ಶತಮಾನದ ಹಿಂದಿನ ಎರಡು ಅಪರೂಪದ ಎರಡೂವರೆ ರೂ.ನೋಟುಗಳ ಹರಾಜು

Update: 2018-04-22 18:37 GMT

1918ರಲ್ಲಿ ಚಲಾವಣೆಗೆ ಬಂದಿದ್ದ ಎರಡು ಅಪರೂಪದ ಎರಡೂವರೆ ರೂ. ನೋಟು ಗಳನ್ನು ರವಿವಾರ ಇಲ್ಲಿ ಹರಾಜು ಹಾಕಲಾಗಿದೆ. ಹರಾಜಿನ ವಿವರಗಳನ್ನು ತಕ್ಷಣಕ್ಕೆ ಬಹಿರಂಗಗೊಳಿಸಲಾಗಿಲ್ಲ.
 ಬ್ರಿಟಿಷರು ಕಾಗದದ ನೋಟುಗಳನ್ನು ಪರಿಶೀಲನೆಗಾಗಿ ಪ್ರಯೋಗಿಸುತ್ತಿದ್ದ ಸಂದರ್ಭ 2018,ಜ.22ರಂದು ಮೊದಲ ಬಾರಿಗೆ ಎರಡೂವರೆ ರೂ.ನೋಟುಗಳನ್ನು ಬಿಡುಗಡೆಗೊಳಿಸಿದ್ದರು. ಆಗಿನ ಕಾಲದಲ್ಲಿ ಪ್ರತಿ ಎರಡೂವರೆ ರೂ.ನೋಟಿನ ವೌಲ್ಯ ಒಂದು ಡಾಲರ್‌ಗೆ ಸಮನಾಗಿತ್ತು.
 ನೋಟಿನ ಮುಂಭಾಗದಲ್ಲಿ ಬ್ರಿಟಿಷ್ ದೊರೆ ಐದನೇ ಜಾರ್ಜ್ ಅವರ ಚಿತ್ರವಿದ್ದು,ಸರಕಾರದ ಕಾರ್ಯದರ್ಶಿಯಾಗಿದ್ದ ಎಂ.ಎಸ್.ಗುಬೇ ಅವರ ಸಹಿಯಿದೆ.
ವಲಯಗಳನ್ನು ಸೂಚಿಸಲು ನೋಟುಗಳ ಮೇಲ್ಭಾಗದಲ್ಲಿ ಬಿ,ಕೆ ಇತ್ಯಾದಿ ಅಕ್ಷರಗಳನ್ನು ಮುದ್ರಿಸಲಾಗುತ್ತಿತ್ತು. ಆಗಿನ ಅವಿಭಜಿತ ಭಾರತವು ಏಳು ವಲಯಗಳನ್ನು ಹೊಂದಿತ್ತು. ಮುದ್ರಿತ ಅಕ್ಷರದ ಆಧಾರದಲ್ಲಿ ನೋಟುಗಳನ್ನು ನಿಗದಿತ ವಲಯದಲ್ಲಿ ವಿತರಿಸಲಾಗುತ್ತಿತ್ತು. ಈ ಪೈಕಿ ಮೂರು ವಲಯಗಳು ಈಗ ಭಾರತದಲ್ಲಿಲ್ಲ. ರವಿವಾರ ಹರಾಜಿಗಿಟ್ಟಿದ್ದ ಕೋಲ್ಕತಾ ವಲಯದ ಒಂದು ನೋಟಿಗೆ ಎಂಟು ಲ.ರೂ .ಮತ್ತು ಮುಂಬೈ ವಲಯದ ಇನ್ನೊಂದು ನೋಟಿಗೆ 2.5 ಲ.ರೂ. ಮೂಲಬೆಲೆಗಳನ್ನು ನಿಗದಿಗೊಳಿಸಲಾಗಿತ್ತು.
