‘ಬರಹ’ ತಂತ್ರಾಂಶದ ಇತಿಹಾಸ

Update: 2018-04-21 16:32 GMT

ಆರಂಭದಲ್ಲಿ ಕನ್ನಡದ ಸರಳ ಲಿಪಿತಂತ್ರಾಂಶವಾಗಿದ್ದ ‘ಬರಹ’ ಕಾಲಕ್ರಮೇಣ ಭಾರತೀಯ ಭಾಷಾಲಿಪಿ ತಂತ್ರಾಂಶವಾಗಿ ಅಭಿವೃದ್ಧಿಗೊಂಡಿತು. ಪ್ರಸ್ತುತ, ಬಹುತೇಕ ಭಾರತೀಯ ಭಾಷೆಗಳನ್ನು ಈ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಬಳಕೆಯ ಸರಳತೆ ಹೊಂದಿರುವ ಮತ್ತು ತಾಂತ್ರಿಕವಾಗಿ ಸದೃಢವಾದ ಈ ತಂತ್ರಾಂಶವು ಬಹುಜನಪ್ರಿಯವಾಗಿದ್ದು ಜಗತ್ತಿನಾದ್ಯಂತ ಲಕ್ಷಾಂತರ ಜನರು ಇದನ್ನು ಬಳಸುತ್ತಿದ್ದಾರೆ. ಬಳಕೆಗೆ ಸುಲಭವಾದ ವೈವಿಧ್ಯಮಯವಾದ, ಕೀಲಿಮಣೆ ವಿನ್ಯಾಸಗಳು (ಕೀಬೋರ್ಡ್ ಲೇಔಟ್) ಮತ್ತು ಹಳೆಯ ANSI ಹೊಸ ಯೂನಿಕೋಡ್ ಎನ್‌ಕೋಡಿಂಗ್ ಶಿಷ್ಟತೆಯುಳ್ಳ ವೈವಿಧ್ಯಮಯ ಫಾಂಟುಗಳನ್ನು ನೀಡಲಾಗಿದೆ. ಬೆಂಗಳೂರು ಮೂಲಕ ಅಮೆರಿಕ ನಿವಾಸಿಯಾದ ಶ್ರೀ ಶೇಷಾದ್ರಿವಾಸು ಚಂದ್ರಶೇಖರನ್ ಈ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಿಕೊಂಡು ಬರುತ್ತಿದ್ದಾರೆ. 1998ರಿಂದ 2010ರವರೆಗೆ ಒಟ್ಟು 10 ಆವೃತ್ತಿಗಳು ಹೊರಬಂದಿವೆ. 9ನೆಯ ಆವೃತ್ತಿಯವರೆಗೆ ಇದು ಉಚಿತ ತಂತ್ರಾಂಶವಾಗಿತ್ತು. ‘‘ಕನ್ನಡದ ಮೊದಲ ವಿಂಡೋಸ್ ಆಧಾರಿತ ಉಚಿತ ಲಿಪಿತಂತ್ರಾಂಶ’’ ಎಂಬ ಹೆಗ್ಗಳಿಕೆ ಹೊಂದಿದ್ದ ಬರಹ ತನ್ನ 10ನೇ ಆವೃತ್ತಿಯಿಂದ ಪಾವತಿಸಿ ಬಳಸುವ ತಂತ್ರಾಂಶವಾಗಿದೆ. http://www.baraha.com ಜಾಲತಾಣದಿಂದ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಬರಹದಲ್ಲಿ ಟೈಪ್ ಮಾಡಿ ಸಿದ್ಧಪಡಿಸಿದ ಭಾಷಾಪಠ್ಯವನ್ನು ಬ್ರೈಲ್ ಲಿಪಿಗೆ ಪರಿವರ್ತಿಸಿ ಮುದ್ರಿಸಬಹುದು. ಇದು ಈ ತಂತ್ರಾಂಶದ ವಿಶೇಷವಾಗಿದೆ. ಹಳೆಯ ಬೇರೆಬೇರೆ ಲಿಪಿತಂತ್ರಾಂಶಗಳಲ್ಲಿ ಸಿದ್ಧಪಡಿಸಿದ ಮಾಹಿತಿಗಳನ್ನು ಆಧುನಿಕ ಎನ್‌ಕೋಡಿಂಗ್‌ಗೆ ಪರಿವರ್ತನೆ ಮಾಡಲು ಸಾಧ್ಯ. ಹಳೆಯ ಫಾಂಟ್‌ಗಳಿಗೆ ಪರಸ್ಪರ ಪರಿವರ್ತನೆ ಇದರಲ್ಲಿ ಸುಲಭ.

