ಅಧ್ಯಯನ ಮತ್ತು ಅರಿವು

Update: 2018-04-21 12:16 GMT

ಭಾಗ 2

ಮಕ್ಕಳಿಗೆ ಕಲಿಕೆಯ ತರಗತಿಗಳು ಲೈಬ್ರರಿಗಳ ಕಡೆಗೆ ಮುಖ ಮಾಡಲು ಪ್ರೇರೇಪಿಸಿ, ಅಲ್ಲಿ ತಮಗೆ ಆಸಕ್ತಿ ಎನಿಸುವ ಅಥವಾ ಅಗತ್ಯವಿರುವ ವಿಷಯಗಳನ್ನು ಹುಡುಕುವಂತಾದರೆ ಅಲ್ಲಿಗೆ ಮಕ್ಕಳಿಗೆ ಸ್ವಾಧ್ಯಾಯದ, ಅಂದರೆ ತಾವೇ ಕಲಿಯುವ ಅಭ್ಯಾಸ ಆರಂಭವಾದಂತೆಯೇ ಲೆಕ್ಕ. ಸ್ವಾಧ್ಯಾಯದ ಮಕ್ಕಳಿಗೆ ಸಂಶೋಧಕರಾಗುವ, ಅರಿವಿನ ಸಂಗ್ರಹಕರಾಗುವ, ವಿಶ್ಲೇಷಕರಾಗುವ, ವಿಮರ್ಶಕರಾಗುವ; ಹೀಗೆ ಹಲವು ಸಾಧ್ಯತೆಗಳನ್ನು ಅದು ಹುಟ್ಟಿಹಾಕುತ್ತದೆ.

ಉಪಯೋಗಕ್ಕೆ ಬರುವ ಸಂಗ್ರಹಾಲಯ

ಲೈಬ್ರರಿಯನ್ನು ಬರಿದೇ ಸಂದರ್ಶಿಸುವುದರಿಂದಲೇ ಓದುವ ಹವ್ಯಾಸವುಳ್ಳವರಿಗೆ ಅಥವಾ ಅಧ್ಯಯನಾಸಕ್ತಿ ಇರುವವರಿಗೆ ಎಷ್ಟೋ ಪ್ರೇರಣೆಯಾಗುತ್ತದೆ.

ಎಲ್ಲರಿಗೂ ಉಪಯೋಗಕ್ಕೆ ಬರುವಂತಹ ಸಾರ್ವಜನಿಕ ಲೈಬ್ರರಿ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ವ್ಯಕ್ತಿಗತವಾದಂತಹ ಲೈಬ್ರರಿಗಳೂ ಕೂಡ ಅಷ್ಟೇ ಮುಖ್ಯ. ಲೈಬ್ರರಿಯ ಕನ್ನಡ ಪದಕ್ಕೆ ಬರಿದೇ ಗ್ರಂಥಾಲಯವೆಂದಷ್ಟೇ ಹೇಳುವ ನಮಗೆ ಈಗ ಲೈಬ್ರರಿ ಎನ್ನುವುದು ಗ್ರಂಥಗಳದ್ದಷ್ಟೇ ಅಲ್ಲ ಎಂಬ ವಿಷಯವೂ ಅರಿವಾಗಿದೆ. ಲೈಬ್ರರಿ ಎಂದರೆ, ಗ್ರಂಥಗಳ ಸಂಗ್ರಹಾಲಯ ಮಾತ್ರವಲ್ಲದೇ, ಇತರ ಗ್ರಾಫಿಕ್ ಕೃತಿಗಳು, ಸಿನೆಮಾಗಳು (ಫಿಲಂಗಳು), ಕ್ಯಾಸೆಟ್‌ಗಳು (ಟೇಪ್‌ಗಳು), ಡಿಸ್ಕ್‌ಗಳು; ಹೀಗೆ ಇತರ ಕೃತಿಗಳ ವ್ಯವಸ್ಥಿತ ಸಂಗ್ರಹಾಲಯವೂ ಇದಾಗಿರುತ್ತದೆ. ಹಾಗಾಗಿ ಈಗ ಗ್ರಂಥಾಲಯ ಎನ್ನುವುದಕ್ಕಿಂತ ಬರಿದೇ ಲೈಬ್ರರಿ ಎನ್ನುವುದೇ ಹೆಚ್ಚು ಸೂಕ್ತವೆನಿಸುತ್ತದೆ. ಆದರೆ ಇದು ವಸ್ತು ಸಂಗ್ರಹಾಲಯದಂತಲ್ಲ. ಬರಿದೇ ನೋಡಿ ಸುಮ್ಮನಾಗುವಂತಹ ಮ್ಯೂಸಿಯಂ ಅಲ್ಲ. ಬಳಕೆಗೆ ಬರಬೇಕು. ಬಳಸಲು ಸಾಧ್ಯವಾಗುವಂತಹ ಸಂಗ್ರಹಾಲಯ ಲೈಬ್ರರಿಯಾಗುತ್ತದೆ. ಬರಿದೇ ಸಂಗ್ರಹಾಲಯವು ಮ್ಯೂಸಿಯಂ ಆಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಳ್ಳೋಣ.

