ಕಥುವಾ ಅತ್ಯಾಚಾರ: ಕಟ್ಟುಕಥೆ ಹೆಣೆದ ಪತ್ರಿಕೆಗಳು

Update: 2018-04-20 18:31 GMT

ವರದಿಯ ನಿಖರತೆಯನ್ನು ಇದು ಅಲ್ಲಗಳೆದಿದ್ದರೂ, ಈ ಲೇಖನ ಕಥುವಾ ಪ್ರಕರಣಕ್ಕೆ ಸಂಬಂಧಿಸಿದ ಹಲವು ಅಂಶಗಳನ್ನು ಒಳಗೊಂಡಿದೆ. ಇದರ ಜತೆಗೆ ಹಲವು ಕಾಲ್ಪನಿಕ ಅಂಶಗಳನ್ನೂ ಸೇರಿಸಿದೆ. ಉದಾಹರಣೆಗೆ, ಕಥುವಾ ಪ್ರಕರಣದ ಸಂತ್ರಸ್ತೆಯ ಪೋಷಕರನ್ನು ಈ ಹಿಂದೆ ಹತ್ಯೆ ಮಾಡಲಾಗಿತ್ತು ಎಂಬ ಉಲ್ಲೇಖವಿದೆ. ಈ ಮೂಲಕ ಪ್ರಕರಣವನ್ನು ಕೋಮು ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಚಿನ ಸಿದ್ಧಾಂತವನ್ನು ಇದು ಪ್ರತಿಪಾದಿಸುವ ಪ್ರಯತ್ನ ಮಾಡಿದೆ. 


ಸುಳ್ಳುಸುದ್ದಿ ಪ್ರಕಟಿಸುವಲ್ಲಿ ಅದರಲ್ಲೂ ಮುಖ್ಯವಾಗಿ ಸುಳ್ಳುಮಾಹಿತಿಯನ್ನು ನಾಜೂಕಾಗಿ ನೀಡುವಲ್ಲಿ ಮತ್ತು ಅಪಪ್ರಚಾರ ಮಾಡುವಲ್ಲಿ ಸುದ್ದಿ ಸಂಸ್ಥೆಗಳು ಇಂದು ಕುಖ್ಯಾತವಾಗುತ್ತಿವೆ. ಆದರೆ ತನಗೆ ಒಂದು ವಿಚಾರದ ಬಗ್ಗೆ ಅರಿವಿದ್ದೂ, ಸುಳ್ಳು ಘೋಷಿಸಿ ಅಂಥ ಸುದ್ದಿಯನ್ನು ಒಂದು ಪತ್ರಿಕೆ ಏಕೆ ಪ್ರಕಟಿಸುತ್ತದೆ? ಜಮ್ಮುವಿನ ಕಥುವಾ ಗ್ರಾಮದಲ್ಲಿ ಕಳೆದ ಜನವರಿಯಲ್ಲಿ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ, ನಿರಂತರ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣ ಬಗ್ಗೆ ಕಟ್ಟುಕಥೆ ಎಂದು ತಾನೇ ಒಪ್ಪಿಕೊಂಡ ಒಂದು ಲೇಖನವನ್ನು ಪ್ರಕಟಿಸಿದ ‘ಸಂಡೇ ಗಾರ್ಡಿಯನ್’ ಸಾಪ್ತಾಹಿಕದ ಬಗ್ಗೆ ಈ ಪ್ರಶ್ನೆ ಕೇಳಲೇಬೇಕಾಗುತ್ತದೆ. ಪತ್ರಿಕೆಯ ಸಾಪ್ತಾಹಿಕ ಸಂಚಿಕೆಯಲ್ಲಿ ಈ ಲೇಖನ ಪ್ರಕಟವಾಗಿದ್ದು, ಇದು ಘಟನೆಯ ಬಗೆಗಿನ ಅಸಂಖ್ಯಾತ ವಿವರಗಳ ಕುರಿತು ಸಂಶಯದ ಬೀಜ ಬಿತ್ತುವ, ಕೆಲ ನಿರ್ದಿಷ್ಟ ಪ್ರಶ್ನೆಗಳು ಉದ್ಭವಿಸಲು ಕಾರಣವಾಗಿದೆ. ಆದರೆ ಈ ಲೇಖನ ಎರಡು ಎಚ್ಚರಿಕೆಯ ಸಂದೇಶಗಳನ್ನೂ ರವಾನಿಸಿದೆ. ಒಂದನೆಯದಾಗಿ ಇದು ಅಭಿಪ್ರಾಯ ಮತ್ತು ವಿಶ್ಲೇಷಣೆ ವಿಭಾಗದಲ್ಲಿ ಪ್ರಕಟವಾಗಿದ್ದರೂ, ಸುಳ್ಳು ಸುದ್ದಿ ಎಂದು ಪಟ್ಟಿ ಮಾಡಲಾಗಿದೆ. ಲೇಖನದ ಶೀರ್ಷಿಕೆಯಲ್ಲಿ ನಕ್ಷತ್ರಚಿಹ್ನೆ ನೀಡಿ, ಅದರ ಅಡಿಟಿಪ್ಪಣಿಯಲ್ಲಿ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ: ‘‘ಈ ಲೇಖನವು ಕಲ್ಪನೆಯನ್ನು ಆಧರಿಸಿದ ಕಟ್ಟುಕಥೆ. ಯಾವುದೇ ಪಾತ್ರ ಅಥವಾ ಘಟನಾವಳಿಗಳು ಇದ್ದರೆ ಅದು ಉದ್ದೇಶಪೂರ್ವಕವಲ್ಲ ಅಥವಾ ಕಾಕತಾಳೀಯ’’

