ಮಾ ತುಜೇ ಸಲಾಮ್

Update: 2018-04-21 12:06 GMT

ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ಓಪನ್ ನ್ಯೂರಲ್ ಡಿಫೆಕ್ಟ್ ಎಂಬ ಅಪರೂಪದ ಕಾಯಿಲೆ ಕುರಿತಂತೆ ಮತ್ತು ಆ ಸಮಸ್ಯೆಯನ್ನು ಎದುರಿಸಿ ಗೆದ್ದ ತಾಯಿಯೊಬ್ಬಳ ಸ್ಥೈರ್ಯದ ಕತೆ ಇದು.

ಮನೆಗೆ ಬಂದ ನಂತರ ನಾನು ಎದುರಿಸಿದ್ದು ಮನೆಗೆ ಬರುವವರ ಸಂಬಂಧಿಕರ ಚುಚ್ಚು ಮಾತು ಮತ್ತು ಅನುಕಂಪ ಬೆರೆತ ವ್ಯಂಗ್ಯ ನುಡಿ. ಇದು ನನ್ನನ್ನು ನಾನು ಮತ್ತಷ್ಟು ಗಟ್ಟಿಮಾಡಿಕೊಳ್ಳುವಲ್ಲಿ ಸಹಾಯ ಮಾಡಿತು. ಜನರು ಮಾಡುವ ಟೀಕೆಯನ್ನು ಹೇಗೆ ತೆಗೆದುಕೊಳ್ಳಬೇಕು ಮತ್ತು ಅದನ್ನು ಹೇಗೆ ಎದುರಿಸಬೇಕು ಎಂದು ಚೆನ್ನಾಗಿ ಗೊತ್ತಾಯಿತು. ನಿಜವಾಗಲೂ ಇದು ನನಗೆ ನನ್ನೊಳಗೆ ಆತ್ಮಸ್ಥೈರ್ಯ ತುಂಬಿಕೊಳ್ಳುವಂತೆ ಮಾಡಿತು. ಮಗುವಿಗೆ ಒಂದು ತಿಂಗಳ ನಂತರ ಓಪನ್ ಆಗಿದ್ದ ಬೆನ್ನುಹುರಿಯ ಭಾಗದಲ್ಲಿ ತೆಳುವಾದ ಈರುಳ್ಳಿ ಸಿಪ್ಪೆಯಂತಹ ಒಂದು ಪೊರೆ ಬೆಳೆಯಲು ಶುರುವಾಗಿತ್ತು. ಇದು ನಮಗೆ ಒಂದು ಆಶಾಕಿರಣವಾಗಿ ಕಾಣಿಸಿತು.

ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರತಿನಿತ್ಯವೂ ಹೊಸ ಹೊಸ ಆವಿಷ್ಕಾರಗಳು ಆಗುತ್ತವೆ. ಇವೆಲ್ಲವೂ ಮನುಷ್ಯನ ಜೀವನವನ್ನು ಮತ್ತಷ್ಟು ಮಗದಷ್ಟು ಸಹ್ಯವಾಗಿ ಮಾಡುತ್ತದೆ. ಅದರಲ್ಲೂ ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಹೊಸ ಸಂಶೋಧನೆಗಳಿಂದ ಒಂದು ಮಗು ಭ್ರೂಣವಾಗಿರುವಾಗಲೇ ಅದರ ಆರೋಗ್ಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ. ಆದರೂ ವೈದ್ಯಲೋಕ ಮತ್ತು ಅಂತಹ ತಂತ್ರಜ್ಞಾನದ ಬಗ್ಗೆ ಸ್ವಲ್ಪ ಅತಿ ಹೆಚ್ಚೇ ನಂಬಿಕೆ ಇಟ್ಟಿರುವ ನಮಗೆ ಕೆಲವೊಮ್ಮೆ ನಮಗೆ ಗೊತ್ತಿಲ್ಲದೇ ವೈದ್ಯಕೀಯ ಆವಿಷ್ಕಾರವೂ ಕಂಡುಹಿಡಿಯಲಾಗದಂತಹ ಕೆಲವು ಅವಘಡಗಳು ನಡೆದು ಬಿಡುತ್ತವೆೆ. ಅಂತಹ ಸಮಯದಲ್ಲಿ ಬಹಳಷ್ಟು ಜನ ಧೃತಿಗೆಡುವುದು ಹೆಚ್ಚು, ಜೊತೆಗೆ ವೈದ್ಯರನ್ನು ನಿಂದಿಸುವವರೇ ಹೆಚ್ಚು. ಆದರೆ ವೈದ್ಯರು ಸಹ ನಮ್ಮನಿಮ್ಮಂತಹ ಸಾಮಾನ್ಯ ಮನುಷ್ಯರೇ ಎಂದು ತಿಳಿದು ಅದನ್ನೇ ಒಂದು ಸವಾಲಾಗಿ ಸ್ವೀಕರಿಸಿ ಗೆದ್ದಿರುವ/ಗೆಲ್ಲುವ ಪ್ರಯತ್ನ ಪಡುವ ಅಪರೂಪದ ಜನಗಳೂ ನಮ್ಮ ನಡುವೆ ಇರುತ್ತಾರೆ. ಅಂತಹವರು ಸಮಾಜಕ್ಕೆ ಮಾದರಿ ಮಾತ್ರ ಅಲ್ಲದೇ ಅನುಕರಣೆಗೆ ಯೋಗ್ಯರೂ ಆಗಿರುತ್ತಾರೆ. ಇಂತಹ ಅಪರೂಪದ ತಾಯಿ ಯೊಬ್ಬರ ಪರಿಚಯ ನನಗೆ ಆಯಿತು.