ವೈವಿಧ್ಯದ ಆಲಯ

ಲೈಬ್ರರಿಗಳಲ್ಲಿ ಹಳತರಿಂದ ಹೊಸತರವರೆಗೂ, ಎಲ್ಲರ ಅಭಿರುಚಿ, ವಿಷಯಾಸಕ್ತಿ, ಹವ್ಯಾಸಗಳಿಗೆ ತಕ್ಕಂತೆ ದೊರಕುವಂತಿರುತ್ತದೆ. ದಿನಸಿ ಅಂಗಡಿಯಲ್ಲಿ ವಿವಿಧ ರೀತಿಯ ದಿನಸಿ ವಸ್ತುಗಳು ದೊರಕುವಂತಿದ್ದು, ತಮಗೆ ಬೇಕಾದ ವಸ್ತುಗಳನ್ನು ಕೊಂಡು ತಮಗೆ ಬೇಕಾದ ಅಡುಗೆಯನ್ನು ಮಾಡಿಕೊಳ್ಳುವಂತೆ ಲೈಬ್ರರಿಯಲ್ಲಿ ದೊರಕುವಂತಹ ವಿಷಯಗಳನ್ನು ಸಂಗ್ರಹಿಸಿ ತಮ್ಮ ಆಸಕ್ತಿ, ಹವ್ಯಾಸ, ಅಧ್ಯಯನದ ದಿಕ್ಕಿನ ಉದ್ದೇಶಕ್ಕೆ ಅನುಗುಣವಾಗಿ ಬಳಸಿಕೊಳ್ಳುತ್ತಾರೆ. ಅದೇ ಲೈಬ್ರರಿಗೆ ಸೇರ್ಪಡೆಯಾಗುವಂತಹ ಮತ್ತೊಂದು ಕೃತಿಯನ್ನು ಕೂಡ ಕೊಡಮಾಡಬಹುದು. ಲೈಬ್ರರಿಯೇ ಹಾಗೆ. ಹೆಚ್ಚು ಉಪಯುಕ್ತತೆಗೆ ಸರಕುಗಳನ್ನು ಒದಗಿಸುವುದರಲ್ಲೇ ಅದರ ಸಾರ್ಥಕತೆ ಇರುವುದು.

ಒಂದೇ ಬಗೆಯ ವಿಚಾರಧಾರೆಗಳ ಪುಸ್ತಕಗಳನ್ನು ಮಾತ್ರ ಹೊಂದಿರುವಂತಹ ಲೈಬ್ರರಿಗಳು ಪೂರ್ಣ ಪ್ರಮಾಣದ ಲೈಬ್ರರಿಗಳಾಗುವುದಿಲ್ಲ. ವೈವಿಧ್ಯತೆ ಮತ್ತು ವೈರುಧ್ಯಗಳೆರಡನ್ನೂ ಕೂಡ ಲೈಬ್ರರಿಗಳು ಹೊಂದಿರಬೇಕು. ಇದರಿಂದಲೇ ಪ್ರತಿಕ್ರಿಯೆ ಮತ್ತು ಟೀಕಾ ಗ್ರಂಥಗಳನ್ನು ರಚಿಸಲು ಸಾಧ್ಯ.

ಶಾಲೆಗಳಲ್ಲಿ ಲೈಬ್ರರಿಗಳ ಪರಿಚಯ

ಕೆಲವು ಶಾಲೆಗಳಲ್ಲಂತೂ ಮಕ್ಕಳಿಗೆ ಲೈಬ್ರರಿಯ ಉಪಯೋಗ ತಿಳಿಯುವುದೇ ಇಲ್ಲ. ಲೈಬ್ರರಿ ಎಂದರೆ ಬರೀ ಕತೆ, ಹಾಡುಗಳ ಪುಸ್ತಕ, ಅಥವಾ ನಿಘಂಟುಗಳ ಕಪಾಟು ಎನ್ನುವಂತಿರುತ್ತದೆ ಶಾಲೆಗಳ ಲೈಬ್ರರಿಗಳು. ಆ ಮಕ್ಕಳಿಗೆ ಕಾಲೇಜು, ವಿಶ್ವವಿದ್ಯಾನಿಲಯಗಳಿಗೆ ಹೋಗುವವರೆಗೂ ಲೈಬ್ರರಿಯನ್ನು ಪರಿಚಯಿಸುವುದೇ ಇಲ್ಲ. ವಿಶ್ವವಿದ್ಯಾನಿಲಯಗಳಿಗೆ ಹೋದ ಮೇಲೆ ಲೈಬ್ರರಿಗಳ ಅನಿವಾರ್ಯತೆಯನ್ನು ಕಂಡುಕೊಳ್ಳುವುದಕ್ಕಿಂತ, ಶಾಲಾ ಮಟ್ಟದಲ್ಲಿಯೇ ಲೈಬ್ರರಿಯ ಮಹತ್ವದ ಮತ್ತು ಬಳಕೆಯ ಬಗ್ಗೆ ಮಕ್ಕಳಿಗೆ ಖಂಡಿತ ತಿಳಿಸಿಕೊಡಬೇಕು. ತಾವು ಓದುವ ಪಠ್ಯ ಪುಸ್ತಕದ ವಿಸ್ತೃತ ಆಸಕ್ತಿಗೆ ಪೂರಕವಾದಂತಹ ಪುಸ್ತಕಗಳನ್ನು ಶಿಕ್ಷಕರು ಸೂಚಿಸಬೇಕು. ಅದನ್ನು ಆಧರಿಸಿ ಮಕ್ಕಳ ಗುಂಪುಗಳಿಗೆ ಪ್ರಾಜೆಕ್ಟ್ ಗಳನ್ನು ಕೊಡಬೇಕು. ಅವುಗಳ ಆಧಾರದ ಮೇಲೆ ಗುಂಪು ಚರ್ಚೆಗಳನ್ನು ಮಾಡಬೇಕು. ಒಂದೇ ವಿಷಯದ ಬಗ್ಗೆ ವಿವಿಧ ದೃಷ್ಟಿಕೋನಗಳನ್ನು ಹೊಂದಿರುವಂತಹ ಕೃತಿಗಳನ್ನು ಲೈಬ್ರರಿಯಲ್ಲಿ ಹೊಂದಿದ್ದು, ಅದನ್ನು ಆಯ್ದುಕೊಂಡ ವಿದ್ಯಾರ್ಥಿಗಳು ತಮ್ಮ ಅಧ್ಯಯನ, ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು. ಇದರಿಂದ ಇತರರ ಅಭಿಪ್ರಾಯಗಳನ್ನು ಕೇಳುವ ಮತ್ತು ಗೌರವಿಸುವಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ.