ಇದನ್ನು ಪ್ರಕಟಿಸಿದ ಬಳಿಕ ಸಂಡೇ ಗಾರ್ಡಿಯನ್‌ನ ಸಂಪಾದಕೀಯ ನಿರ್ದೇಶಕ ಎಂ.ಡಿ. ನಳಪತ್, scroll.in ಕೇಳಿದ ಪ್ರಶ್ನೆಗೆ, ಈ ಲೇಖನವನ್ನು ಪ್ರಕಟಿಸಿದ್ದನ್ನು ಸಮರ್ಥಿಸುವ ಉತ್ತರ ನೀಡಿದರು. ಇದು ಕಾಲ್ಪನಿಕ ಎನ್ನುವುದನ್ನು ಸಮರ್ಥಿಸಿಕೊಂಡರು. ಅವರ ಸಮರ್ಥನೆಯ ಪೂರ್ಣ ರೂಪವನ್ನು ಲೇಖನದ ಕೊನೆಯಲ್ಲಿ ನೀಡಲಾಗಿದೆ.

ಲೇಖನದಲ್ಲಿ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರೂ, ತನಿಖಾಧಿಕಾರಿಗಳ ಹೆಸರಿನಿಂದ ಹಿಡಿದು, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರೆಗೆ ಕಥುವಾ ಪ್ರಕರಣದಲ್ಲಿ ಒಳಗೊಂಡವರ ನೈಜ ಹೆಸರುಗಳನ್ನು ಲೇಖನದಲ್ಲಿ ನೀಡಲಾಗಿದೆ. ಸಂತ್ರಸ್ತೆಯ ಹೆಸರು ಪ್ರಕಟಿಸದಂತೆ ಕಳೆದ ವಾರ ದಿಲ್ಲಿ ಹೈಕೋರ್ಟ್ ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಲೇಖನದಲ್ಲಿ ಪ್ರಕರಣದ ಸಂತ್ರಸ್ತೆಯ ಹೆಸರು ಪ್ರಕಟಿಸಲಾಗಿದೆ. ಇಷ್ಟು ಮಾತ್ರವಲ್ಲದೆ, ಎರಡು ಪ್ರಕರಣಗಳನ್ನು ಹೋಲಿಕೆ ಮಾಡುವ ಪ್ರಯತ್ನದಲ್ಲಿ, ಇನ್ನೊಂದು ಲೈಂಗಿಕ ಹಲ್ಲೆ ಪ್ರಕರಣದ ಅಪ್ರಾಪ್ತ ವಯಸ್ಕ ಸಂತ್ರಸ್ತೆಯ ಹೆಸರನ್ನೂ ನಮೂದಿಸಲಾಗಿದೆ. ಜತೆಗೆ ತಪ್ಪಾಗಿ ಆಕೆಯನ್ನೂ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ ಎಂದು ವಿವರಿಸಿದೆ. ಆದರೆ ವಾಸ್ತವವಾಗಿ ಆ ಬಾಲಕಿ ಇನ್ನೂ ಜೀವಂತವಿದ್ದಾಳೆ.