1926,ಜ.1ರ ವೇಳೆಗೆ ಈ ನೋಟುಗಳನ್ನು ಚಲಾವಣೆಯಿಂದ ಸಂಪೂರ್ಣವಾಗಿ ಹಿಂದೆಗೆದುಕೊಳ್ಳಲಾಗಿತ್ತು. ವಿಶ್ವಾದ್ಯಂತ ಇಂತಹ ಸುಮಾರು 250 ನೋಟುಗಳಿವೆ ಎಂದು ನಾಣ್ಯಗಳು,ನೋಟುಗಳು ಮತ್ತು ಅಂಚೆಚೀಟಿಗಳ ಆನ್‌ಲೈನ್ ಮ್ಯೂಸಿಯಂ ಮಿಂಟೇಜ್‌ವರ್ಲ್ಡ್ ಡಾಟ್ ಕಾಮ್‌ನ ಜಯೇಶ ಗಲಾ ತಿಳಿಸಿದರು.
 ಮೊದಲನೇ ಮಹಾಯುದ್ಧದ ಕಾಲದಲ್ಲಿ ನಾಣ್ಯಗಳ ಲೋಹಗಳನ್ನು ಮದ್ದುಗುಂಡು ಗಳನ್ನು ತಯಾರಿಸಲು ಬಳಸಲಾಗುತ್ತಿತ್ತು. ಹೀಗಾಗಿ ನಾಣ್ಯಗಳ ಕೊರತೆಯಾಗಿತ್ತು. ಅಂದಿನ ಕಾಲದಲ್ಲಿ ಎಂಟು ಆಣೆ ಎಂದರೆ ಅರ್ಧ ರೂಪಾಯಿಗೂ ಹೆಚ್ಚು ವೌಲ್ಯವಿತ್ತು. ಹೀಗಾಗಿ ಎಂಟು ಆಣೆಯ ನಾಣ್ಯದ ಅಲಭ್ಯತೆಯನ್ನು ನೀಗಿಸಲು ಎರಡೂವರೆ ರೂ.ನೋಟನ್ನು ಉಪಯೋಗಿಸಲಾಗುತ್ತಿತ್ತು ಎಂದು ಗಲಾ ತಿಳಿಸಿದರು. ಇಂದು ಈ ನೋಟಿನ ವೌಲ್ಯ 30 ಗ್ರಾಂ ಬೆಳ್ಳಿಗೆ ಸಮನಾಗಿದೆ ಎಂದರು.
ಆದರೆ ಹರಾಜು ನಡೆಸಿದ ಟಾಡಿವಾಲಾ ಆಕ್ಷನ್ಸ್ ನ ಮ್ಯಾಲ್ಕಂ ಟಾಡಿವಾಲಾ ಇದನ್ನೊಪ್ಪುವುದಿಲ್ಲ. ಅಂದಿನ ದಿನಗಳಲ್ಲಿ ಭಾರತವು ಆರ್ಥಿಕವಾಗಿ ಅಮೆರಿಕಕ್ಕಿಂತ ಹೆಚ್ಚು ಸದೃಢವಾಗಿತ್ತು. ಹೀಗಾಗಿ ಈ ನೋಟಿನ ವೌಲ್ಯವನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ ಎಂದರು.
ಬ್ರಿಟಿಷ್ ಸರಕಾರವು ವಿಲಕ್ಷಣ ಮುಖಬೆಲೆಗಳ ಹಲವಾರು ನೋಟುಗಳನ್ನು ಚಲಾವಣೆಗೆ ತಂದಿತ್ತು ಎಂದು ಹೇಳಿದ ಮುಂಬೈ ವಿವಿಯ ಮಾಜಿ ಇತಿಹಾಸ ಬೋಧಕ ಅರವಿಂದ ಗಣಾಚಾರಿ ಅವರು,ಮೊದಲ ಮಹಾಯುದ್ಧದ ವೇಳೆ ಸೈನಿಕನಿಗೆ 12 ರೂ.ಮಾಸಿಕ ವೇತನವಿತ್ತು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News