ಗ್ರಂಥಗಳನ್ನು ಹೊಂದಿರುವ ರೀತಿಯಲ್ಲಿ ಹಸ್ತಪ್ರತಿಗಳು, ಫಿಲಂ, ಡಿಸ್ಕ್ ಹಾಗೂ ಇತರೇ ಗ್ರಾಫಿಕ್ ಕೃತಿಗಳ ಲೈಬ್ರರಿಯನ್ನು ಶಾಲೆಗಳು ಹೊಂದಿದ್ದರೆ ತಮ್ಮ ತಿಳುವಳಿಕೆಯ ಪರಿಧಿಯನ್ನು ವಿಸ್ತರಿಸಿಕೊಳ್ಳಲು ಅಗಾಧವಾಗಿ ನೆರವಾಗುತ್ತದೆ. ಮಕ್ಕಳಿಗೆ ಕಲಿಕೆಯ ತರಗತಿಗಳು ಲೈಬ್ರರಿಗಳ ಕಡೆಗೆ ಮುಖ ಮಾಡಲು ಪ್ರೇರೇಪಿಸಿ, ಅಲ್ಲಿ ತಮಗೆ ಆಸಕ್ತಿ ಎನಿಸುವ ಅಥವಾ ಅಗತ್ಯವಿರುವ ವಿಷಯಗಳನ್ನು ಹುಡುಕುವಂತಾದರೆ ಅಲ್ಲಿಗೆ ಮಕ್ಕಳಿಗೆ ಸ್ವಾಧ್ಯಾಯದ, ಅಂದರೆ ತಾವೇ ಕಲಿಯುವ ಅಭ್ಯಾಸ ಆರಂಭವಾದಂತೆಯೇ ಲೆಕ್ಕ. ಸ್ವಾಧ್ಯಾಯದ ಮಕ್ಕಳಿಗೆ ಸಂಶೋಧಕರಾಗುವ, ಅರಿವಿನ ಸಂಗ್ರಹಕರಾಗುವ, ವಿಶ್ಲೇಷಕರಾಗುವ, ವಿಮರ್ಶಕರಾಗುವ; ಹೀಗೆ ಹಲವು ಸಾಧ್ಯತೆಗಳನ್ನು ಅದು ಹುಟ್ಟಿಹಾಕುತ್ತದೆ.

