ಮಾಂಟೆಕಾರ್ಲೊ ಮಾಸ್ಟರ್ಸ್ ಟೂರ್ನಿ: 11ನೇ ಬಾರಿ ನಡಾಲ್ ಚಾಂಪಿಯನ್

Update: 2018-04-22 19:08 GMT

ಮಾಂಟೆಕಾರ್ಲೊ, ಎ.22: ಮಾಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್‌ನ ರಫೆಲ್ ನಡಾಲ್ 11ನೇ ಬಾರಿ ಟ್ರೋಫಿ ಜಯಿಸಿ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ವಿಶ್ವದ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ.

ಇಲ್ಲಿ ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ 31ರ ಹರೆಯದ ನಡಾಲ್ ಜಪಾನ್‌ನ ಕೀ ನಿಶಿಕೊರಿಯವರನ್ನು 6-3, 6-2 ನೇರ ಸೆಟ್‌ಗಳಿಂದ ಮಣಿಸಿದರು. ಟೆನಿಸ್ ಓಪನ್ ಯುಗದಲ್ಲಿ ಒಂದೇ ಟೂರ್ನಿಯನ್ನು 11 ಬಾರಿ ಜಯಿಸಿದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾದರು. ಇದು ನಡಾಲ್ ಜಯಿಸಿದ 76ನೇ ಎಟಿಪಿ ಟೂರ್ ಪ್ರಶಸ್ತಿಯಾಗಿದೆ.

31ನೇ ಮಾಸ್ಟರ್ಸ್ ಪ್ರಶಸ್ತಿ ಜಯಿಸಿದ ನಡಾಲ್ ಸರ್ಬಿಯದ ನೊವಾಕ್ ಜೊಕೊವಿಕ್ ದಾಖಲೆಯನ್ನು ಮುರಿದರು. 16 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಆವೆಮಣ್ಣಿನ ಅಂಗಣದಲ್ಲಿ ಅಪೂರ್ವ ದಾಖಲೆ ಮುಂದುವರಿಸಿದ್ದಾರೆ.

ಸ್ಪೇನ್‌ನ ನಡಾಲ್ ಮುಂದಿನ ವಾರ ಆರಂಭವಾಗಲಿರುವ ಬಾರ್ಸಿಲೋನ ಓಪನ್‌ನಲ್ಲಿ 11ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.

ನಿಶಿಕೊರಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್‌ರನ್ನು 3-6, 6-3, 6-4 ಸೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ತಲುಪಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಕಳೆದ ನಾಲ್ಕು ತಿಂಗಳುಗಳಿಂದ ಟೆನಿಸ್‌ನಿಂದ ದೂರ ಉಳಿದಿರುವ ನಿಶಿಕೊರಿ 2016ರಲ್ಲಿ ಕೊನೆಯ ಬಾರಿ ಕೆನಡಾದಲ್ಲಿ ನಡೆದ ಮಾಸ್ಟರ್ಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದರು.

ವಿಶ್ವದ 36ನೇ ರ್ಯಾಂಕಿನ ನಿಶಿಕೊರಿ ಮೂರು ಬಾರಿ ಮಾಸ್ಟರ್ಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದರೂ ಪ್ರಶಸ್ತಿ ಗೆದ್ದುಕೊಳ್ಳಲು ಸಾಧ್ಯವಾಗಿಲ್ಲ. ನಿಶಿಕೊರಿ 2016ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ನಡಾಲ್‌ರನ್ನು ಸೋಲಿಸಿದ್ದರು. ಆ ಬಳಿಕ 10 ಬಾರಿಯ ಮಾಂಟೆಕಾರ್ಲೊ ಚಾಂಪಿಯನ್ ನಡಾಲ್‌ರನ್ನು ಸೋಲಿಸಲು ಸಾಧ್ಯವಾಗಿಲ್ಲ.

ಶನಿವಾರ ನಡೆದ ಮತ್ತೊಂದು ಸೆಮಿ ಫೈನಲ್‌ನಲ್ಲಿ ಗ್ರಿಗೊರ್ ಡಿಮಿಟ್ರೊವ್‌ರನ್ನು 6-4, 6-1 ನೇರ ಸೆಟ್‌ಗಳಿಂದ ಸೋಲಿಸಿದ್ದ ನಡಾಲ್ 12ನೇ ಬಾರಿ ಮಾಂಟೆಕಾರ್ಲೊ ಮಾಸ್ಟರ್ಸ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News