 ತಾನೇ ಸ್ವತಃ ವೈದ್ಯೆಯಾಗಿ ಗರ್ಭಿಣಿಯಾದಾಗ ಏನೆಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೊ ಅದನ್ನೆಲ್ಲ ತೆಗೆದುಕೊಂಡಾಗಲೂ ಒಂಬತ್ತು ವರ್ಷದ ಹಿಂದೆ ತನಗೆ ಹುಟ್ಟಿದ ಎರಡನೇ ಮಗು ಓಪನ್ ನ್ಯೂರಲ್ ಡಿಫೆಕ್ಟ್ ಎಂಬ ಕಾಯಿಲೆಯಿಂದ ಬಳಲುತ್ತಿದೆ ಎಂದು ತಿಳಿದ ನಂತರವೂ ಎದೆಗುಂದದೆ ಇದು ನನಗೆ ಭಗವಂತ ಕೊಟ್ಟಿರುವ ಸವಾಲು ಎಂದು ಸ್ವೀಕರಿಸಿರುವುದಷ್ಟೇ ಅಲ್ಲದೇ ಅದನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಮಾತೃ ಹೃದಯ ದಂಪತಿ ತಮ್ಮ ಅನುಭವವನ್ನು ನನ್ನ ಮುಂದೆ ಹೀಗೆ ಹಂಚಿಕೊಂಡರು.

   ನಾನು ಅವರನ್ನು ಅವರ ಮಗುವಿನ ಬಗ್ಗೆ ಅದರ ಇಲ್ಲಿಯವರೆಗಿನ ಬೆಳವಣಿಗೆಯ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದಾಗ ಆ ತಾಯಿ ಅಷ್ಟೇ ಸಮಾಧಾನದಿಂದ ಮತ್ತು ಸವಿವರವಾಗಿ ತಮ್ಮ ಅನುಭವವನ್ನು ಹಂಚಿಕೊಂಡರು.

►ವಾತ್ಸಲ್ಯ ಎನ್ನುವುದು ಒಂದು ಅನೂಹ್ಯವಾದ ಭಾವನೆ.ನೀವು ಎರಡನೇ ಬಾರಿಗೆ ತಾಯಿಯಾಗುತ್ತಿದ್ದುದರಿಂದ ನಿಮ್ಮ ಮನಃಸ್ಥಿತಿ ಏನಾಗುತ್ತಿತ್ತು?

