ಕೊಹ್ಲಿಯ ಪರಿಚಯ ಬರೆದ ಸಚಿನ್ !

Update: 2018-04-21 05:47 GMT

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವ ಕಂಡ ಶ್ರೇಷ್ಟ ಕ್ರಿಕೆಟಿಗರಲ್ಲೊಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ವಲ್ಪ ಸಮಯದಲ್ಲೇ ಪ್ರತಿಭೆಯ ಮೂಲಕ ವಿಶ್ವ ಪ್ರಸಿದ್ಧಿಯಾದ 'ರನ್ ಮೆಷಿನ್' ಖ್ಯಾತಿಯ ಈ ಕ್ರಿಕೆಟಿಗ ಟೈಮ್ ವಿಶ್ವದ 100 ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಬಗ್ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರೇ ಭಾರತ ತಂಡದ ನಾಯಕನ ಬಗ್ಗೆ ಬರೆದ ಪರಿಚಯ ಈ ಕೆಳಗಿದೆ.

2008ರಲ್ಲಿ ನಡೆದ ಅಂಡರ್-19 ವಿಶ್ವ ಕಪ್ ಭಾರತದ ಪಾಲಿಗೆ ಬಹಳ ಮಹತ್ವದ್ದಾಗಿತ್ತು, ಮುಂದೆ ದೇಶವನ್ನು ಪ್ರತಿನಿಧಿಸಲಿರುವ ಯುವಕರ ತಂಡವನ್ನು ಗುರುತಿಸಲು ಅದು ನಿರ್ಣಾಯಕವಾಗಿತ್ತು. ಈ ಯುವ ಅತ್ಯುತ್ಸಾಹಿ ಆಟಗಾರ ಕಿರಿಯರ ತಂಡವನ್ನು ಮುನ್ನಡೆಸುತ್ತಿರುವುದನ್ನು ಆಗ ನಾನು ಮೊದಲು ನೋಡಿದ್ದೆ. ಇಂದು ವಿರಾಟ್ ಕೊಹ್ಲಿ ಎಂಬ ಹೆಸರು ಮನೆಮಾತಾಗಿದೆ ಹಾಗೂ ಆತ ಕ್ರಿಕೆಟ್ ಚಾಂಪಿಯನ್ ಆಗಿದ್ದಾನೆ. ಹಿಂದೆ ಕೂಡ ರನ್ನುಗಳಿಗಾಗಿ ಆತನಿಗಿದ್ದ ಹಸಿವು ಮತ್ತು ಆತ ಕಾಯ್ದುಕೊಳ್ಳುತ್ತಿದ್ದ ಸ್ಥಿರತೆ ಗಮನಾರ್ಹವಾಗಿತ್ತು. ಇದು ಆತನ ಆಟದ ಮುಖ್ಯ ಗುಣಲಕ್ಷಣವೂ ಆಗಿತ್ತು.

ಪ್ರತಿಯೊಬ್ಬ ಕ್ರೀಡಾಳುವಿಗೆ ಉತ್ತಮ ಆಟ ಮತ್ತು ಕೆಟ್ಟ ಆಟದ ಬಗ್ಗೆ ಚೆನ್ನಾಗಿ ಅರಿವಿರುತ್ತದೆ. ನಿರಾಶಾದಾಯಕ ವೆಸ್ಟ್ ಇಂಡೀಸ್ ಸರಣಿಯೊಂದರಲ್ಲಿ ಎದುರಿಸಬೇಕಾಗಿ ಬಂದ ಟೀಕೆಯೊಂದಿಗೆ ವಿರಾಟ್ ತವರು ದೇಶಕ್ಕೆ ಗುರಿಯೊಂದರೊಂದಿಗೆ ಹಿಂದಿರುಗಿ ಬಂದಿದ್ದರು, ತಮ್ಮ ಆಟದ ಶೈಲಿಯನ್ನಷ್ಟೇ ಅಲ್ಲದೆ ತಮ್ಮ ಫಿಟ್ನೆಸ್ ಮಟ್ಟವನ್ನೂ ಸುಧಾರಿಸುವ ಗುರಿ ಅವರದ್ದಾಗಿತ್ತು. ನಂತರ ಆತನಿಗೆ ಹಿಂದೆ ನೋಡುವ ಪ್ರಶ್ನೆಯೇ ಬಂದಿರಲಿಲ್ಲ.

ನಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಗಮನ ಕೇಂದ್ರೀಕರಿಸಿದಲ್ಲಿ, ನಮ್ಮ ಟೀಕಾಕಾರರೂ ನಮ್ಮ ಅಭಿಮಾನಿಗಳಾಗುತ್ತಾರೆ ಎಂದು ನನ್ನ ತಂದೆ ನನಗೆ ಯಾವತ್ತೂ ಹೇಳುತ್ತಿದ್ದರು. ಆಟದ ವಿಚಾರ ಬಂದಾಗ ವಿರಾಟ್ ಗೆ ಇದೇ ದೃಷ್ಟಿಕೋನ ಇದೆ ಎಂದು ಅನಿಸುತ್ತದೆ.

ಅವರ ಮುಂದಿನ ಕ್ರಿಕೆಟ್ ಜೀವನ ಉಜ್ವಲವಾಗಲಿ ಎಂದು ಹಾರೈಸುತ್ತೇನೆ. ಆತ ಭಾರತಕ್ಕೆ ಕ್ರಿಕೆಟ್ ಮೂಲಕ ಇನ್ನಷ್ಟು ಹೆಮ್ಮೆ ಮತ್ತು ಖ್ಯಾತಿ ತರುವುದನ್ನು ಮುಂದುವರಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಗೋ ವಿರಾಟ್ !

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News