ಬರಹ ತಂತ್ರಾಂಶ ಕಾಲಕ್ರಮೇಣ ನಾನಾ ಸೌಲಭ್ಯಗಳ ಸಹಿತ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಬರಹದ ಮೊದಲ ಆವೃತ್ತಿ 1998ರಲ್ಲಿ ಲೋಕಾರ್ಪಣೆಗೊಂಡಿತು. ಅದು, ಇಂಗ್ಲಿಷ್ ಟೈಪ್‌ಮಾಡಿ ಕನ್ನಡವನ್ನು ಮೂಡಿಸುವ ಲಿಪ್ಯಂತರಣ ವ್ಯವಸ್ಥೆಯಿದ್ದ ಒಂದು ಎಡಿಟರ್ ಆಗಿತ್ತು. ಕನ್ನಡದ ಉಚ್ಚಾರಣೆಯನ್ನು ಆಧರಿಸಿ ಇಂಗ್ಲಿಷ್ ಲಿಪಿಯನ್ನು ಬೆರಳಚ್ಚಿಸಿದರೆ ಕನ್ನಡ ಪದಗಳು ಮೂಡುವಂತೆ ಇರುವ ಕೀಲಿಮಣೆ ವಿನ್ಯಾಸವಿತ್ತು. ಈ ವಿನ್ಯಾಸವು ಕನ್ನಡ ತಿಳಿದಿರುವ ಮತ್ತು ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಬಹಳ ಸುಲಭವಾಗಿತ್ತು. ಆ ಕಾರಣ ಈ ತಂತ್ರಾಂಶ ಜಗತ್ತಿನಾದ್ಯಂತ ಜನಪ್ರಿಯವಾಯಿತು.

ಬಳಕೆಯ ಹಿಮ್ಮಾಹಿತಿ ಆಧರಿಸಿ, ಇಂಗ್ಲಿಷ್ ಅಲ್ಲದೆ, ‘‘ಕನ್ನಡದ ಯೂಸರ್ ಇಂಟರ್‌ಫೇಸ್’’ನ್ನು ಆಯ್ಕೆಮಾಡಿಕೊಳ್ಳುವ ಸೌಲಭ್ಯವಿರುವ ‘ಬರಹ 1.1’ ಆವೃತ್ತಿಯು 1998ರಲ್ಲಿ ಬಿಡುಗಡೆಯಾಯಿತು. ಕೇವಲ ಬರಹ ಎಡಿಟರ್‌ಗೆ ಬದಲಾಗಿ ವಿಂಡೋಸ್‌ನ ಯಾವುದೇ ಅಪ್ಲಿಕೇಷನ್ ಸಾಫ್ಟ್‌ವೇರ್‌ನಲ್ಲಿ ನೇರವಾಗಿ ಕನ್ನಡವನ್ನು ಟೈಪ್‌ಮಾಡಲು ಸಾಧ್ಯವಾಗುವಂತೆ ‘ಬರಹ ಡೈರೆಕ್ಟರ್’ ಅಥವಾ ‘ನೇರ ಬರಹ’ ಎಂದು ಕರೆಯಲಾಗುವ ಸೌಲಭ್ಯವನ್ನು 1999ರಲ್ಲಿ ಬಿಡುಗಡೆಗೊಳಿಸಿದ ‘ಬರಹ 2.0’ ಆವೃತ್ತಿಯಲ್ಲಿ ಅಳವಡಿಸಲಾಯಿತು. ಇದರಲ್ಲಿ ಕೈಬರಹ ರೂಪದ ಹೊಸ ಫಾಂಟನ್ನು ನೀಡಲಾಯಿತು. ಎಡಿಟರ್‌ನಲ್ಲಿ ಬೆರಳಚ್ಚಿಸಿದ ಕನ್ನಡ ಪಠ್ಯವನ್ನು, ಮೇಯ್ಲಿ ಅಟ್ಯಾಚ್‌ಮೆಂಟ್ ಕಳುಹಿಸಲು ಅನುವಾಗುವಂತೆ, ಜಿಫ್ ಮತ್ತು ಬಿಎಂಪಿ ನಮೂನೆಗಳಲ್ಲಿ ಚಿತ್ರರೂಪವಾಗಿ ಉಳಿಸುವ ಸೌಲಭ್ಯವಿತ್ತು.