-ಎರಡನೆ ಬಾರಿಗೆ ಗರ್ಭಿಣಿಯಾದಾಗ ಇದ್ದ ಕನಸು ಮಗು ಆರೋಗ್ಯವಾಗಿ ಜನಿಸಲಿ ಎಂಬುದು ಮತ್ತು ಅದಕ್ಕೆ ನನ್ನಲ್ಲಿ ಸಾಧ್ಯವಾದಷ್ಟು ಧನಾತ್ಮಕತೆಯನ್ನು ಕೊಡಬೇಕು ಎಂದು. ಮೊದಲನೆಯ ಮಗು ನಾರ್ಮಲ್ ಆಗಿ ಮತ್ತು ಆರೋಗ್ಯವಾಗಿ ಇದ್ದಿದ್ದರಿಂದ ಎರಡನೆಯ ಮಗು ಆರೋಗ್ಯವಾಗಿಯೇ ಇರುತ್ತದೆ ಇಂಬ ದೃಢವಾದ ನಂಬಿಕೆಯಿತ್ತು. ಆದರೆ 9 ತಿಂಗಳು 20 ದಿನವಾದರೂ ಹೆರಿಗೆಯಾಗದೇ ಇದ್ದಾಗ ಒಂದು ಸಣ್ಣ ಭಯ ಶುರುವಾಗಿತ್ತು.

►ಎರಡನೆಯ ಮಗುವಿನದ್ದು ಸಹಜ ಹೆರಿಗೆನಾ ಮತ್ತು ಮಗುವಿಗೆ ಈ ರೀತಿಯ ಅಂದರೆ ಓಪನ್ ನ್ಯೂರಲ್ ಡಿಫೆಕ್ಟ್ ಇದೆ ಎಂದು ನಿಮಗೆ ಗೊತ್ತಾಗಿದ್ದು ಯಾವಾಗ?

-ಹೌದು, ಎರಡನೇ ಮಗು ಸಹ ಸಹಜ ಹೆರಿಗೆಯೇ ಆಗಿತ್ತು. ಮಗು ಹುಟ್ಟಿ ನಾಲ್ಕು ಗಂಟೆಯ ನಂತರ ನನ್ನ ಹೆರಿಗೆ ಮಾಡಿಸಿದ ವೈದ್ಯರು ತಮ್ಮ ಛೆಂಬರ್‌ಗೆ ಕರೆದು ನಿಮ್ಮ ಮಗುವಿಗೆ ಓಪನ್ ನ್ಯೂರಲ್ ಡಿಫೆಕ್ಟ್ ಇದೆ ಎಂದು ತಿಳಿಸಿದರು ಎಂದು ಹೇಳಿ ಒಂದರೆಗಳಿಗೆ ಮೌನವಾದರು. ಒಂದು ವೇಳೆ ಮೊದಲೇ ಇಂತಹ ಮಗು ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಎಂದು ಗೊತ್ತಾಗಿದ್ದರೆ ಇವರು ಏನು ಮಾಡುತ್ತಿದ್ದರು ಎಂಬೆಲ್ಲ ಪ್ರಶ್ನೆಗಳು ನನ್ನ ತಲೆಯೊಳಗೆ ಅಪ್ಪಳಿಸುತ್ತಿತ್ತು. ನನ್ನ ಎದುರಿಗೆ ಕುಳಿತಿದ್ದ ಅವರಿಗೆ ನನ್ನ ಮೂಖ ಭಾವನೆಗಳಿಂದಲೇ ಎಲ್ಲವೂ ಅರ್ಥವಾಗಿತ್ತು ಅನ್ನಿಸುತ್ತದೆ.

►ಒಬ್ಬ ವೈದ್ಯೆಯಾಗಿ ಇಂದು ವೈದ್ಯಲೋಕ ಇಷ್ಟು ಮುಂದುವರಿ ದಿದ್ದರೂ, ಈ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲವೇ?