ವರದಿಯ ನಿಖರತೆಯನ್ನು ಇದು ಅಲ್ಲಗಳೆದಿದ್ದರೂ, ಈ ಲೇಖನ ಕಥುವಾ ಪ್ರಕರಣಕ್ಕೆ ಸಂಬಂಧಿಸಿದ ಹಲವು ಅಂಶಗಳನ್ನು ಒಳಗೊಂಡಿದೆ. ಇದರ ಜತೆಗೆ ಹಲವು ಕಾಲ್ಪನಿಕ ಅಂಶಗಳನ್ನೂ ಸೇರಿಸಿದೆ. ಉದಾಹರಣೆಗೆ, ಕಥುವಾ ಪ್ರಕರಣದ ಸಂತ್ರಸ್ತೆಯ ಪೋಷಕರನ್ನು ಈ ಹಿಂದೆ ಹತ್ಯೆ ಮಾಡಲಾಗಿತ್ತು ಎಂಬ ಉಲ್ಲೇಖವಿದೆ. ಈ ಮೂಲಕ ಪ್ರಕರಣವನ್ನು ಕೋಮು ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಚಿನ ಸಿದ್ಧಾಂತವನ್ನು ಇದು ಪ್ರತಿಪಾದಿಸುವ ಪ್ರಯತ್ನ ಮಾಡಿದೆ. ವಾಸ್ತವವಾಗಿ ಬಾಲಕಿಯನ್ನು ಹೆತ್ತವರು ಮತ್ತು ದತ್ತು ಪಡೆದವರು ಕೂಡಾ ಜೀವಂತ ಇದ್ದು, ಮಾಧ್ಯಮದ ಜತೆ ಮಾತನಾಡಿದ್ದಾರೆ.

ಅಂತೆಯೇ ಅತ್ಯಾಚಾರಕ್ಕೆ ಯಾವ ಪುರಾವೆಯೂ ಇಲ್ಲದೆ ಈ ಪ್ರಕರಣವನ್ನು ಲೈಂಗಿಕ ಹಲ್ಲೆ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದೂ ಲೇಖನದಲ್ಲಿ ಹೇಳಲಾಗಿದೆ. ವೈದ್ಯಕೀಯ ತಜ್ಞರ ವರದಿಯ ಪ್ರಕಾರ, ಸಂತ್ರಸ್ತೆಯನ್ನು ಹತ್ಯೆ ಮಾಡುವ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಆರೋಪಪಟ್ಟಿಯಲ್ಲಿ ಸ್ಪಷ್ಟವಾಗಿ ಹೇಳಿದ್ದರೂ, ಭಿನ್ನ ಚಿತ್ರಣವನ್ನು ಲೇಖನದಲ್ಲಿ ಬಿಂಬಿಸಲಾಗಿದೆ.

ಸಹಜವಾಗಿಯೇ ಇಂಥ ಹೇಯ ಅಪರಾಧ ಕೃತ್ಯವನ್ನು ಲಘುವಾಗಿ ಪರಿಗಣಿಸಿದ ಬಗ್ಗೆ ಹಾಗೂ ಪತ್ರಿಕೆಯ ಎಚ್ಚರಿಕೆ ಸಂದೇಶದ ಬಗ್ಗೆ ಆನ್‌ಲೈನ್‌ನಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಸಂಡೇ ಗಾರ್ಡಿಯನ್ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಎಂ.ಡಿ.ನಲಪತ್ ಅವರಿಗೆ scroll.in ಮಾಡಿರುವ ಇ-ಮೇಲ್ ಹಾಗೂ ಅದಕ್ಕೆ ಅವರು ನೀಡಿದ ಉತ್ತರವನ್ನು ಈ ಕೆಳಗೆ ನೀಡಲಾಗಿದೆ.