ಗ್ರಂಥಪಾಲಕರ ಸಹವಾಸ

ಇನ್ನು ಮಕ್ಕಳಿಗೆ ಗ್ರಂಥಾಲಯದ ಪರಿಚಯವನ್ನು ಮಾಡಿಸಿದ ಮೇಲೆ ಗ್ರಂಥಪಾಲಕರ ಒಡನಾಟವನ್ನು ಹೊಂದುವಂತಹ ಆಸಕ್ತಿಯನ್ನು ಪ್ರೇರೇಪಿಸಬೇಕು. ಲೈಬ್ರೇರಿಯನ್ ಯಾವಾಗಲೂ ಅಧ್ಯಯನಶೀಲರ, ಸಂಶೋಧಕರ, ಗ್ರಂಥಕರ್ತರ, ವಿಶ್ಲೇಷಕರ ಸಂಗಾತಿಗಳೇ ಸರಿ. ಅವರಿಗೆ ಪುಸ್ತಕದ ಅಭಿರುಚಿ ಮಾತ್ರವಲ್ಲದೇ ಅದನ್ನು ವೈಜ್ಞಾನಿಕವಾಗಿ ಜೋಡಿಸಿಡುವುದು, ನಮೂದಿಸಿಕೊಳ್ಳುವುದು, ವಿಷಯಾಧಾರಿತವಾದ ಪುಸ್ತಕಗಳನ್ನು ಸೂಚಿಸುವುದು, ಗ್ರಂಥಕರ್ತರ ಆಧಾರದಲ್ಲಿ ಪುಸ್ತಕಗಳನ್ನು ಸೂಚಿಸುವುದು; ಹೀಗೆ ಹಲವು ಕೆಲಸಗಳು ತಿಳಿದಿರುವುದರಿಂದ ಮಕ್ಕಳಿಗೆ ಅವರವರ ಆಸಕ್ತಿಗೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಪುಸ್ತಕಗಳನ್ನು ಸೂಚಿಸುವುದು, ಅವುಗಳನ್ನು ಓದಲು ಪ್ರೇರೇಪಿಸುವುದು ಕೂಡ ಮುಖ್ಯವಾಗುತ್ತದೆ. ಬಹಳ ಸ್ನೇಹಶೀಲ ಮತ್ತು ಸಂಯಮಶೀಲರಾಗಿರುವಂತಹ ಗ್ರಂಥಪಾಲಕರು ಶಾಲೆಯಲ್ಲಿರಬೇಕು. ಅವರು ಸಿಡುಕು, ಒರಟು ಅಥವಾ ಅಸಹಕಾರದ ವರ್ತನೆಗಳಿದ್ದರೆ ಮಕ್ಕಳು ಲೈಬ್ರರಿಗಳ ಬಗ್ಗೆ ಜಿಗುಪ್ಸೆ ಹೊಂದುವ ಸಾಧ್ಯತೆಗಳಿರುತ್ತದೆ. ಗ್ರಂಥಪಾಲಕರು ಎಲ್ಲವನ್ನೂ ಓದಿ ಅದರಲ್ಲಿ ಪರಿಪೂರ್ಣ ಜ್ಞಾನ ಹೊಂದಿರಬೇಕೆಂದೇನೂ ಇಲ್ಲ. ಓದುವುದು ಅವರವರ ಅಭಿರುಚಿಗೆ ಮತ್ತು ಆಸಕ್ತಿಗೆ ಬಿಟ್ಟಿದ್ದು. ಆದರೆ, ಗ್ರಂಥಗಳ ಪರಿಚಯ ಮತ್ತು ಅವುಗಳಲ್ಲಿರುವ ವಿಷಯಗಳ ಬಗ್ಗೆ ಮಾಹಿತಿಯಾದರೂ ತಿಳಿದಿದ್ದರೆ ತಮ್ಮ ಬಳಿಗೆ ಬರುವ ಆಸಕ್ತರಿಗೆ ಸೂಚಿಸಲು ನೆರವಾಗುತ್ತದೆ. ಮಾರ್ಗದರ್ಶಿಯಾಗಿ ಸಹಾಯ ಮಾಡಲು ಸಾಧ್ಯವಾಗುತ್ತದೆ. ಈ ವಿಷಯದಲ್ಲಿ ನಾನು ತಿಳಿದಿರುವ ಕೆಲವು ಗ್ರಂಥಪಾಲಕರು ಕೆಲವು ತಂತ್ರಗಳನ್ನು ಅನುಸರಿಸುತ್ತಾರೆ. ಅದರಲ್ಲಿ ಬಹು ಮುಖ್ಯವಾಗಿ ಪುಸ್ತಕಗಳನ್ನು ಹಿಂದಕ್ಕೆ ಪಡೆದಾದ ಮೇಲೆ ಅದನ್ನು ಓದಿರುವವರಿಂದ ಅದರಲ್ಲೇನಿದೆ ಎಂದು ಸಂಕ್ಷಿಪ್ತವಾಗಿ ಕೇಳಿ ತಿಳಿಯುತ್ತಾರೆ. ಕೆಲವರು ಅದನ್ನು ಕಂಪ್ಯೂಟರಿನಲ್ಲಿ ನಮೂದಿಸುವಂತೆ ಕೋರುತ್ತಾರೆ ಕೂಡ. ಹೀಗೆ ಒಂದಷ್ಟು ಓದುಗರು ಹೇಳಿದ ಮೇಲೆ ಒಂದು ಹಂತಕ್ಕೆ ಅವರಿಗೆ ಆಯಾ ಪುಸ್ತಕದಲ್ಲಿ ಏನೇನಿರುತ್ತದೆ ಎಂದು ತಿಳಿದಿರುತ್ತದೆ. ಹೊಸ ಓದುಗರ ಅಗತ್ಯಗಳಿಗೆ ತಕ್ಕಂತೆ ಮಾರ್ಗದರ್ಶನ ಮಾಡುತ್ತಾರೆ. ಇದೇ ರೀತಿಯಲ್ಲಿ ವೀಡಿಯೊ ಮತ್ತು ಆಡಿಯೋ ಕೃತಿಗಳೂ ಕೂಡ.

ಲೈಬ್ರರಿಯನ್ನು ಬಳಸುವುದು ಹೇಗೆ?