-ನನಗೆ ಒಂದು ವೇಳೆ ಮೊದಲೇ ಇಂತಹ ಮಗು ನನ್ನ ಗರ್ಭದೊಳಗೆ ಬೆಳೆಯುತ್ತಿದೆ ಇಂದು ಗೊತ್ತಾಗಿದ್ದರು, ನಾನು ಮಗುವನ್ನು ತೆಗೆಸುತ್ತಿರಲಿಲ್ಲ. ಅದರ ಪಾಲನೆ ಪೋಷಣೆ ಮಾಡಿಯೇ ಮಾಡುತ್ತಿದ್ದೆ. ಇಲ್ಲಿ ನನ್ನ ಮಗುವಿಗೆ ಬೆನ್ನಹುರಿಯಲ್ಲಿ ಓಪನ್ ನ್ಯೂರಲ್ ಡಿಫೆಕ್ಟ್ ಇರುವ ಭಾಗದಲ್ಲಿ ಸ್ವಲ್ಪ ಉಬ್ಬಿದ ಹಾಗೆ ಇದ್ದುದ್ದರಿಂದ ಇದು ಯಾವುದೇ ರೀತಿಯ ಸ್ಕ್ಯಾನಿಂಗ್‌ನಲ್ಲಿ ಐಡೆಂಟಿಫೈಯ್ ಆಗುತ್ತಿರಲಿಲ್ಲ. ಮಗುವಿನ ಮುಖ ನೋಡಿದ ತಕ್ಷಣ ನನ್ನೊಳಗೆ ಎಲ್ಲೋ ನಂಬಿಕೆ ಇತ್ತು. ನಾನು ಈ ಪರೀಕ್ಷೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲೆ ಎಂಬ ಭರವಸೆಯಿತ್ತು. ಆದ್ದರಿಂದಲೇ ಬೆಂಗಳೂರಿಗೆ ಹೆಚ್ಚಿನ ವೈದ್ಯಕೀಯ ಪರೀಕ್ಷೆಗಾಗಿ ಕರೆದುಕೊಂಡು ಹೋದೆವು. ನೀವು ಒಬ್ಬ ವೈದ್ಯೆಯಾಗಿ ಮಗುವಿನ ಪರಿಸ್ಥಿತಿ ಗೊತ್ತಿದ್ದು ಯಾಕೆ ಪ್ರಯತ್ನಪಡಲು ಹೋಗುತ್ತೀರಾ ಎಂದು ಜನ ಪ್ರಶ್ನಿಸುತ್ತಿದ್ದರು, ಆಗೆಲ್ಲ ನನಗೆ ನಾನು ವ್ಯೆದ್ಯೆಯಾದರೂ ಒಬ್ಬ ತಾಯಿಯೆಂದು ಇವರಿಗೆ ಏಕೆ ಅರ್ಥವಾಗುತ್ತಿಲ್ಲ ಎಂದು ಅನ್ನಿಸುತ್ತಿತ್ತು. ಆದರೆ, ಅಟ್ ದಿ ಸೇಮ್ ಟೈಮ್ ಅವರು ವಾಸ್ತವದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಾನು ನನ್ನ ಪ್ರಯತ್ನ ಬಿಡಬಾರದು ಎಂದು ನಿರ್ಧರಿಸುತ್ತಿದ್ದೆ. ಇನ್ನೊಬ್ಬ ವೈದ್ಯರ ಬಳಿ ಹೋದಾಗ ಈಗಾಗಲೆ ಈ ರೀತಿಯ 5 ರಿಂದ 6 ಆಪರೇಷನ್ ಮಾಡಿದ್ದ ಅವರು ಈ ಮಗುವಿನ ವಿಷಯದಲ್ಲಿ ಸುಮಾರು 10 ಸೆಂಟಿ ಮೀಟರ್‌ನಷ್ಟು ಗ್ಯಾಪ್ ಇದ್ದುದರಿಂದ ಅಲ್ಲಿ ಹೊಸ ಚರ್ಮ ಬೆಳೆಯುವ ಸಾಧ್ಯತೆ ಕಡಿಮೆ ಎಂದೂ, ಒಂದು ಪಕ್ಷ ಮಗು ಎರಡು ದಿನ ಬದುಕಿದರೆ ಒಂದು ವಾರ ಬದುಕುವ ನಿರೀಕ್ಷೆ ಮಾಡಬಹುದು, ಹಾಗೇ ಮತ್ತೆ ಒಂದು ವಾರ ಬದುಕಿದರೆ ಇನ್ನು ಹದಿನೈದು ದಿನ ಬದುಕಬಹುದು ಎಂದು ನಿರ್ಧರಿಸಬಹುದು. ಆದರೆ ಇದರ ಮಧ್ಯೆ ಬೆನ್ನುಹುರಿಯ ಮಣಿಕಟ್ಟು ಓಪನ್ ಇರುವುದರಿಂದ ಯಾವ ಗಳಿಗೆಯಲ್ಲಾದರೂ Meningitis ಗೆ ಮಗು ತುತ್ತಾಗಬಹುದು ಎಂದು ಅಭಿಪ್ರಾಯಪಟ್ಟರು.

