ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿ ಹಲವು ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆ

Update: 2018-04-20 15:07 GMT

ಬೆಂಗಳೂರು, ಎ. 20: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಜಿ.ಟಿ. ದೇವೇಗೌಡ, ರಾಮಲಿಂಗಾರೆಡ್ಡಿ, ರೋಷನ್‌ಬೇಗ್, ಆರ್.ವಿ. ದೇಶಪಾಂಡೆ, ಕೆಪಿಸಿಸಿ ಕಾಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಘಟಾನುಘಟಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಶುಕ್ರವಾರ ನಾಮಪತ್ರ ಸಲ್ಲಿಸುವ ಮುನ್ನ ಸಿಎಂ ಸಿದ್ದರಾಮಯ್ಯ ತಮ್ಮ ಹುಟ್ಟೂರು ಸಿದ್ದರಾಮನ ಹುಂಡಿಯ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಅಲ್ಲಿಂದ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಪಕ್ಷದ ಕಾರ್ಯಕರ್ತ ಹಾಗೂ ಬೆಂಗಲಿಗರೊಂದಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದರು.

ದೇವಸ್ಥಾನ ಮತ್ತು ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ, ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರದಿಂದ ಪಕ್ಷದ ಕಾರ್ಯಕರ್ತರು, ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಚಾಮುಂಡೇಶ್ವರಿಯಿಂದ ಜಿ.ಟಿ.ದೇವೇಗೌಡ, ವರುಣಾದಿಂದ ಡಾ.ಯತೀಂದ್ರ, ಬಿಟಿಎಂ ಲೇಔಟ್‌ನಲ್ಲಿ ರಾಮಲಿಂಗಾರೆಡ್ಡಿ, ಶಿವಾಜಿನಗರದಿಂದ ರೋಷನ್ ಬೇಗ್, ಗಾಂಧಿನಗರ ಕ್ಷೇತ್ರದಿಂದ ದಿನೇಶ್ ಗುಂಡೂರಾವ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಹಾಸನ ಜಿಲ್ಲೆ ಹೊಳೆನರಸೀಪುರ ಕ್ಷೇತ್ರದಲ್ಲಿ ಎಚ್.ಡಿ.ರೇವಣ್ಣ, ಕುಂದಗೋಳ ಕ್ಷೇತ್ರದಿಂದ ಹಾಲಿ ಶಾಸಕ ಸಿ.ಎಸ್.ಶಿವಳ್ಳಿ, ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಎಂ.ಬಿ.ನಾಗಣ್ಣಗೌಡ ನಾಮಪತ್ರ ಸಲ್ಲಿಸಿದರು.

ಶುಭ ಶುಕ್ರವಾರ: ಜ್ಯೋತಿಷ್ಯದ ಪ್ರಕಾರ ಶುಕ್ರವಾರ ಶುಭ ಎಂಬ ನಂಬಿಕೆ. ಅಲ್ಲದೆ, ಚೌತಿ ಹಾಗೂ ಶಂಕರ ದಿನವೂ ಎನ್ನಲಾಗುತ್ತದೆ. ಎ.17ರಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದರೂ, ನಾಮಪತ್ರ ಸಲ್ಲಿಕೆಗೆ ಅಷ್ಟಾಗಿ ಉತ್ಸಾಹ ತೋರಿಸಿರಲಿಲ್ಲ. ಜ್ಯೋತಿಷಿಗಳ ಸಲಹೆಯ ಹಿನ್ನೆಲೆಯಲ್ಲಿ ನಾಳೆ ಹಲವು ರಾಜಕೀಯ ನಾಯಕರು ನಾಮಪತ್ರ ಸಲ್ಲಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News