ಹಾಲಿ ಶಾಸಕ ರಾಜೇಶ್‌ಗೆ ‘ಬಿ’ ಫಾರಂ: ಟಿಕೆಟ್ ಪಡೆದಿದ್ದ ಪುಷ್ಪಾ ಆಸ್ಪತ್ರೆಗೆ ದಾಖಲು
ಬೆಂಗಳೂರು, ಎ. 20: ದಾವಣಗೆರೆ ಜಿಲ್ಲೆ ಜಗಲೂರು ವಿಧಾನಸಭಾ ಕ್ಷೇತ್ರದಿಂದ ಘೋಷಿತ ಅಭ್ಯರ್ಥಿ ಎ.ಎಲ್.ಪುಷ್ಪಾ ಬದಲಿಗೆ ಹಾಲಿ ಶಾಸಕ ರಾಜೇಶ್ ಅವರಿಗೆ ‘ಬಿ’ ಫಾರಂ ನೀಡಿದ್ದರಿಂದ ಮನನೊಂದು ತೀವ್ರ ಖಿನ್ನತೆಗೆ ಒಳಗಾಗಿರುವ ಪುಷ್ಪಾ ನಗರದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿಯನ್ನು ಜಗಲೂರು ಕ್ಷೇತ್ರದಿಂದ ಪುಷ್ಪಾ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ಹಾಲಿ ಶಾಸಕ ರಾಜೇಶ್ ಮತ್ತವರ ಬೆಂಬಲಿಗರ ಒತ್ತಡದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ರಾಜೇಶ್ ಅವರಿಗೆ ‘ಬಿ’ ಫಾರಂ ನೀಡಿದೆ.
ಪಕ್ಷದಿಂದ ಟಿಕೆಟ್ ಸಿಕ್ಕರೂ ‘ಬಿ’ ಫಾರಂ ನೀಡಲಿಲ್ಲ ಎಂಬ ಕಾರಣಕ್ಕೆ ಪುಷ್ಪಾ ಬಹಿರಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅಲ್ಲದೆ, ದಲಿತ ಮಹಿಳೆಗೆ ಟಿಕೆಟ್ ತಪ್ಪಿಸಿ ಅನ್ಯಾಯ ಮಾಡಲಾಗಿದೆ ಎಂದು ಪುಷ್ಪಾ ಕಣ್ಣೀರಿಟ್ಟಿದ್ದಾರೆ.
ಈ ಬೆಳವಣಿಗೆಗಳಿಂದ ಬೇಸತ್ತ ಪುಷ್ಪಾ ಅವರು ತೀವ್ರ ಖಿನ್ನತೆಗೊಳಗಾಗಿ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆಂದು ಗೊತ್ತಾಗಿದೆ.