ಬಿಜೆಪಿ ಆಡಳಿತದಲ್ಲಿ ಗರಿಷ್ಠಮಟ್ಟ ತಲುಪಿದ ಪೆಟ್ರೋಲ್, ಡೀಸೆಲ್ ಬೆಲೆ

Update: 2018-04-22 08:07 GMT

ಹೊಸದಿಲ್ಲಿ, ಎ.22: ಪೆಟ್ರೋಲ್ ಬೆಲೆ ರವಿವಾರ 74.4 ರೂಪಾಯಿಗೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 65.65 ರೂಪಾಯಿಗೆ ತಲುಪಿದ್ದು, ಬಿಜೆಪಿ ಆಡಳಿತಾವಧಿಯ ಗರಿಷ್ಠ ಮಟ್ಟಕ್ಕೆ ಏರಿದೆ. ಅಬಕಾರಿ ಸುಂಕವನ್ನು ಕಡಿತಗೊಳಿಸುವ ಮೂಲಕ ಗ್ರಾಹಕರ ಹೊರೆ ಕಡಿತಗೊಳಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಳೆದ ಜೂನ್ ತಿಂಗಳಿಂದ ತೈಲ ಬೆಲೆಯನ್ನು ಪ್ರತಿದಿನ ಪರಿಷ್ಕರಿಸುತ್ತಿವೆ. ರವಿವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 19 ಪೈಸೆ ಹೆಚ್ಚಿದೆ ಎಂದು ಬೆಲೆಯ ಅಧಿಸೂಚನೆ ತಿಳಿಸಿದೆ.

ಅಂತರ್ ರಾಷ್ಟ್ರೀಯ ತೈಲ ಬೆಲೆ ಹೆಚ್ಚಿರುವ ಹಿನ್ನೆಲೆಯಲ್ಲಿ ಶನಿವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕ್ರಮವಾಗಿ 13 ಪೈಸೆ ಹಾಗೂ 15 ಪೈಸೆ ಏರಿಕೆಯಾಗಿತ್ತು.
ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 74.40 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ ಸರ್ವಕಾಲಿಕ ದಾಖಲೆ ಮಟ್ಟಕ್ಕೇರಿದ್ದು, ಲೀಟರ್ ದರ 65.65 ರೂಪಾಯಿ ಆಗಿದೆ. ಪೆಟ್ರೋಲ್ ಬೆಲೆ 2013ರ ಸೆಪ್ಟೆಂಬರ್ 14ರಂದು ಗರಿಷ್ಠ ಎಂದರೆ 76.06 ರೂಪಾಯಿ ಆಗಿತ್ತು.

ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಸಚಿವಾಲಯ, ಎಕ್ಸೈಸ್ ಸುಂಕ ಇಳಿಕೆ ಮಾಡುವಂತೆ ಕೋರಿತ್ತು. ಆದರೆ ಫೆಬ್ರವರಿ 1ರಂದು ಅರುಣ್ ಜೇಟ್ಲೆ ಮಂಡಿಸಿದ ಬಜೆಟ್‍ನಲ್ಲಿ ಯಾವ ಪ್ರಸ್ತಾಪವೂ ಇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News