* ಸುಳ್ಳು ಸುದ್ದಿ ಎಂಬ ಶೀರ್ಷಿಕೆಯಡಿ, ವಾಸ್ತವ ಘಟನೆ ಬಗ್ಗೆೆ ನೈಜ ಹೆಸರು ಮತ್ತು ಉಲ್ಲೇಖಗಳನ್ನು ಒಳಗೊಂಡ ಲೇಖನವನ್ನು ಸಂಡೇ ಗಾರ್ಡಿಯನ್ ಏಕೆ ಪ್ರಕಟಿಸಿದೆ?

ನಲಪತ್: ನೈಜ ಹೆಸರುಗಳ ಜತೆಗೆ ವಿಡಂಬನೆಯನ್ನೂ ಬಳಸಲಾಗಿದೆ. ಇದನ್ನು ಕಾಲ್ಪನಿಕ ಹಾಗೂ ಕಟ್ಟುಕಥೆ ಎಂದು ಸ್ಪಷ್ಟಪಡಿಸಲಾಗಿದೆ. ಸುಳ್ಳುಸುದ್ದಿಗಳನ್ನು ನಿಜ ಎಂದು ಬಿಂಬಿಸುವುದು ನಿಜಕ್ಕೂ ಆತಂಕಕಾರಿ. ಆದರೆ ಯಥಾಸ್ಥಿತಿಯಲ್ಲಿ ಅದನ್ನು ಪ್ರಕಟಿಸಿದರೆ, ಅಂಥದ್ದೇ ನಿರ್ಧಾರ ಕೈಗೊಳ್ಳುವುದು ಕಠಿಣ ಎನಿಸುತ್ತದೆ.

* ಅಭಿಪ್ರಾಯ ವಿಶ್ಲೇಷಣೆ ಪುಟದಲ್ಲಿ ಕಲ್ಪನೆಗಳನ್ನು ಆಧರಿಸಿದ ಕಟ್ಟುಕಥೆಯನ್ನು ಪ್ರಕಟಿಸುವುದು ಸಂಡೇ ಗಾರ್ಡಿಯನ್‌ನ ನೀತಿಯೇ?
ನಲಪತ್: ಸಂಪಾದಕರ ಪ್ರಕಾರ, ಒಟ್ಟಾರೆ ಸಂಚಿಕೆಗೆ ಬರುವ ಲೇಖನಗಳ ಸ್ಥಳ ನಿಗದಿ ಮಾಡುವುದು ಸ್ಥಳಾವಕಾಶ ಹಾಗೂ ಸಮಯವನ್ನು ಆಧರಿಸಿರುತ್ತದೆ. ಅದನ್ನು ಬೇರೆಲ್ಲಿ ಪ್ರಕಟಿಸಬೇಕಿತ್ತು? ನಮ್ಮಲ್ಲಿ ಕಾದಂಬರಿ ಪುಟ ಇಲ್ಲ.

* ಕಥುವಾ ಪ್ರಕರಣದಲ್ಲಿ ಸಂತ್ರಸ್ತೆಯ ಹೆಸರು ಉಲ್ಲೇಖಿಸಿದ ಬಗ್ಗೆ ದಿಲ್ಲಿ ಹೈಕೋರ್ಟ್ ಮಾಧ್ಯಮಗಳ ಮೇಲೆ ಹರಿಹಾಯ್ದಿದೆ. ಇಷ್ಟಾಗಿಯೂ ಸುಳ್ಳು ಸುದ್ದಿ ಎಂಬ ಶೀರ್ಷಿಕೆಯಡಿ ಪ್ರಕಟವಾದ ಲೇಖನದಲ್ಲಿ ಎಂಟು ವರ್ಷದ ಬಾಲಕಿಯ ಹೆಸರನ್ನು ಸೇರಿಸಿರುವುದನ್ನು ಸಂಡೇ ಗಾರ್ಡಿಯನ್ ಸಮರ್ಥಿಸಿಕೊಳ್ಳುತ್ತದೆಯೇ?

