ಛಲವಾದಿ ನಾರಾಯಣಸ್ವಾಮಿ, ಎನ್.ವೈ.ಗೋಪಾಲಕೃಷ್ಣ ಬಿಜೆಪಿ ಸೇರ್ಪಡೆ

Update: 2018-04-20 16:25 GMT

ಬೆಂಗಳೂರು, ಎ. 20: ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಎನ್.ವೈ.ಗೋಪಾಲಕೃಷ್ಣ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಛಲವಾದಿ ನಾರಾಯಣಸ್ವಾಮಿ, ಪೂರ್ಣಿಮಾ ಮಲ್ಲೇಶ್ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು.

ಶುಕ್ರವಾರ ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಬಿಎಸ್‌ವೈ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ ಮುಖಂಡರಿಗೆ ಪಕ್ಷದ ಶಾಲುಹಾಕಿ ಮತ್ತು ಪುಷ್ಪಗುಚ್ಚ ನೀಡಿ ಯಡಿಯೂರಪ್ಪ ಪಕ್ಷಕ್ಕೆ ಬರಮಾಡಿಕೊಂಡರು.

ಟಿಕೆಟ್ ಮಾರಾಟ: ಮಹದೇವಪುರ, ನೆಲಮಂಗಲ, ದೇವನಹಳ್ಳಿ ಹಾಗೂ ಯಲಹಂಕ ಕ್ಷೇತ್ರಗಳ ಟಿಕೆಟ್‌ಗಳನ್ನು ಕೆಪಿಸಿಸಿ ಅಧ್ಯಕ್ಷ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾರಾಟ ಮಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಒಂದೊಂದು ಟಿಕೆಟ್ ಅನ್ನು 5 ಕೋಟಿ ರೂ.ನಂತೆ ಮಾರಾಟ ಮಾಡಲಾಗಿದೆ. ನನ್ನ ಭತ್ತಳಿಕೆಯಲ್ಲಿ ಇನ್ನೂ ಅಸ್ತ್ರಗಳಿವೆ. ಇವೆಲ್ಲವನ್ನು ಮುಂದಿನ ದಿನಗಳಲ್ಲಿ ಬಿಚ್ಚಿಡುವೆ. ಕಾಂಗ್ರೆಸ್ ಪಕ್ಷದಲ್ಲಿ ತತ್ವ-ಸಿದ್ಧಾಂತ ಮಾರಾಟ ಮಾಡಿಕೊಂಡಿರುವವರಿಗೆ ಬೆಲೆ. ನನ್ನ ಪ್ರಶ್ನೆಗಳಿಗೆ ಕಾಂಗ್ರೆಸ್ ಮುಖಂಡರು ಉತ್ತರ ನೀಡಬೇಕೆಂದು ಸವಾಲು ಹಾಕಿದರು.

ನಲವತ್ತು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ, ನಾನು ಈವರೆಗೂ ಬಿ ಫಾರಂ ನೋಡಲಿಲ್ಲ. ಅಂದರೆ ನಾನು ಬಿ ಫಾರಂ ಪಡೆಯದೇ ಇರುವಷ್ಟು ಕಳಪೆಯೇ ಎಂದು ಪ್ರಶ್ನಿಸಿದ ಅವರು, ಟಿಕೆಟ್ ನೀಡದಿದ್ದರೆ ಹೋಗಲಿ, ನನ್ನನ್ನು ನಡೆಸಿಕೊಂಡ ರೀತಿ ಸರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ದೊಡ್ಡ ನಾಯಕ. ಆದರೆ, ಪಕ್ಷದಲ್ಲಿ ಅವರ ಮಾತು ನಡೆಯುವುದಿಲ್ಲ. ವೀರಪ್ಪ ಮೊಯ್ಲಿಗೆ ದಲಿತರನ್ನು ಕಂಡರೆ ಆಗುವುದಿಲ್ಲ. ನಾನು ಈ ಹಿಂದೆ ದಲಿತ ಮುಖ್ಯಮಂತ್ರಿ ವಿಚಾರವನ್ನು ಪ್ರಸ್ತಾಪಿಸಿದ್ದಕ್ಕೆ ಟಿಕೆಟ್ ಕೈತಪ್ಪಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News