ಕಥುವಾ ಅತ್ಯಾಚಾರ ಪ್ರಕರಣ: ಬೆಂಗಳೂರು ವಿ.ವಿ ವಿದ್ಯಾರ್ಥಿಗಳಿಂದ ಖಂಡನೆ
ಬೆಂಗಳೂರು, ಎ.20: ಜಮ್ಮು-ಕಾಶ್ಮೀರದ ಕಥುವಾದಲ್ಲಿ ಎಂಟರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಹಾಗೂ ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ಬೆಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಶುಕ್ರವಾರ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ನೂರಾರು ವಿದ್ಯಾರ್ಥಿಗಳು, ವೌನ ಮೆರವಣಿಗೆ ನಡೆಸುವ ಮೂಲಕ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿದರು.
ಕಾಶ್ಮೀರದಲ್ಲಿ 8 ವರ್ಷದ ಮಗುವಿನ ಮೇಲೆ ಕಾಮುಕರು ಮುಗಿಬಿದ್ದು ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದಾರೆ. ಇದರಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸೇರಿದ್ದಾನೆ. ಈ ಪೈಶಾಚಿಕ ಕೃತ್ಯ ನಡೆಸಿದವರು ಬಿಜೆಪಿಗೆ ಸೇರಿದವರಾಗಿದ್ದಾರೆ ಎಂದು ವಿದ್ಯಾರ್ಥಿ ಮುಖಂಡರು ಆರೋಪಿಸಿದರು.
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ ಸರಕಾರ ಅತ್ಯಾಚಾರ, ಕೊಲೆ ಸುಲಿಗೆ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಒಟ್ಟಾರೆ ಈ ದೇಶದ ಕಾನೂನು ವ್ಯವಸ್ಥೆಯೇ ದುರ್ಬಲಗೊಂಡಿದೆ. ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದು ಮಾತನಾಡಬೇಕು. ಜೊತೆಗೆ ಅತ್ಯಾಚಾರಿಗಳಿಗೆ ಕಠಿಣ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿದರು.
ಪ್ರತಿಭಟನೆ ಬಳಿಕ ವಿವಿಯ ಕುಲಪತಿ ಪ್ರೊ.ಐ.ಎಸ್.ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಕುಲಸಚಿವ ಪ್ರೊ.ಬಿ.ಕೆ.ರವಿ, ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಬಿ.ಸಿ.ಮೈಲಾರಪ್ಪ, ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಸುದೇಷ್ಣ ಮುಖರ್ಜಿ, ಪ್ರೊ.ಎಂ.ನಾರಾಯಣಸ್ವಾಮಿ, ಪ್ರೊ.ಗಂಗಾಧರ್, ಪ್ರೊ.ಸಿದ್ದಪ್ಪ ಬೆಳಗಟ್ಟಿ ಸೇರಿ ಪ್ರಮುಖರಿದ್ದರು.