ಹಿಂದಿ, ಸಂಸ್ಕೃತ ಮತ್ತು ಮರಾಠಿ ಭಾಷೆಗಳ ಪಠ್ಯವನ್ನು ‘ಬರಹ ಎಡಿಟರ್’ನಲ್ಲಿ ಟೈಪ್‌ಮಾಡಲಾಗುವಂತೆ ದೇವನಾಗರಿ ಲಿಪಿಯನ್ನು ಇದರಲ್ಲಿ ಅಳವಡಿಸಿ, ‘ಬರಹ 2000’ ಆವೃತ್ತಿಯನ್ನು 2000ರಲ್ಲಿ ಬಿಡುಗಡೆ ಮಾಡಲಾಯಿತು. ಅಂತರ್ಜಾಲದಲ್ಲಿ ‘ಬರಹ ಡಾಟ್ ಕಾಂ’ ಹೆಸರಿನ ಜಾಲತಾಣವನ್ನು ಆರಂಭಿಸಿ, ಈ ತಂತ್ರಾಂಶವನ್ನು ವಿಶ್ವಕ್ಕೇ ಉಚಿತವಾಗಿ ವಿತರಿಸುವ ಪ್ರಯತ್ನವನ್ನು ಆರಂಭಿಸಲಾಯಿತು. ಬರಹ ಬಳಸಿ ಸಿದ್ಧಪಡಿಸಲಾದ ದಸ್ತಾವೇಜುಗಳನ್ನು ಅಂತರ್ಜಾಲದಲ್ಲಿ ಹುಡುಕಿ ಪಡೆಯಲು ಅನುವಾಗುವಂತೆ ಹೈಪರ್‌ಲಿಂಕ್‌ಗಳನ್ನು ಎಂಬೆಡ್ ಮಾಡುವ ಅವಕಾಶವನ್ನು ಮೊದಲಿಗೆ ಈ ಆವೃತ್ತಿಯಲ್ಲಿ ನೀಡಲಾಯಿತು. ಯಾವುದೇ ವಿಂಡೋಸ್ ಆನ್ವಯಿಕದಲ್ಲಿ ಭಾಷಾ ಪಠ್ಯವನ್ನು ಬೆರಳಚ್ಚಿಸಿ ಬಳಸುವ ಸೌಲಭ್ಯ ನೀಡುವ ‘ಬರಹ ಡೈರೆಕ್ಟ್’ ಹೆಸರಿನ ‘ಎಂಜಿನ್ ಕನ್ನಡಕ್ಕೆ ಮಾತ್ರ ಸೀಮಿತವಾಗಿತ್ತು. 2000ರಲ್ಲಿ ಬಿಡುಗಡೆಯಾದ ‘ಬರಹ 2000ಎ’ ಎಂಬ ಆವೃತ್ತಿಯಲ್ಲಿ ಈ ಎಂಜಿನ್‌ಗೆ ಇತರ ಭಾಷೆಗಳ ಲಿಪಿಗಳನ್ನು ಅಳವಡಿಸಿ ಬಳಕೆಯ ಸೌಲಭ್ಯಗಳನ್ನು ಇನ್ನಷ್ಟು ವಿಸ್ತರಿಸಲಾಯಿತು. ಹಿಂದಿನ ಆವೃತ್ತಿಗಳಲ್ಲಿ, ಕನ್ನಡದಲ್ಲಿ ಮೂಡುವ ಪದಗಳನ್ನು, ಮೊದಲಿಗೆ ಇಂಗ್ಲಿಷ್ ಲಿಪಿಯಲ್ಲಿ ಬೆರಳಚ್ಚಿಸಬೇಕಾದ ಕಾರಣ, ಕಾಗುಣಿತ ತಪ್ಪುಗಳನ್ನು ತಿದ್ದಲು ಅಂತಹ ಪದಗಳನ್ನು ಇಂಗ್ಲಿಷ್ ಪಠ್ಯದಲ್ಲಿ ಹುಡುಕಿ ತೆಗೆಯುವ ಪ್ರಯತ್ನ ಕಷ್ಟಕರವಾಗಿತ್ತು. ತಪ್ಪಾದ ಕನ್ನಡದ ಪದವನ್ನು ಹೈಲೈಟ್ ಮಾಡಿದ ತಕ್ಷಣ ಅದರ ಇಂಗ್ಲಿಷ್ ರೂಪದ ಪದವು ತಾನಾಗಿಯೇ ಹೈಲೈಟ್ ಆಗುವ ಸೌಲಭ್ಯವನ್ನು ‘ಬರಹ 2000ಎ’ ಆವೃತ್ತಿಯಲ್ಲಿ ನೀಡಲಾಯಿತು.

