ಖುಲಾಸೆಗೊಂಡವರು ಅಮಾಯಕರಾದರೆ ನಮ್ಮ ಮಕ್ಕಳನ್ನು ಕೊಂದವರು ನಾವೇನಾ?

Update: 2018-04-22 12:43 GMT
ಚಿತ್ರ ಕೃಪೆ : ANI

ಅಹ್ಮದಾಬಾದ್,ಎ.22: ‘ಖುಲಾಸೆಗೊಂಡವರು ಅಮಾಯಕರು ಎಂದಾದರೆ ನಮ್ಮ ಮಕ್ಕಳನ್ನೂ ಕೊಂದವರು ನಾವೇನಾ?’ ಇದು ಘರ್ಷಣೆಗಳಲ್ಲಿ ತನ್ನ ಕುಟುಂಬದ ಎಂಟು ಜನರು ಹತ್ಯೆಯಾಗಿದ್ದನ್ನು ಕಣ್ಣಾರೆ ಕಂಡಿದ್ದ ಸಂತ್ರಸ್ತೆಯೋರ್ವಳು ಗುಜರಾತ್ ಉಚ್ಚ ನ್ಯಾಯಾಲಯವು ಶುಕ್ರವಾರ 2002ರ ನರೋಡಾ ಪಾಟಿಯಾ ದಂಗೆ ಪ್ರಕರಣದಲ್ಲಿಯ 32 ದೋಷಿಗಳ ಪೈಕಿ 17 ಜನರನ್ನು ಖುಲಾಸೆಗೊಳಿಸಿದ ನಂತರ ಕೇಳಿದ ಪ್ರಶ್ನೆ.

ಗೋಧ್ರಾ ಘಟನೆಯ ಮರುದಿನ,2002,ಫೆ.28ರಂದು ಅಹ್ಮದಾಬಾದ್‌ನ ನರೋಡಾ ಪಾಟಿಯಾ ಪ್ರದೇಶದಲ್ಲಿ ನಡೆದಿದ್ದ ಕೋಮುದಂಗೆಯಲ್ಲಿ ಕನಿಷ್ಠ 97 ಮುಸ್ಲಿಮರು ಕೊಲ್ಲಲ್ಪಟ್ಟಿದ್ದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂತ್ರಸ್ತ ಮಹಿಳೆ, ನಮ್ಮ ಕುಟುಂಬದ ಎಂಟು ಜನರು ನಮ್ಮ ಕಣ್ಣೆದುರಿಗೇ ಕೊಲ್ಲಲ್ಪಟ್ಟಿದ್ದರು. ಈಗ ಬಿಡುಗಡೆಗೊಂಡವರು ಅಮಾಯಕರಾಗಿದ್ದರು ಎಂದಾದರೆ ನಮ್ಮ ಮಕ್ಕಳನ್ನು ನಾವೇ ಕೊಂದಿದ್ದೇವೆಯೇ? ಮಾಯಾ ಕೊಡ್ನಾನಿ ಅಮಾಯಕರು ಎಂದು ನ್ಯಾಯಾಲಯವು ಘೋಷಿಸಿದೆ. ಎರಡು ವರ್ಷಗಳ ಬಳಿಕ ಬಾಬು ಬಜರಂಗಿ ಕೂಡ ಬಿಡುಗಡೆಗೊಳ್ಳುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಮಾಜಿ ಸಚಿವೆ ಕೊಡ್ನಾನಿ ಮತ್ತು ಇತರ 16 ಜನರನ್ನು ಖುಲಾಸೆಗೊಳಿಸಿರುವ ಉಚ್ಚ ನ್ಯಾಯಾಲಯವು ಜೀವಾವಧಿ ಶಿಕ್ಷೆಗೊಳಗಾಗಿರುವ ಬಜರಂಗಿ ಸೇರಿದಂತೆ 13 ಜನರು ದೋಷಿಗಳು ಎನ್ನುವುದನ್ನು ಎತ್ತಿಹಿಡಿದಿದೆ. ಇತರ ಇಬ್ಬರು ಆರೋಪಿಗಳ ಕುರಿತು ತೀರ್ಪಿಗಾಗಿ ನಿರೀಕ್ಷಿಸಲಾಗುತ್ತಿದ್ದು,ಇನ್ನೋರ್ವ ಆರೋಪಿ ಮೃತಪಟ್ಟಿದ್ದಾನೆ.

2012ರಲ್ಲಿ ವಿಶೇಷ ನ್ಯಾಯಾಲಯವು ಕೊಡ್ನಾನಿ ಮತ್ತು ಬಜರಂಗಿ ಸೇರಿದಂತೆ 32 ಜನರಿಗೆ ಜೀವಾವಧಿ ಶಿಕ್ಷೆ ಘೋಷಿಸಿತ್ತು. ಈ ಪೈಕಿ ಏಳು ಜನರಿಗೆ 21 ವರ್ಷಗಳ ಮತ್ತು ಇತರರಿಗೆ 14 ವರ್ಷಗಳ ಜೀವಾವಧಿ ಶಿಕ್ಷೆಗಳನ್ನು ವಿಧಿಸಲಾಗಿತ್ತು. ತೀರ್ಪಿನ ವಿರುದ್ಧಎಲ್ಲ ದೋಷಿಗಳು ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಗಳನ್ನು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News