ಲೈಬ್ರರಿಯಲ್ಲಿ ದಾಖಲಾಗುವಂತೆ ವಿದ್ಯಾರ್ಥಿಯ ಸದಸ್ಯತ್ವವನ್ನು ಮಾಡಿಸಬೇಕು. ಅದಕ್ಕೆ ಅಗತ್ಯವಿರುವ ಎರವಲು ಪಡೆಯುವ ಕಾರ್ಡನ್ನು ಹೊಂದಿರಬೇಕು. ಪುಸ್ತಕ ಪಡೆದಿರುವವನು ಇದೇ ವಿದ್ಯಾರ್ಥಿ ಎಂದು ಗುರುತು ಹಚ್ಚಲು ನೆರವಾಗುವ ಗುರುತು ಚೀಟಿ ಬಹಳ ಮುಖ್ಯವಾದುದು. ನಿರ್ದಿಷ್ಟ ಕಾಲಾವಧಿಯಲ್ಲಿ ಪುಸ್ತಕವನ್ನು ಹಿಂದಿರುಗಿಸುವಂತಹ ಸೂಚನೆ ಕಡ್ಡಾಯವಾಗಿರಬೇಕು. ಲೈಬ್ರರಿಯಲ್ಲಿ ಕಟ್ಟುನಿಟ್ಟಿನ ಶಿಸ್ತು ಪಾಲಿಸಬೇಕು. ಮೊದಲಾಗಿ ನೈತಿಕವಾದ ಬದ್ಧತೆ ಬಹಳ ಮುಖ್ಯವಾಗುತ್ತದೆ. ಪುಸ್ತಕಗಳನ್ನಾಗಲಿ, ಫಿಲಂಗಳನ್ನಾಗಲಿ ಎರವಲು ಪಡೆದರೆ ಅದು ಮುಂದಿನವರಿಗೂ ಕೂಡ ಉಪಯೋಗಕ್ಕೆ ಬರುವಂತಹದ್ದು ಎಂಬ ಪ್ರಜ್ಞೆಯಿಂದ ಅದನ್ನು ಜೋಪಾನವಾಗಿ ನೋಡಿಕೊಳ್ಳಬೇಕು. ಬಳಸಿದ ನಂತರ ಸುರಕ್ಷಿತವಾಗಿ ಹಿಂದಿರುಗಿಸಬೇಕು. ಪುಸ್ತಕಗಳಾದಲ್ಲಿ ಬೇಕಾದ ಪುಟಗಳನ್ನು ಹರಿಯಬಾರದು. ಗ್ರಂಥಾಲಯಗಳಿಂದ ಪುಸ್ತಕಗಳನ್ನು ಕದಿಯಬಾರದು; ಇತ್ಯಾದಿ ನೈತಿಕ ಶಿಸ್ತನ್ನು ಮಕ್ಕಳಿಗೆ ರೂಢಿ ಮಾಡಿಸಬೇಕು. ಅದಕ್ಕಾಗಿ ದಂಡ ವಿಧಿಸುವುದು, ಶಿಕ್ಷಿಸುವುದು ಇತ್ಯಾದಿಗಳು ಹೆಚ್ಚು ಸಹಕಾರಿಯಾಗುವುದಕ್ಕಿಂತ ಅವುಗಳ ಬಗ್ಗೆ ನೈತಿಕ ಪ್ರಜ್ಞೆಯನ್ನು ಮೂಡಿಸುವುದೇ ಸರಿಯಾದ ಕ್ರಮ.

ಸಾಮಾನ್ಯ ತಿಳುವಳಿಕೆಗಳು

ಮಕ್ಕಳಲ್ಲಿ ಲೈಬ್ರರಿಯ ಬಗ್ಗೆ ಸಾಮಾನ್ಯ ತಿಳುವಳಿಕೆಗಳನ್ನು ರೂಢಿಸಬೇಕು.

1.ಮೊದಲನೆಯದಾಗಿ ಲೈಬ್ರರಿಯ ಭೌತಿಕ ಸ್ವರೂಪದ ಪರಿಚಯ ಮಕ್ಕಳಿಗೆ ಆಗಬೇಕು. ಎಲ್ಲಿ ಯಾವ ಬಗೆಯ ಪುಸ್ತಕಗಳಿರುತ್ತವೆ. ಅವುಗಳಲ್ಲಿ ಯಾವುವನ್ನು ಹೊರಗೆ ಒಯ್ಯಬಹುದು, ಯಾವುವನ್ನು ಅಲ್ಲಿಯೇ ಓದಿ ಇಡಬೇಕು; ಇತ್ಯಾದಿ.

2.ಗ್ರಂಥಾಲಯದಲ್ಲಿ ನಿಶ್ಶಬ್ದತೆಯನ್ನು ಕಾಪಾಡುವುದು.

3.ಓದುವುದನ್ನು ತಮ್ಮ ಟಿಪ್ಪಣಿ ಪುಸ್ತಕದಲ್ಲಿ ಬರೆದುಕೊಳ್ಳುವುದು. ಟಿಪ್ಪಣಿ ಬರೆದುಕೊಳ್ಳುವಾಗ ಗ್ರಂಥ, ಲೇಖಕರ ಹೆಸರುಗಳನ್ನು ಬರೆದುಕೊಳ್ಳುವುದು. ಕೆಲವೊಂದು ಸಮಯಗಳಲ್ಲಿ ಪ್ರಕಾಶಕರ ಹೆಸರೂ ಕೂಡ ಮುಖ್ಯವಾಗುತ್ತದೆ.

