ಅರ್ಜುನ ಪ್ರಶಸ್ತಿ: ಮಣಿಕಾ ಬಾತ್ರಾ ಹೆಸರು ಶಿಫಾರಸು

Update: 2018-04-20 18:41 GMT

ಹೊಸದಿಲ್ಲಿ, ಎ.20: ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಾಲ್ಕು ಪದಕಗಳನ್ನು ಜಯಿಸಿರುವ ಮಣಿಕಾ ಬಾತ್ರಾ ಹೆಸರನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಭಾರತದ ಟೇಬಲ್ ಟೆನಿಸ್ ಸಂಸ್ಥೆ(ಟಿಟಿಎಫ್‌ಐ)ಶುಕ್ರವಾರ ಶಿಫಾರಸು ಮಾಡಿದೆ. ‘‘ನಾವು ಇಂದು ಬಾತ್ರಾ ಹೆಸರನ್ನು ಕಳುಹಿಸಿಕೊಟ್ಟಿದ್ದೇವೆ. ಗೋಲ್ಡ್‌ಕೋಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಬಾತ್ರಾರನ್ನು ಸರಕಾರದ ಪ್ರಶಸ್ತಿ ಆಯ್ಕೆ ಸಮಿತಿಯು ನಿರ್ಲಕ್ಷಿಸುವ ಸಾಧ್ಯತೆ ತುಂಬಾ ವಿರಳ’’ ಎಂದು ಟಿಟಿಎಫ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

ಟೇಬಲ್ ಟೆನಿಸ್‌ನ ಟೀಮ್ ವಿಭಾಗದಲ್ಲಿ ಚಿನ್ನ ಹಾಗೂ ಸಿಂಗಲ್ಸ್‌ನಲ್ಲಿ ಮತ್ತೊಂದು ಚಿನ್ನ ಜಯಿಸಿರುವ ಬಾತ್ರಾ ಗೋಲ್ಡ್ ಕೋಸ್ಟ್ ಗೇಮ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದರು. 22ರ ಹರೆಯದ ಬಾತ್ರಾ ವಿಶ್ವದ ನಂ.4ನೇ ಆಟಗಾರ್ತಿ ಹಾಗೂ ಮೂರು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಗಾಪುರದ ಫೆಂಗ್ ಟಿಯಾನ್‌ವೀ ಅವರನ್ನು ಟೂರ್ನಮೆಂಟ್‌ನಲ್ಲಿ 2 ಬಾರಿ ಸೋಲಿಸಿದ್ದರು.

ವೌಮಾದಾಸ್‌ರೊಂದಿಗೆ ಮಹಿಳೆಯರ ಡಬಲ್ಸ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದ ಬಾತ್ರಾ ಅವರು ಜಿ.ಸತ್ಯನ್‌ರೊಂದಿಗೆ ಮಿಕ್ಸೆಡ್ ಡಬಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಬಾತ್ರಾ ಎ.29 ರಿಂದ ಸ್ವೀಡನ್‌ನಲ್ಲಿ ಆರಂಭವಾಗಲಿರುವ ವರ್ಲ್ಡ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News