ಕಳವು ಪ್ರಕರಣ: ಗೂಂಡಾ ಕಾಯ್ದೆಯಡಿ ಶೇಷ ಬಂಧನ

Update: 2018-04-21 17:38 GMT

ಬೆಂಗಳೂರು, ಎ.21: ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಮೊಬೈಲ್, ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪದ ಮೇಲೆ ಶೇಷಾದ್ರಿ ಯಾನೆ ಶೇಷ ಎಂಬಾತನನ್ನು ಹನುಮಂತನಗರ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

ನಗರದ ಬನಶಂಕರಿ 3ನೇ ಹಂತದ ನಿವಾಸಿಯಾದ ಶೇಷಾದ್ರಿ, ತನ್ನ ಸಹಚರರೊಂದಿಗೆ ಸೇರಿಕೊಂಡು ನಗರದ ವಿವಿಧ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಸುಲಿಗೆ ಮತ್ತು ದರೋಡೆಗಳಂತಹ ಅಪರಾಧ ಕೃತ್ಯಗಳನ್ನು ಎಸಗಿ, ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡುತ್ತಿದ್ದ ಹಾಗೂ ಈತನ ವಿರುದ್ಧ ಒಟ್ಟು 18 ಗಂಭೀರ ಪ್ರಕರಣಗಳು ದಾಖಲಾಗಿವೆ.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದರೂ ಅಲ್ಲಿಂದ ಬಿಡುಗಡೆಯಾದ ನಂತರವೂ ತನ್ನ ಅಪರಾಧ ಚಟುವಟಿಕೆಯಿಂದ ಹೊರಬರದೇ ಪದೇ ಪದೇ ತನ್ನ ಸಹಚರರೊಂದಿಗೆ ಸೇರಿ ಗಂಭೀರವಾದ ಪ್ರಕರಣಗಳನ್ನು ಎಸಗುತ್ತಿದ್ದ. ಹೀಗಾಗಿ ಈತನ ವಿರುದ್ಧ ವಿವಿಪುರಂ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಹನುಮಂತನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಸಲ್ಲಿಸಿದ ವರದಿ ಆಧಾರದ ಮೇಲೆ ಪೊಲೀಸ್ ಆಯುಕ್ತರು ಆರೋಪಿ ಶೇಷಾದ್ರಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಆದೇಶ ಹೊರಡಿಸಿದ್ದರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News