4.ಬೇರೆ ಓದುಗರಿಗೆ ತೊಂದರೆಯಾಗದಂತೆ ವರ್ತಿಸುವುದು.

5.ತೆಗೆದ ಪುಸ್ತಕಗಳನ್ನು ಸಾಧ್ಯವಾದರೆ ತೆಗೆದ ಸ್ಥಳದಲ್ಲಿಯೇ ಇಡಬೇಕು ಅಥವಾ ಓದುವ ಸ್ಥಳದಲ್ಲಿಯೇ ಬಿಡಬೇಕು. ವ್ಯವಸ್ಥಾಪಕರು ಅಥವಾ ಗ್ರಂಥಪಾಲಕರು ಅಥವಾ ಸಹಾಯಕರು ಅದನ್ನು ಎತ್ತಿಡುತ್ತಾರೆ. ಎಲ್ಲಿಂದಲೋ ತೆಗೆದು, ಹೊರಡುವ ಆತುರದಲ್ಲಿ ಸಂಬಂಧವೇ ಇಲ್ಲದಂತಹ ಜಾಗದಲ್ಲಿ ಇಟ್ಟು ಹೋಗಿಬಿಡಬಾರದು.

6.ಕಲೆ, ಸಾಹಿತ್ಯ, ಜೀವನ ಚರಿತ್ರೆ, ವಿಜ್ಞಾನ, ತಂತ್ರಜ್ಞಾನ, ನಿಘಂಟುಗಳು; ಹೀಗೆ ಎಲ್ಲಾ ವಿಭಾಗಗಳನ್ನು ಕೂಡ ಮಕ್ಕಳಿಗೆ ಪರಿಚಯ ಮಾಡಿಕೊಡಬೇಕು. ಇದರಿಂದ ಅವರು ಇತರ ವಿಷಯಗಳ ಬಗ್ಗೆಯೂ ಕೂಡ ಗಮನ ಹರಿಸಲು ಸಾಧ್ಯವಾಗುತ್ತದೆ.

7.ಅದೇ ರೀತಿ ವಾರ್ತಾಪತ್ರಿಕೆಗಳು, ವೃತ್ತಪತ್ರಿಕೆಗಳು, ಮಾಸ ಮತ್ತು ವಾರಪತ್ರಿಕೆಗಳು, ಜನರಲ್ಸ್, ಟ್ಯಾಬ್ಲಾಯ್ಡ್ಡಾ; ಹೀಗೆ ಹಲವು ಬಗೆಯ ಪತ್ರಿಕೆಗಳ ಪರಿಚಯವೂ ಮಕ್ಕಳಿಗಾಗಲಿ. ಮಕ್ಕಳಿಗಾಗಿಯೇ ಇರುವ ಪತ್ರಿಕೆಗಳು ಶಾಲೆಯ ಗ್ರಂಥಾಲಯಗಳಲ್ಲಿರಲಿ.

8.ವಿವಿಧ ದೇಶಗಳ (ೀಶ್ಯಾ, ಯೂರೋಪ್, ಇಂಗ್ಲಿಷ್) ವಿವಿಧ ಗ್ರಂಥಗಳ ವಿಭಾಗಗಳು ಇದ್ದರೆ ಹೆಚ್ಚು ಸೂಕ್ತ. ಆದರೆ ಶಾಲೆಯ ಗ್ರಂಥಾಲಯದ ಇತಿಮಿತಿಗಳ ಆಧಾರದಲ್ಲಿ ಇವುಗಳನ್ನು ನಿರ್ಧರಿಸಲಾಗುವುದು.

9.ಲೈಬ್ರರಿಯಲ್ಲಿರುವ ಎಲ್ಲಾ ಕೃತಿಗಳ ಕ್ಯಾಟಲಾಗ್ ಖಂಡಿತವಾಗಿಯೂ ವಿಶೇಷ ರೀತಿಯಲ್ಲಿ ಲಭ್ಯವಿರಬೇಕು. ಲೈಬ್ರರಿಯ ಉಪಯುಕ್ತತೆಯನ್ನುಈ ಕ್ಯಾಟಲಾಗ್ ನಿಜಕ್ಕೂ ಉತ್ತಮಗೊಳಿಸುತ್ತದೆ. ಓದುಗನ ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ.

10.ಶಾಲೆಯ ಲೈಬ್ರರಿಗಳು ಮಾತ್ರವಲ್ಲದೇ ಸಾರ್ವಜನಿಕ ಗ್ರಂಥಾಲಯಗಳ ಪರಿಚಯವನ್ನು ಮಕ್ಕಳಿಗೆ ಮಾಡಿಸಬೇಕು.

11.ಹಾಗೆಯೇ ಲೈಬ್ರರಿಯಲ್ಲಿ ಬೆಳಕಿನ ವ್ಯವಸ್ಥೆಯು ಧಾರಾಳವಾಗಿರಬೇಕು.

12.ಪುಸ್ತಕಗಳನ್ನು ತೆಗೆದುಕೊಂಡಮೇಲೆ ಒಬ್ಬರಿಗೊಬ್ಬರು ತೊಂದರೆ ಮಾಡಿಕೊಳ್ಳದಂತೆ ವಿದ್ಯಾರ್ಥಿಗಳು ಒಂದು ಕಡೆ ತಮಗೆ ಅನುಕೂಲಕರವಾದಂತಹ ಜಾಗಗಳಲ್ಲಿ ಕುಳಿತುಕೊಳ್ಳುವಂತೆ ಅಭ್ಯಾಸ ಮಾಡಿಸಬೇಕು.

13.ಮಕ್ಕಳಿಗೆ ಅಥವಾ ವಿದ್ಯಾರ್ಥಿಗಳಿಗೆ ಬೇಕಾದ ಗ್ರಂಥಭಾಗವನ್ನು ಒಯ್ಯಲು ಅನುಕೂಲವಾಗುವಂತೆ ಕಾಪಿ ಮಾಡಲು (ಪ್ರತಿಗಳನ್ನು ಹೊಂದಲು) ಅವಕಾಶವಿರಬೇಕು.

14. ಲೈಬ್ರರಿಯ ಪ್ರಶಾಂತತೆಯೇ ಮಕ್ಕಳ ಏಕಾಗ್ರತೆಯನ್ನು ಬಲಪಡಿಸಲಾರಂಭಿಸುತ್ತದೆ. ಇನ್ನು, ಕುಳಿತುಕೊಂಡು ಓದುತ್ತಾ, ಬೇಕಾದ ವಿಷಯಗಳನ್ನು ಟಿಪ್ಪಣಿ ಮಾಡಿಕೊಳ್ಳುವುದನ್ನು ಕಲಿಸುವುದರಿಂದ ಅವರಿಗೆ ಲೈಬ್ರರಿಯ ಸಂಪೂರ್ಣ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಂತಾಗುತ್ತದೆ.

15.ಮಕ್ಕಳು ತಮ್ಮಂತೆಯೇ ವಿಷಯಾಸಕ್ತಿ ಇರುವಂತಹ ಪುಸ್ತಕ ಪ್ರೇಮಿಗಳನ್ನು, ಸಮಾನ ಮನಸ್ಕರನ್ನು ಲೈಬ್ರರಿಗಳಲ್ಲಿ ಗುರುತಿಸಬಹುದು. ಹಾಗೆ ಗುರುತಿಸುವಂತೆ ಶಿಕ್ಷಕರು ಮಕ್ಕಳಿಗೆ ಸಹಕರಿಸಬೇಕು.

ಮಕ್ಕಳಿಗಾಗುವ ಲಾಭವೇನು?

1.ಮಕ್ಕಳಿಗೆ ಶಾಲೆ ಮತ್ತು ಮನೆ; ಈ ಮೂಲಗಳಿಂದ ಮಾತ್ರವೇ ದೊರಕುವ ವಿಷಯಗಳ ಹೊರತಾಗಿ ಮತ್ತಷ್ಟು ಅರಿತುಕೊಂಡು ತಮ್ಮ ಚಿಂತನೆ, ವಿಚಾರಗಳ, ದೃಷ್ಟಿಗಳ ಪರಿಧಿಯನ್ನು ವಿಸ್ತರಿಸಿಕೊಳ್ಳಲು ಲೈಬ್ರರಿಯು ಸಹಕಾರಿಯಾಗುತ್ತದೆ.

2.ಪರೀಕ್ಷೆಗೊಡ್ಡುವುದು ಮಾತ್ರವಲ್ಲದೆ ವಿವಿಧ ಪುಸ್ತಕಗಳನ್ನು ಓದುವುದರಿಂದ ಅರ್ಥ ವಿಸ್ತಾರವಾಗುವುದು. ಡಿನೋಶನ್- ಅಂದರೆ ಪದವು ಏನನ್ನು ಹೇಳುತ್ತದೆ ಎಂದು ತಿಳಿಯುವುದರೊಂದಿಗೆ, ಕನ್ನೋಟೇಶನ್ - ಅಂದರೆ ಲೇಖಕನು ತಾನು ಬರೆದಿರುವ ಸಾಲುಗಳಲ್ಲಿ ಏನನ್ನು ಹೇಳಲು ಯತ್ನಿಸುತ್ತಿದ್ದಾರೆ ಎಂದೂ ಅರಿತುಕೊಳ್ಳಲು ನೆರವಾಗುವುದು.

3.ಅಗತ್ಯಕ್ಕೆ ಬೇಕಾದಂತೆ ಒಂದು ಕ್ರಮದಲ್ಲಿ ಬರೆಯುವುದು.

4.ವಿಮರ್ಶಾತ್ಮಕವಾಗಿ ಆಲೋಚಿಸುವುದು.

5.ಸಂಶೋಧನಾ ಅಂಶಗಳನ್ನು ಮತ್ತು ಅಭಿಪ್ರಾಯಗಳನ್ನು ಗ್ರಹಿಸುವುದು.

6.ವಾಸ್ತವಾಂಶಗಳ ಮತ್ತು ಅಭಿಪ್ರಾಯಗಳ ನಡುವಿನ ವ್ಯತ್ಯಾಸವನ್ನು ಗ್ರಹಿಸುವುದು.