ಕರ್ನಾಟಕ ಸರಕಾರವು ಸಿದ್ಧಪಡಿಸಿ ಘೋಷಿಸಿದ ಕೀಲಿಮಣೆ ವಿನ್ಯಾಸ ಮತ್ತು ಗ್ಲಿಫ್ ಮಾನಕಗಳ ಅನುಸಾರ ಕನ್ನಡ ಪಠ್ಯವು ಸಿದ್ಧಗೊಳ್ಳುವಂತೆ ಬರಹ ತಂತ್ರಾಂಶವನ್ನು ಪರಿಷ್ಕರಿಸಿ ‘ಬರಹ 4.0’ ಆವೃತ್ತಿಯನ್ನು 2001ರಲ್ಲಿ, ಹೆಚ್ಚುವರಿ ಫಾಂಟ್‌ಗಳ ಸಹಿತ ಬಿಡುಗಡೆಗೊಳಿಸಲಾಯಿತು. 2003ರಲ್ಲಿ ಬಿಡುಗಡೆಯಾದ ‘ಬರಹ 5.0’ ಆವೃತ್ತಿಯಲ್ಲಿ ಗ್ರಾಹಕೀಕೃತ ಆನ್ವಯಿಕ ತಂತ್ರಾಂಶಗಳಲ್ಲಿ ಕನ್ನಡದ ಪಠ್ಯವನ್ನು ಬೆರಳಚ್ಚಿಸುವ ವ್ಯವಸ್ಥೆಯನ್ನು ಅಳವಡಿಸಲು ಅವಕಾಶ ಕಲ್ಪಿಸುವ ಸೌಲಭ್ಯವನ್ನು ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಿಟ್ (ಎಸ್.ಡಿ.ಕೆ.) ನೀಡಲಾಯಿತು. ದತ್ತಸಂಸ್ಕರಣಾ (ಡೇಟಾಬೇಸ್) ತಂತ್ರಾಂಶ ಗಳಲ್ಲಿನ ಪಠ್ಯವನ್ನು ಅಕ್ಷರಾನುಕ್ರಮಣಿಕೆಯಲ್ಲಿ ವಿಂಗಡಿಸುವ ಸೌಲಭ್ಯ, ಒಂದು ಫಾಂಟ್ ಎನ್‌ಕೋಡಿಂಗ್‌ನಿಂದ ಮತ್ತೊಂದು ಫಾಂಟ್ ಎನ್‌ಕೋಡಿಂಗ್‌ಗೆ ಪಠ್ಯವನ್ನು ಬದಲಾಯಿಸಲು ಪರಿವರ್ತಕ ಸೌಲಭ್ಯ, ಇತರ ವಿಂಡೋಸ್ ಅಪ್ಲಿಕೇಷನ್‌ಗಳಲ್ಲಿ ಸಿದ್ಧವಾದ ಪಠ್ಯವನ್ನು ಬರಹ ಎಡಿಟರ್‌ಗೂ, ಬರಹ ಎಡಿಟರ್‌ನಲ್ಲಿ ಸಿದ್ಧವಾದ ಪಠ್ಯವನ್ನು ಇತರ ಆನ್ವಯಿಕಗಳಿಗೂ ಪರಸ್ಪರ ವರ್ಗಾಂತರಿಸುವ ಸೌಲಭ್ಯ - ಇವು ಬರಹದ ಈ ಆವೃತ್ತಿಯಲ್ಲಿನ ಎಸ್.ಡಿ.ಕೆ.ಯ ಪ್ರಮುಖ ಸೌಲಭ್ಯಗಳು.