ಮನೆಗೆ ಬಂದ ನಂತರ ನಾನು ಎದುರಿಸಿದ್ದು ಮನೆಗೆ ಬರುವವರ ಸಂಬಂಧಿಕರ ಚುಚ್ಚು ಮಾತು ಮತ್ತು ಅನುಕಂಪ ಬೆರೆತ ವ್ಯಂಗ್ಯ ನುಡಿ. ಇದು ನನ್ನನ್ನು ನಾನು ಮತ್ತಷ್ಟು ಗಟ್ಟಿಮಾಡಿಕೊಳ್ಳುವಲ್ಲಿ ಸಹಾಯ ಮಾಡಿತು. ಜನರು ಮಾಡುವ ಟೀಕೆಯನ್ನು ಹೇಗೆ ತೆಗೆದುಕೊಳ್ಳಬೇಕು ಮತ್ತು ಅದನ್ನು ಹೇಗೆ ಎದುರಿಸಬೇಕು ಎಂದು ಚೆನ್ನಾಗಿ ಗೊತ್ತಾಯಿತು. ನಿಜವಾಗಲೂ ಇದು ನನಗೆ ನನ್ನೊಳಗೆ ಆತ್ಮಸ್ಥೈರ್ಯ ತುಂಬಿಕೊಳ್ಳುವಂತೆ ಮಾಡಿತು. ಮಗುವಿಗೆ ಒಂದು ತಿಂಗಳ ನಂತರ ಓಪನ್ ಆಗಿದ್ದ ಬೆನ್ನುಹುರಿಯ ಭಾಗದಲ್ಲಿ ತೆಳುವಾದ ಈರುಳ್ಳಿ ಸಿಪ್ಪೆಯಂತಹ ಒಂದು ಪೊರೆ ಬೆಳೆಯಲು ಶುರುವಾಗಿತ್ತು. ಇದು ನಮಗೆ ಒಂದು ಆಶಾಕಿರಣವಾಗಿ ಕಾಣಿಸಿತು. ಮಗುವನ್ನು ಕೆಲವು ಮಕ್ಕಳ ತಜ್ಞರ ಬಳಿ ಕರೆದುಕೊಂಡು ಹೋದೆವು. ಆದರೆ ಎಲ್ಲರೂ ಇದು ಏನು ಅಂತಹ ದೊಡ್ಡ ವಿಷಯವಲ್ಲ್ಲ ಈ ತೆಳುಪೊರೆ ಯಾವಾಗಲಾದರೂ ಕಿತ್ತು ಹೋಗಬಹುದು ಎಂದರು. ಆದರೆ ನಾವು ಧೃತಿಗೆಡಲಿಲ್ಲ.

ಈಗ ಇನ್ನೊಂದು ಪರೀಕ್ಷೆ ಎದುರಿಸಬೇಕಾಗಿತ್ತು. ಮಗುವನ್ನು ಬೋರಲು ಮಲಗಿಸಿದ್ದರಿಂದ ಅವಳ ಎರಡು ಕಣ್ಣು ಒಂದೇ ಕಡೇ ತಿರುಗುತ್ತಿತ್ತು. ಎಡಕ್ಕೆ ತಿರುಗಿದರೆ ದೃಷ್ಟಿ ಎಡಕ್ಕೆ, ಬಲಕ್ಕೆ ತಿರುಗಿದರೆ ಬಲಕ್ಕೆ, ಇದನ್ನು ಸರಿ ಮಾಡಲು ಮಗುವನ್ನು ನೇರ ಮಲಗಿಸಿ ಮೇಲಿನಿಂದ ಒಂದು ವಸ್ತುವನ್ನು ತೂಗಿಬಿಟ್ಟು ಅದನ್ನೇ ದಿಟ್ಟಿಸಿ ನೋಡುವಂತೆ ಮಾಡಿದೆವು. ಇದರ ಫಲಿತಾಂಶ ಮಗುವಿನ ದೃಷ್ಟಿ ನೇರವಾಗುವಲ್ಲಿ ಸಹಾಯ ಮಾಡಿತು.