7.ವಿಷಯಗಳ ವೌಲ್ಯ ಮಾಪನ ಮಾಡುವಂತಹ ಸಾಮರ್ಥ್ಯ ಬೆಳೆಯುವುದು.

8.ತಮ್ಮ ವಿಷಯಗಳನ್ನು ಮಂಡಿಸಲು ವಿಧಾನಗಳನ್ನು ಮತ್ತು ಶೈಲಿಗಳನ್ನು ಕಂಡುಕೊಳ್ಳುವರು.

9.ವಿಷಯಗಳನ್ನು ಮತ್ತು ಸಮಸ್ಯೆಗಳನ್ನು ಗುರುತಿಸುವುದು ಮತ್ತು ವಿಶ್ಲೇಷಿಸುವುದು.

10. ಸಮಸ್ಯೆಗಳನ್ನು ತುಲನೆ ಮಾಡುವುದು ಮತ್ತು ಪರಿಹಾರಗಳನ್ನು ಕಂಡು ಹಿಡಿಯುವ ದಿಕ್ಕಿನಲ್ಲಿ ವಿಷಯ ಸಂಗ್ರಹಣೆ ಮಾಡುವುದು.

11. ಇತರರ ವಾದಗಳನ್ನು ಅರ್ಥೈಸಿಕೊಳ್ಳುವುದು, ಮಂಡಿಸುವ ವಿಷಯಗಳನ್ನು ಅವಲೋಕಿಸುವುದು.

12. ತಮ್ಮದೇ ವಿಚಾರಗಳನ್ನು ಅಥವಾ ವಾದಗಳನ್ನು ರಚಿಸುವುದು. ಸ್ವತಂತ್ರ ಚಿಂತನೆಗಳನ್ನು ಮಾಡುವುದು.

13. ಇತರರು ಯಾವುದೇ ರೀತಿಯ ವಾದಗಳನ್ನು ಮಾಡಿದರೂ ತಮ್ಮ ಅಧ್ಯಯನದ ದೃಢತೆಯಿಂದ ಮತ್ತು ಆತ್ಮವಿಶ್ವಾಸದಿಂದ ತಿಳಿದು ವಾದಿಸುವುದು. ಅರಿತು ಮನವರಿಕೆ ಮಾಡಿಕೊಡುವುದು, ತೂಗಿ ನುಡಿಯುವುದು. ನಿಂದಿಸುವ ಅಥವಾ ಅಪಮಾನಿಸುವ ದಾರಿಯಲ್ಲಿ ಪ್ರತಿವಾದಿಗಳ ಬಾಯಿ ಮುಚ್ಚಿಸಲು ಹೋಗದೇ ವಿಚಾರವಂತಿಕೆಯಲ್ಲಿಯೇ ಉತ್ತರ ನೀಡುವುದು.

14.ಇತರರಿಗೆ ಅನುಕೂಲವಾಗುವಂತಹ ವಿಚಾರಗಳನ್ನು ಉದಾರವಾಗಿ ಹಂಚಿಕೊಳ್ಳುವುದು.

15.ತಮ್ಮ ಶೈಕ್ಷಣಿಕ ಪ್ರಾಜೆಕ್ಟ್‌ಗಳನ್ನು ಸ್ವತಂತ್ರವಾಗಿ ಮತ್ತು ಘನವಾಗಿ ಪ್ರಸ್ತುತಪಡಿಸುವುದು.

ಶಾಲೆಯಲ್ಲಿ ಕಲಿಯುವ ಮಕ್ಕಳಿಗೇ ಇವೆಲ್ಲಾ ಬೇಕೇ? ಅವರಿಗೆ ಇವೆಲ್ಲಾ ಅರ್ಥವಾಗುತ್ತದೆಯೇ? ಎಂದು ತಲೆತುರಿಸಿಕೊಳ್ಳುವ ಅಗತ್ಯವಿಲ್ಲ. ಈ ಕಾಲಮಾನದ ಅವರು ತಾಂತ್ರಿಕವಾಗಿ ಇವುಗಳನ್ನು ಮಾಡಲು ಖಂಡಿತವಾಗಿ ಸಶಕ್ತರಾಗಿದ್ದಾರೆ. ಅವರಿಗೆ ಬೇಕಾಗಿರುವುದು ಮಾರ್ಗದರ್ಶನ ಮತ್ತು ಪ್ರೇರಣೆ ಮಾತ್ರ. ಮುಂದಿನ ಪೀಳಿಗೆಗಳು ವಿತಂಡ ವಾದಗಳಿಂದ ಭ್ರಾಂತರಾಗಿ ಪರಸ್ಪರ ದಾಳಿಗಳಿಂದ ಪ್ರತಿವಾದಿಗಳ ಬಾಯನ್ನು ಮುಚ್ಚಿಸುವ ಕ್ರೌರ್ಯ ತೋರಬಾರದೆಂದರೆ, ಮಕ್ಕಳು ಲೈಬ್ರರಿಯ ಸದುಪಯೋಗವನ್ನು ಮನದಟ್ಟು ಮಾಡಿಕೊಂಡು, ಅದರ ಬಳಕೆಯನ್ನು ರೂಢಿಸಿಕೊಳ್ಳಲೇಬೇಕು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News