ಕನ್ನಡ ಮತ್ತು ದೇವನಾಗರಿ ಲಿಪಿಗಳ ಜೊತೆಗೆ, ದಕ್ಷಿಣ ಭಾರತದ ಇತರ ಭಾಷೆಗಳಾದ ತಮಿಳು, ತೆಲುಗು ಮತ್ತು ಮಲೆಯಾಳಂ ಲಿಪಿಗಳನ್ನೂ ಬಳಸುವಂತೆ ಸೌಲಭ್ಯಗಳನ್ನು ಸೇರಿಸಿ, ‘ಬರಹ 6.0’ ಆವೃತ್ತಿಯನ್ನು 2004ರಲ್ಲಿ ಬಿಡುಗಡೆ ಗೊಳಿಸಲಾಯಿತು. ಇತರ ವಿಂಡೋಸ್ ಆನ್ವಯಿಕಗಳು ಮತ್ತು ಬರಹ ಎಡಿಟರ್ ನಡುವೆ ಭಾರತೀಯ ಭಾಷೆಗಳ ಪಠ್ಯವನ್ನು, ANSI, ಯುನಿಕೋಡ್, ರಿಚ್‌ಟೆಕ್ಸ್ಟ್ ಫಾರ್ಮೆಟ್, ಮತ್ತು ಹೆಚ್‌ಟಿಎಂಎಲ್ - ಇಂತಹ ವಿವಿಧ ನಮೂನೆಗಳಲ್ಲಿ ಪಠ್ಯವನ್ನು ಪರಸ್ಪರ ವರ್ಗಾಂತರಿಸಬಹುದು. ಬರಹ ಎಡಿಟರ್ ಬಳಸಿ ಇಂಗ್ಲಿಷ್ ಲಿಪಿಯಲ್ಲಿ ಬೆರಳಚ್ಚಿಸಿರುವ ಭಾರತೀಯ ಭಾಷಾ ಪಠ್ಯವನ್ನು ಯಾವುದೇ ಭಾಷೆಯಲ್ಲಿ ನೋಡಲು ‘ಸ್ಕ್ರಿಪ್ಟ್ ಓವರ್‌ರೈಡ್’ ಸೌಲಭ್ಯವನ್ನು ಬಳಸಬಹುದು. ಈ ‘ಸ್ಕ್ರಿಪ್ಟ್ ಓವರ್‌ರೈಡ್’ ಎಂಬುದು ಒಂದು ಭಾಷೆಯ ಲಿಪಿಯಿಂದ ಮತ್ತೊಂದು ಭಾಷೆಯ ಲಿಪಿಗೆ ಪಠ್ಯವನ್ನು ತಕ್ಷಣದಲ್ಲಿಯೇ ಬದಲಿಸುವ ಸೌಲಭ್ಯವಾಗಿದೆ.