ನಲಪತ್: ಇಂಥ ಹೆಸರುಗಳನ್ನು ಕೈಬಿಡುವಂತೆ ನೀಡಿದ ಸಲಹೆಗಳನ್ನು ಹಲವು ಬಾರಿ ನಿರ್ಲಕ್ಷಿಸುವುದು ದುರದೃಷ್ಟಕರ. ಇಂಥ ವಿವರಗಳನ್ನು ನೀಡಬಾರದು ಎಂಬ ನಿಯಮ ಇಲ್ಲದಿದ್ದರೂ, ಸಂಪ್ರದಾಯದಂತೆ ವಿವರ ಮುಚ್ಚಿಡಲಾಗುತ್ತದೆ. ಇಡೀ ದೇಶದಂತೆ ಭಾರತದಲ್ಲಿ ಮಾಧ್ಯಮ ಕೂಡಾ, ಪ್ರಗತಿಯ ಹಾದಿಯಲ್ಲಿದೆ.

* ಇದೇ ಲೇಖನದಲ್ಲಿ ನಗೋತ್ರಾ ಅತ್ಯಾಚಾರ ಸಂತ್ರಸ್ತೆಯ ಹೆಸರನ್ನೂ ಸೇರಿಸಲಾಗಿದೆ ಮತ್ತು ಆಕೆ ಹತ್ಯೆಗೀಡಾಗಿದ್ದಾಳೆ ಎಂದು ಬಿಂಬಿಸಲಾಗಿದೆ. ಇದನ್ನು ಪ್ರಕಟಿಸಿದ ನಿರ್ಧಾರವನ್ನು ಪತ್ರಿಕೆ ಸಮರ್ಥಿಸಿಕೊಳ್ಳುತ್ತದೆಯೇ?

ನಲಪತ್: ಈ ಪ್ರಕರಣದ ಬಗ್ಗೆ ನನಗೆ ಅರಿವಿಲ್ಲ. ಆದರೆ ಇಡೀ ಲೇಖನ ಕಾಲ್ಪನಿಕ ಎನ್ನುವುದನ್ನು ಮರೆಯಬೇಡಿ. ಆದ್ದರಿಂದ ಕಟ್ಟುಕಥೆಯ ಬಗ್ಗೆ ಆರೋಪ ಮಾಡಿದಂತಾಗುತ್ತದೆ

* ಸಂತಸ್ತೆಯ ಪೋಷಕರನ್ನು ಹತ್ಯೆ ಮಾಡಲಾಗಿತ್ತು, ಲೈಂಗಿಕ ಕಿರುಕುಳಕ್ಕೆ ಪುರಾವೆ ಇಲ್ಲ ಎಂಬಂಥ ಹಲವು ವಿವರಗಳು ಕಾಲ್ಪನಿಕ. ಇದನ್ನು ಪತ್ರಿಕೆ ಸಮರ್ಥಿಸುತ್ತದೆಯೇ?

ನಲಪತ್: ನಾವು ಇದನ್ನು ಇಡಿಯಾಗಿ ಕಾದಂಬರಿ ಎಂಬಂತೆ ಪ್ರಕಟಿಸಿದ್ದೇವೆ. ಕಟ್ಟುಕಥೆಯನ್ನು ಅಧಿಕೃತಗೊಳಿಸುವ ಪ್ರಶ್ನೆ ಎಲ್ಲಿ ಬಂತು? ಆದಾಗ್ಯೂ ಈ ಲೇಖನದಂತೆ ಇದನ್ನು ಸುಳ್ಳು ಸುದ್ದಿ ಎಂದು ನಿರ್ದಿಷ್ಟವಾಗಿ ಘೋಷಿಸಿದಲ್ಲಿ ಕಥೆಯನ್ನು ಪ್ರಕಟಿಸುವ ವ್ಯಕ್ತಿಗಳ ಹಕ್ಕಿನ ಪರವಾಗಿ ನಾನು ನಿಲ್ಲುತ್ತೇನೆ.

* ಉದಾಹರಣೆಗೆ ವೈದ್ಯಕೀಯ ವರದಿಯನ್ನು ಆಧರಿಸಿ ಲೈಂಗಿಕ ಕಿರುಕುಳ ಮೇಲ್ನೋಟಕ್ಕೆ ಸಾಬೀತಾಗಿರುವುದನ್ನು ಆರೋಪಪಟ್ಟಿಯಲ್ಲಿ ಹೇಳಿದೆ. ಲೇಖನಕ್ಕೆ ಪತ್ರಿಕೆ ಸ್ಪಷ್ಟನೆ ನೀಡುತ್ತದೆಯೇ?

