಅದೊಂದು ವಿಪಕ್ಷವಿದ್ದಂತೆ. ಸಾಮಾಜಿಕ, ಆರ್ಥಿಕ, ರಾಜಕೀಯ ಜಾಗೃತಿ ಮೂಡಿಸಲಾಗುತ್ತದೆ. ಕಾಲೇಜು, ಆಸ್ಪತ್ರೆಯಲ್ಲಿ, ಬೀದಿಯಲ್ಲಿ ಎಲ್ಲಿ ಅನ್ಯಾಯ ನಡೆಯುತ್ತದೆಯೋ ಅಲ್ಲಿ ದಬ್ಬಾಳಿಕೆ ವಿರುದ್ಧ ಪ್ರಶ್ನೆ ಮಾಡುವುದನ್ನು ಇದು ಪ್ರೋತ್ಸಾಹಿಸಲಿದೆ. ಜನರನ್ನು ಪ್ರಶ್ನಿಸುವಂತೆ ಮಾಡಲಾಗುತ್ತದೆ ಎಂದು ತಿಳಿಸಿದರು.

ನಾನು ಹೋದ ಕಡೆಯಲ್ಲ ಚುನಾವಣಾ ಆಯೋಗದವರು ಭಾಷಣಕ್ಕೆ ಅವಕಾಶ ನೀಡುತ್ತಿಲ್ಲ. ನಾನು ಯಾವುದೇ ಪಕ್ಷದ ವಕ್ತಾರನಾಗಿ ಮಾತನಾಡುತ್ತಿಲ್ಲ. ಸಾಮಾನ್ಯ ಪ್ರಜೆಯಾಗಿ ನನ್ನ ಅನಿಸಿಕೆಯನ್ನು ಜನರಿಗೆ ತಿಳಿಸುತ್ತಿದ್ದೇನೆ. ಅದು ಸರಿಯೆನಿಸಿದರೆ ಸ್ವೀಕರಿಸುತ್ತಾರೆ. ಇಲ್ಲದಿದ್ದರೆ, ತಿರಸ್ಕಾರ ಮಾಡುತ್ತಾರೆ. ಆದರೆ, ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಪ್ರಜೆ ಮಾತನಾಡಬಾರದು ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ವದಂತಿ ಸುಳ್ಳು: ಜೆಡಿಎಸ್ ಪಕ್ಷ ಮುಂದಿನ ದಿನಗಳಲ್ಲಿ ಕೋಮವಾದಿ ಪಕ್ಷಗಳೊಂದಿಗೆ ಕೈ ಜೋಡಿಸಿ ಅಧಿಕಾರಕ್ಕೆ ಬರಲಿದೆ ಎಂಬ ವದಂತಿ ಕೇಳಿ ಬರುತ್ತಿತ್ತು. ಈ ಅಂಶವನ್ನು ತಿಳಿದುಕೊಳ್ಳಬೇಕಾಗಿತ್ತು. ಅಲ್ಲದೆ, ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ರಾವ್ ದೇವೇಗೌಡ ಅವರನ್ನು ಭೇಟಿ ಆಗುತ್ತಿದ್ದೇನೆ ನೀನು ಬರಬೇಕು ಎಂದು ಆಹ್ವಾನಿಸಿದ್ದರು. ಆ ಕಾರಣದಿಂದಾಗಿ ಅಲ್ಲಿಗೆ ಹೋಗಿದ್ದೆ. ನನ್ನ ಮನಸ್ಸಿನಲ್ಲಿದ್ದ ಅಂಶವೂ ವದಂತಿಯೇ ಎಂದು ತಿಳಿಯಿತು ಎಂದರು.

ನಾನು ಯಾವುದೇ ಪಕ್ಷಕ್ಕೆ ಮತ ಹಾಕಿ ಎಂದು ಹೇಳುವುದಿಲ್ಲ. ಕೋಮವಾದಿ ಪಕ್ಷವನ್ನು ಮೊದಲು ತಡೆಯಿರಿ ಎಂದು ಮಾತ್ರ ಹೇಳುತ್ತೇನೆ. ಈ ಪಕ್ಷದಿಂದ ಎದುರಾಗಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಅಪಾಯ ಕಾದಿದೆ. ಅಲ್ಲದೆ, ಬೇರೆ ರಾಜ್ಯದ ಮುಖ್ಯಮಂತ್ರಿ, ಬೇರೆ ರಾಜ್ಯದ ನಾಯಕರಿಗೆ ತಲೆ ಬಾಗುವವರ ಕೈಗೆ ಕರ್ನಾಟಕವನ್ನು ನೀಡಬಾರದು.
-ಪ್ರಕಾಶ್ ರೈ, ಬಹುಭಾಷ ನಟ

ನನ್ನ ಜೀವನಕ್ಕೆ ಅರ್ಥ ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಅನ್ಯಾಯ ಕಂಡುಬಂದಲ್ಲಿ ಬಹಿರಂಗವಾಗಿ ಪ್ರತಿಭಟಿಸುತ್ತಿರುವೆ. ನನ್ನಿಂದ ಸಮಾಜದಲ್ಲಿ ಒಳ್ಳೆಯ ಕಾರ್ಯ ಆಗುತ್ತದೆ ಎಂದಾದರೆ ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ ಬೇಜಾರಿಲ್ಲ. ಆದರೆ, ನಾನೀಗ 12 ಸಿನೆಮಾಗಳಲ್ಲಿ ನಟನೆ ಮಾಡುತ್ತಿದ್ದೇನೆ. ಇತ್ತೀಚಿಗೆ 2 ಸಿನೆಮಾಗಳು ಬಿಡುಗಡೆಯಾಗಿವೆ. ಅಷ್ಟೇ ಅಲ್ಲದೆ, ನಾನು ನಮ್ಮ ಮನೆಯವರು ಬದುಕುವಷ್ಟು ಸಂಪಾದನೆ ಮಾಡಿದ್ದೇನೆ. ಅವಕಾಶ ಸಿಗಲಿಲ್ಲವೆಂದರೂ ಕಷ್ಟವೇನಿಲ್ಲ. ಆದರೆ, ಸಮಾಜದ ಕೆಲಸ ಮಾತ್ರ ಬಿಡುವುದಿಲ್ಲ ಎಂದು ಪ್ರಕಾಶ್ ರೈ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News