2006ರಲ್ಲಿ ‘ಬರಹ 7.0’ ಆವೃತ್ತಿ ಹೊರಬಂತು. ಇದರಲ್ಲಿ ಗುಜರಾತಿ, ಗುರುಮುಖಿ, ಬೆಂಗಾಳಿ ಮತ್ತು ಒರಿಯಾ ಭಾಷೆಗಳ ಲಿಪಿಗಳಿಗೆ ಬಳಕೆಯ ಬೆಂಬಲವನ್ನು ನೀಡಲಾಯಿತು. ಎಲ್ಲಾ ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಟೈಪ್‌ಮಾಡಿ ಸೇವ್ ಮಾಡಿಕೊಳ್ಳಬಹುದಾದ ‘ಬರಹ ಪ್ಯಾಡ್’ ಎಂಬ ಹೆಸರಿನ ಒಂದು ಸರಳವಾದ ‘ಯುನಿಕೋಡ್ ಎಡಿಟರ್’ನ್ನು ಇದೆ. ANSI ಎನ್‌ಕೋಡಿಂಗ್ ಇರುವ ಪಠ್ಯವನ್ನು, ಬೇರೆ ಬೇರೆ ಹೆಸರಿನ ಫಾಂಟ್‌ಗಳಿಗೆ ಪರಸ್ಪರ ಪರಿವರ್ತನೆ ಸೌಲಭ್ಯವನ್ನು ಕಲ್ಪಿಸುವ ‘ಬರಹ ಫಾಂಟ್ ಕನ್‌ವರ್ಟ್’ ಮತ್ತು ANSI ಎನ್‌ಕೋಡಿಂಗ್‌ನಿಂದ ಯುನಿಕೋಡ್ ಎನ್‌ಕೋಡಿಂಗ್‌ಗೆ ಪರಿವರ್ತಿಸುವ ‘ಬರಹ ಕನ್‌ವರ್ಟ್’ ಸೌಲಭ್ಯಗಳನ್ನು ಉನ್ನತೀಕರಿಸಿ ಈ ಆವೃತ್ತಿಯಲ್ಲಿ ನೀಡಲಾಗಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಈ ಸೌಲಭ್ಯವನ್ನು, ಸೀಮಿತ ಪಠ್ಯಕ್ಕೆ ಮಾತ್ರ ಬಳಸಬಹುದಾಗಿತ್ತು. ಟೆಕ್ಸ್ಟ್ ಅಥವಾ ಆರ್‌ಟಿಎಫ್ ರೂಪದ ಕಡತಗಳನ್ನು, ಪಠ್ಯದ ಪುಟಗಳಿಗೆ ಮಿತಿಯಿಲ್ಲದಂತೆ, ನೇರವಾಗಿ ಪರಿವರ್ತನೆಯನ್ನು ಮಾಡಬಹುದಾದ ‘ಕಮಾಂಡ್ ಲೈನ್ ಯುಟಿಲಿಟಿ’ಗಳನ್ನು ಈ ಆವೃತ್ತಿಯಲ್ಲಿ ನೀಡಲಾಗಿದೆ. ಒಂದು ಭಾರತೀಯ ಭಾಷೆಯ ಲಿಪಿಯಿಂದ ಮತ್ತೊಂದು ಭಾರತೀಯ ಭಾಷೆಗೆ ನೇರ ಲಿಪ್ಯಂತರಣದ ಜೊತೆಗೆ, ಲ್ಯಾಟಿನ್ ಲಿಪಿ ರೂಪದ ಪಠ್ಯವನ್ನು ಪಡೆಯಲು ಪರಿವರ್ತನಾ ಸೌಲಭ್ಯವನ್ನು ಈ ಆವೃತ್ತಿಯಲ್ಲಿ ನೀಡಲಾಗಿದೆ.

ಬರಹದ 8 ಮತ್ತು 9 ಆವೃತ್ತಿಗಳೂ ಸೇರಿದಂತೆ ಹಳೆಯ ಆವೃತ್ತಿಗಳು ಈಗ ಡೌನ್‌ಲೋಡ್‌ಗೆ ಲಭ್ಯವಿಲ್ಲ. ಈಗಾಗಲೇ ಅದನ್ನು ಬಳಸುತ್ತಿರುವವರಿಂದ ಪಡೆದು ಉಚಿತ ಬಳಕೆಯನ್ನು ಮುಂದುವರಿಸಬಹುದು. ಬರಹ 10 ಆವೃತ್ತಿಯನ್ನು ಮೊದಲಿಗೆ ಡೌನ್‌ಲೋಡ್ ಮಾಡಿಕೊಂಡು, ನಂತರ, ಟ್ರಯಲ್ ಆವೃತ್ತಿಯನ್ನು ಸಕ್ರಿಯಗೊಳಿಸಿಕೊಳ್ಳಬಹುದು ಅಥವಾ ನಿಗದಿತ ದರವನ್ನು ಪಾವತಿಸಿ ‘ಪ್ರಾಡಕ್ಟ್ ಕೀಯನ್ನು ಪಡೆದು ಅದನ್ನು ನಮೂದಿಸಿ ಪರವಾನಿಗೆಯನ್ನು ಸಕ್ರಿಯ ಗೊಳಿಸಬಹುದು. ಒಮ್ಮೆ ಪರವಾನಿಗೆ ಪಡೆದರೆ ಸಾಕು ಜೀವ ಮಾನದಾದ್ಯಂತ ಅದನ್ನು ಬಳಸಬಹುದು ಎನ್ನುತ್ತದೆ ಬರಹ ಡಾಟ್ ಕಾಂ ಜಾಲತಾಣ.

Writer - ಡಾ. ಎ. ಸತ್ಯನಾರಾಯಣ

contributor

Editor - ಡಾ. ಎ. ಸತ್ಯನಾರಾಯಣ

contributor

Similar News