ನಲಪತ್: ಇದು ಕಟ್ಟುಕಥೆ ಮತ್ತು ಇದು ಟಿಎಸ್‌ಜಿ ಓದುಗರನ್ನು ತಪ್ಪುದಾರಿಗೆ ಎಳೆಯುತ್ತದೆ ಎಂಬ ಆರೋಪದ ಅಂಶವನ್ನು ನೀವೇಕೆ ನಿರ್ಲಕ್ಷಿಸುತ್ತೀರಿ? ಪತ್ರಿಕೆ ಸ್ಪಷ್ಟವಾಗಿ ಎಚ್ಚರಿಕೆ ಸಂದೇಶವನ್ನು ನೀಡಿದ್ದು, ಹಲವು ಅಭಿಪ್ರಾಯಗಳಲ್ಲಿ ಇದನ್ನು ಕಡೆಗಣಿಸಿದಂತಿದೆ.

* ಸುದ್ದಿಪುಟದಲ್ಲಿ ಪ್ರಕಟವಾಗಲಿ ಅಥವಾ ಅಭಿಪ್ರಾಯ ಪುಟದಲ್ಲಿ ಪ್ರಕಟವಾಗಲಿ, ಸುಳ್ಳು ಸುದ್ದಿ, ಮಾಧ್ಯಮ ಎದುರಿಸಬೇಕಾದ ದೊಡ್ಡ ಸಮಸ್ಯೆ ಎಂದು ನೀವು ನಂಬುತ್ತೀರಾ?

ನಲಪತ್: ಹಲವು ಸುಳ್ಳುಸುದ್ದಿಗಳನ್ನು ಸತ್ಯ ಎಂದು ಬಿಂಬಿಸಿದ ಘಟನೆಗಳ ಬಗ್ಗೆ ಹೇಳಲು ನನಗೆ ಅವಕಾಶ ನೀಡಿ. ಪ್ರತಿ ಬಾರಿ ಆನ್‌ಲೈನ್ ಮಾಧ್ಯಮಗಳು ಈ ಬಗ್ಗೆ ನೇರವಾಗಿ ಪ್ರಶ್ನಿಸುವ ಬಗ್ಗೆ ನನಗೆ ಹೆಮ್ಮೆ ಇದೆ. ಈ ನಿದರ್ಶನದಲ್ಲಿ, ಕಟ್ಟುಕಥೆ ಪ್ರಕಟಿಸುವ ಹಕ್ಕು ಹೊಂದಿದ್ದಾರೆ ಎಂಬ ನಿಲುವನ್ನು ಪ್ರಶ್ನಿಸಲಾಗಿದೆ. ಸಂಪಾದಕರ ಅಭಿಪ್ರಾಯಕ್ಕಿಂತ ಭಿನ್ನ ಅಭಿಪ್ರಾಯಗಳನ್ನು ಕತ್ತರಿಸಲು ಅಭಿವ್ಯಕ್ತಿ ಸ್ವಾತಂತ್ರ ಅಗತ್ಯ ಎನ್ನುವುದು ಪ್ರತ್ಯೇಕ. ಆದರೆ ಟಿಎಸ್‌ಜಿ ಸಾಮಾನ್ಯವಾಗಿ ನಾನು ಒಪ್ಪಿಕೊಳ್ಳದ ಅಭಿಪ್ರಾಯವನ್ನು ಹೊಂದಿರುತ್ತದೆ. ನಮ್ಮ ಪತ್ರಿಕೆ ಸಂಪಾದಕೀಯ ನಿರ್ದೇಶಕ ಪ್ರತಿಧ್ವನಿಯ ಚೇಂಬರ್ ಆಗಬಾರದು ಎಂದು ನಿರ್ಧರಿಸುವ ಹಕ್ಕು ಸಂಪಾದಕರಿಗೆ ಇದೆ.

ಕೃಪೆ: scroll.in

Writer - ರೋಹನ್ ವೆಂಕಟರಾಮಕೃಷ್ಣನ್

contributor

Editor - ರೋಹನ್ ವೆಂಕಟರಾಮಕೃಷ್ಣನ್

contributor

Similar News