ಇಷ್ಟು ಹೊತ್ತಿಗೆ ಓಪನ್ ಆಗಿದ್ದ ಜಾಗದಲ್ಲಿ ಚರ್ಮ ಬೆಳೆದಿದ್ದರಿಂದ ಸಿಎಸ್‌ಟಿ ಹೊರಗೆ ಬರುವುದು ನಿಂತಿತ್ತು. ಈಗ ಮಗುವಿನ ಆಪರೇಷನ್ ಬಗ್ಗೆ ನಿರ್ಧರಿಸಲು ಬೆಂಗಳೂರಿಗೆ ಕರೆದುಕೊಂಡು ಹೋದೆವು. ಅಲ್ಲಿ ಕೆಲವು ಡಾಕ್ಟರ್‌ಗಳು ಬೇಡವೆಂದು ಇನ್ನು ಕೆಲವರು ಇಷ್ಟು ಸರಿಹೋಗಿರುವ ಮಗು ಪೂರ್ತಿ ಸರಿ ಹೋಗುತ್ತಾಳೆ ಆಪರೇಷನ್ ಮಾಡಿಸಿ ಎಂದು ಧೈರ್ಯ ತುಂಬಿದರು. ನಮಗೆ ಯಾವುದೇ ನಿರ್ಧಾರಕ್ಕೂ ಬರಲಿಕ್ಕೆ ಆಗದೇ ಮಗುವನ್ನು ಮನೆಗೆ ಕರೆದುಕೊಂಡು ಬಂದೆವು. ಒಂದೂವರೆ ವರ್ಷ ಆಗುವವರೆಗೂ ಯಾವುದೇ ರೀತಿಯ ಚಟುವಟಿಕೆ ತೋರಿಸದ ಮಗು ನಂತರ ನಿಧಾನವಾಗಿ ಮಗುಚಿಕೊಂಡು, ಅಂಬೆಗಾಲಿಡಲು, ಕುಳಿತುಕೊಳ್ಳಲು ಶುರು ಮಾಡಿದಳು. ಆದರೆ ಈ ಮಧ್ಯದಲ್ಲಿ ಮಗುವಿನ ಗ್ರಹಿಕೆಯ ಶಕ್ತಿಯಲ್ಲಾಗಲಿ, ವ್ಯಕ್ತಿಗಳನ್ನು ಗುರುತಿಸುವುದರಲ್ಲಿ ಆಗಲಿ ಯಾವುದೇ ತೊಂದರೆ ಇರಲಿಲ್ಲ. ಇದು ನನಗೆ ಪಾಸಿಟಿವ್ ಆಗಿಯೇ ತೋರುತ್ತಿದ್ದುದರಿಂದ ದೈಹಿಕ ಚಟುವಟಿಕೆಗೆ ಕೆಲವು ವ್ಯಾಯಮವನ್ನು ಫಿಜಿಯೋ ಥೆರಪಿಯನ್ನು ನೀಡಿದೆವು. ನಂತರ ಮಗು ನಿಧಾನವಾಗಿ ನಿಂತುಕೊಳ್ಳಲು ಶುರುಮಾಡಿದಳು. ನನ್ನ ಮನಸ್ಸಿನಲ್ಲಿ ಇನ್ನೊಂದಿಷ್ಟು ಆಶಾಭಾವ ಹೆಚ್ಚಿತು. ಇದೇ ಸಂದರ್ಭದಲ್ಲಿ ನಮಗೆ ಗೊತ್ತಾದ ಇನ್ನೊಂದು ವಿಷಯ ಅಂದರೆ ಅವಳಿಗೆ ಅವಳ ಮಲಮೂತ್ರ ವಿಸರ್ಜನೆ ಮೇಲೆ ನಿಯಂತ್ರಣವಿರಲಿಲ್ಲ. ಇದರ ನಡುವೆಯೇ ಸಮಾಜದ ಮುಖ್ಯವಾಹಿನಿಗೆ ತರಲೇಬೇಕೆಂಬ ಗಟ್ಟಿನಿರ್ಧಾರದಿಂದ ಬಹಳಷ್ಟು ಶಾಲೆಗಳನ್ನು ಸುತ್ತಿದ ನಂತರ ಒಂದು ಶಾಲೆಯಲ್ಲಿ ಒಂದು ಗಂಟೆ ಬಿಡುತ್ತಿದ್ದೆವು. ಇಂತಹ ಸಮಯದಲ್ಲಿ ಶಾಲೆಗಳು ಇಂತಹ ಮಗುವನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮುಖಕ್ಕೆ ಹೊಡೆದ ರೀತಿಯಲ್ಲಿಯೇ ಹೇಳುತ್ತಿದ್ದರು. ಇಲ್ಲಿ ನನ್ನ ಮಗುವಿಗೆ ಯಾವುದೇ ರೀತಿಯ ಕಲಿಕಾ ತೊಂದರೆ ಇರಲಿಲ್ಲ. ಆದರೂ ಯಾವುದೇ ಶಾಲೆಗಳು ಇಂತಹ ಮಗುವನ್ನು ತಮ್ಮ ಪ್ರತಿಷ್ಠಿತ ಶಾಲೆಗೆ ಸೇರಿಸಿಕೊಳ್ಳುವಲ್ಲಿ ಹಿಂಜರಿಯುತ್ತಿದ್ದೆವು. ಮಗುವಿಗೆ ನಾಲ್ಕೂವರೆ ವರ್ಷವಾದಾಗ ನಾವು ಆಪರೇಷನ್ ಮಾಡಿಸಿದೆವು. ಇದರಿಂದ ಒಂದಷ್ಟು ಮಟ್ಟಿಗೆ ಅವಳಲ್ಲಿ ಬದಲಾವಣೆಗಳು ಆದವು. ಅಂದರೆ ಮಲಮೂತ್ರ ಮೊದಲಾದಗಳ ಮೇಲೆ ಸ್ವಲ್ಪ ಮಟ್ಟಿನ ಕಂಟ್ರೋಲ್ ಸಿಕ್ಕಿತು ಅವಳಿಗೆ. ಆದರೆ ಈ ಆಪರೇಷನ್ ಮಾಡಿಸಿದ್ದರಿಂದ ಅವಳಲ್ಲಿ ಆಗಾಗ ತಲೆನೋವು ಬರುತ್ತಿತ್ತು. ಹಾಗೆ ತಲೆ ನೋವು ಬಂದಾಗ ಸುಮ್ಮನೆ ಮಲಗಿ ಬಿಡುತ್ತಿದ್ದಳು. ಇದರ ಜೊತೆಗೆ ಕಿವಿ ಸೋರಲು ಶುರುವಾಯಿತು. ಇವೆಲ್ಲಾ ಕಾರಣದಿಂದ ಶಾಲೆಗೆ ಸೇರಿಸುವ ಬಗ್ಗೆ ತೊಂದರೆ ಕಾಣಿಸಿತು. ಆಗ ವಿಧಿಯಿಲ್ಲದೇ ಕಾನೂನಿನ ನೆರವಿನಿಂದ ಒಂದು ಶಾಲೆಯಲ್ಲಿ ಪ್ರವೇಶ ಪಡೆದೆವು. ಈಗ ಮಗಳು ಮೂರನೇ ತರಗತಿಯಲ್ಲಿ ಓದುತ್ತಿದ್ದಾಳೆ. ಈಗಲೂ ಕೆಲವೊಂದು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯನ್ನು ಬಿಟ್ಟರೆ ಬಾಕಿಯಂತೆ ನಾರ್ಮಲಾಗಿಯೇ ಇದ್ದಾಳೆ ಎಂದು ಹೇಳಿ ತಾಯಿ ಒಂದು ನಿಟ್ಟುಸಿರು ಬಿಟ್ಟರು.

ಆ ಕ್ಷಣಕ್ಕೆ ನನಗೆ ಅವರ ಮುಖದ ಮೇಲೆ ಕಂಡಿದ್ದು ಎಂತಹ ಸಂದರ್ಭದಲ್ಲೂ ಸೋಲುವುದಿಲ್ಲ ಎಂಬ ಸಮಚಿತ್ತದ ಮಂದಸ್ಮಿತ ನಗು.

Writer - ಸಂಗೀತಾ ಶ್ರೀಕಂಠ

contributor

Editor - ಸಂಗೀತಾ ಶ್ರೀಕಂಠ

contributor

Similar News