ಅಂಕಪಟ್ಟಿಯ ಅಗ್ರಸ್ಥಾನಿ ಕೆಕೆಆರ್‌ಗೆ ಪಂಜಾಬ್ ಸವಾಲು

Update: 2018-04-20 18:36 GMT

ಕೋಲ್ಕತಾ, ಎ.20: ಹನ್ನೊಂದನೇ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸವಾಲು ಎದುರಿಸಲಿದೆ. ವೆಸ್ಟ್ ಇಂಡೀಸ್‌ನ ಜಮೈಕಾದ ಇಬ್ಬರು ಬಿಗ್ ಹಿಟ್ಟರ್‌ಗಳಾದ ಆ್ಯಂಡ್ರೆ ರಸ್ಸಲ್ ಹಾಗೂ ಕ್ರಿಸ್ ಗೇಲ್ ಪಂಜಾಬ್ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ.

ಕಳೆದ ರಾತ್ರಿ ಮೊಹಾಲಿಯಲ್ಲಿ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಔಟಾಗದೆ ಶತಕ ಸಿಡಿಸಿದ ಗೇಲ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಗೇಲ್ ಇನಿಂಗ್ಸ್‌ನಲ್ಲಿ ಒಟ್ಟು 11 ಸಿಕ್ಸರ್‌ಗಳಿದ್ದವು. ಈ ಪೈಕಿ ಏಳು ಸಿಕ್ಸರ್‌ಗಳನ್ನು ವಿಶ್ವದ ನಂ.1 ಟ್ವೆಂಟಿ-20 ಬೌಲರ್ ರಶೀದ್ ಖಾನ್ ಬೌಲಿಂಗ್‌ನಲ್ಲಿ ಸಿಡಿಸಿದ್ದಾರೆ. ಐಪಿಎಲ್ ಆಟಗಾರರ ಹರಾಜಿನ ಮೊದಲೆರಡು ಸುತ್ತಿನಲ್ಲಿ ಯಾರಿಗೂ ಬೇಡವಾಗಿ ಹರಾಜಾಗದೇ ಉಳಿದಿದ್ದ ಗೇಲ್ ಇದೀಗ ಅಬ್ಬರದ ಬ್ಯಾಟಿಂಗ್ ಮೂಲಕ ತನ್ನನ್ನು ಕಡೆಗಣಿಸಿದವರಿಗೆ ತಿರುಗೇಟು ನೀಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೆಕೆಆರ್ ತಂಡವನ್ನು ಪ್ರತಿನಿಧಿಸಿದ್ದ ಗೇಲ್ ಆಟಗಾರರ ಹರಾಜಿನಲ್ಲಿ ಮಾರಾಟವಾಗದೇ ಉಳಿದಿದ್ದಾಗ ವೀರೇಂದ್ರ ಸೆಹ್ವಾಗ್ ಜೀವದಾನ ನೀಡಿದ್ದರು.

ಈ ವರ್ಷದ ಐಪಿಎಲ್‌ನ ಮೊದಲೆರಡು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿದ್ದ ಗೇಲ್ ಕಳೆದೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ 63 ರನ್ ಗಳಿಸಿ ಮೊದಲಿನ ಲಯಕ್ಕೆ ಮರಳಿದ್ದಾರೆ. ಸ್ಪಿನ್ನರ್‌ಗಳ ಸ್ನೇಹಿ ಈಡನ್‌ಗಾರ್ಡನ್ಸ್ ಸ್ಟೇಡಿಯಂ ಪಿಚ್‌ನಲ್ಲಿ ಗೇಲ್ ಕೆಕೆಆರ್‌ನ ಸ್ಪಿನ್ನರ್‌ಗಳಾದ ಸುನೀಲ್ ನರೇನ್ ಹಾಗೂ ಕುಲ್‌ದೀಪ್ ಯಾದವ್‌ರಿಂದ ಕಠಿಣ ಸವಾಲು ಎದುರಿಸಬೇಕಾಗಿದೆ. ಯಾದವ್ ನೇತೃತ್ವದ ಕೆಕೆಆರ್ ಬೌಲಿಂಗ್ ಸರದಿಯಲ್ಲಿ ಪಿಯೂಷ್ ಚಾವ್ಲಾ ಹಾಗೂ ಪಾರ್ಟ್ -ಟೈಂ ಬೌಲರ್ ನಿತೀಶ್ ರಾಣಾ ಅವರಿದ್ದಾರೆ.

 ಪಂಜಾಬ್ ತಂಡದ ಬೌಲಿಂಗ್ ವಿಭಾಗವನ್ನು ಆರ್.ಅಶ್ವಿನ್ ಮುನ್ನಡೆಸಲಿದ್ದಾರೆ. ಪಂಜಾಬ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆ.ಎಲ್. ರಾಹುಲ್, ಮಾಯಾಂಕ್ ಅಗರವಾಲ್ ಹಾಗೂ ಕರುಣ್ ನಾಯರ್ ಅವರಿದ್ದಾರೆ. ಆಸ್ಟ್ರೇಲಿಯದ ಆ್ಯರೊನ್ ಫಿಂಚ್ ಹಾಗೂ ಭಾರತದ ಯುವರಾಜ್ ಸಿಂಗ್ ಉತ್ತಮ ಫಿನಿಶರ್‌ಗಳಾಗಿದ್ದು, ಈ ತನಕ ತಮ್ಮ ಸಾಮರ್ಥ್ಯ ತೋರಿಸಿಲ್ಲ. ಈ ಇಬ್ಬರು ಆಟಗಾರರು ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದ್ದಾರೆ.

ಜಮೈಕಾದ ಇನ್ನೋರ್ವ ಆಕ್ರಮಣಕಾರಿ ಆಟಗಾರ ರಸ್ಸಲ್ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 12 ಎಸೆತಗಳಲ್ಲಿ 41 ರನ್ ಗಳಿಸಿದ್ದರು.

ಮುಂಬೈ ಇಂಡಿಯನ್ಸ್‌ನ ಮಾಜಿ ಆಟಗಾರ ನಿತೀಶ್ ರಾಣಾ ಡೆಲ್ಲಿ ಹಾಗೂ ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ಸತತ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದಿದ್ದರು. ಅರೆಕಾಲಿಕ ಬೌಲರ್ ಆಗಿರುವ ರಾಣಾ ಆರ್‌ಸಿಬಿಯ ವಿರಾಟ್ ಕೊಹ್ಲಿ, ರಾಜಸ್ಥಾನದ ಅಜಿಂಕ್ಯ ರಹಾನೆ ವಿಕೆಟ್ ಪಡೆದು ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

ಕೆಕೆಆರ್ ಸ್ಪಿನ್ ಬೌಲರ್‌ಗಳು ಜೈಪುರದಲ್ಲಿ 14 ಓವರ್ ಬೌಲಿಂಗ್ ಮಾಡಿದ್ದು, ರಾಜಸ್ಥಾನದ ಐದು ವಿಕೆಟ್‌ಗಳನ್ನು ಕಬಳಿಸಿದ್ದರು. ತಂಡಕ್ಕೆ 5 ವಿಕೆಟ್‌ಗಳ ಗೆಲುವು ತಂದಿದ್ದರು.

ಪಂದ್ಯದ ಸಮಯ: ಸಂಜೆ 4:00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News