400 ವರ್ಷಗಳ ನಂತರ ಮೊಟ್ಟಮೊದಲ ಬಾರಿಗೆ ಈ ದೇವಸ್ಥಾನಕ್ಕೆ ಪುರುಷರ ಪ್ರವೇಶ!

Update: 2018-04-23 06:44 GMT

ಭುಬನೇಶ್ವರ್,ಎ.23 : ಒಡಿಶಾದ ಕೇಂದ್ರಪುರ ಜಿಲ್ಲೆಯಲ್ಲಿರುವ ಮಾ ಪಂಚುಭುರಾಹಿ ದೇವಳದಲ್ಲಿರುವ ಐದು ಮೂರ್ತಿಗಳನ್ನು ಮುಟ್ಟಲು ಕಳೆದ 400 ವರ್ಷಗಳಲ್ಲಿಯೇ ಪ್ರಪ್ರಥಮ ಬಾರಿಗೆ ಪುರುಷರಿಗೆ ಅನುಮತಿಸಲಾಗಿದೆ. ವಿಚಿತ್ರ ಪದ್ಧತಿಯೊಂದರಲ್ಲಿ ಈ ದೇವಸ್ಥಾನದಲ್ಲಿ ಪುರುಷರಿಗೆ ಪ್ರವೇಶ ನಿಷಿದ್ಧವಾಗಿತ್ತಲ್ಲದೆ ಕೇವಲ ವಿವಾಹಿತ ದಲಿತ ಮಹಿಳೆಯರಿಗೆ ಮಾತ್ರ ಮೂರ್ತಿಗಳನ್ನು ಮುಟ್ಟುವ ಹಾಗೂ ಪೂಜೆ ಮಾಡುವ ಅಧಿಕಾರವಿತ್ತು.

ಆದರೆ ಎಪ್ರಿಲ್ 20ರಂದು ಅಲ್ಲಿನ ಅರ್ಚಕಿಯರು ಐದು ಪುರುಷರಿಗೆ ದೇವಳದೊಳಗೆ ಪ್ರವೇಶಿಸಲು ಒಂದು ದಿನ ಅನುಮತಿಸಿದ್ದರು. ಆ ದೇವಸ್ಥಾನವಿರುವ ಸತಭಯ ಗ್ರಾಮದಲ್ಲಿ ಏರುತ್ತಿರುವ ಸಮುದ್ರ ಮಟ್ಟದಿಂದಾಗಿ  ದೇವಳ ಅಪಾಯದಲ್ಲಿದೆಯೆಂದು ತಿಳಿದು ಅಲ್ಲಿನ ಮೂರ್ತಿಗಳನ್ನು ಸ್ಥಳಾಂತರಿಸಲೆಂದು ಈ ಪುರುಷರಿಗೆ ಒಳಗೆ ಪ್ರವೇಶ ನೀಡಲಾಗಿತ್ತು.

ಜಾಗತಿಕ ತಾಪಮಾನದಲ್ಲಿ ಏರಿಕೆ ಹಾಗೂ ಏರುತ್ತಿರುವ ಸಮುದ್ರದ ನೀರಿನ ಮಟ್ಟ ದೇವಳದ ಪದ್ಧತಿಯನ್ನು ಮುರಿಯುವ ಅನಿವಾರ್ಯತೆ ಸೃಷ್ಟಿಸಿತ್ತು. ಆ ದೇವಳದ  ಕಪ್ಪು ಶಿಲಾ ಮೂರ್ತಿಗಳು ಭಾರವಾಗಿದ್ದವಲ್ಲದೆ ಪ್ರತಿಯೊಂದೂ 1.5  ಟನ್ ತೂಗುತ್ತಿದ್ದುದರಿಂದ  ಮಹಿಳಾ ಅರ್ಚಕಿಯರಿಗೆ ಅವುಗಳನ್ನು ಸ್ಥಳಾಂತರಿಸುವುದು ಅಸಾಧ್ಯವಾಗಿತ್ತು.

ದೇವಳದ ಮೂರ್ತಿಗಳನ್ನು ಈಗಿನ ಸ್ಥಳದಿಂದ ಸುಮಾರು 12 ಕಿಮೀ ದೂರ ಸಾಗಿಸಲಾಗಿದ್ದು ಅಲ್ಲಿ ಶುದ್ಧೀಕರಣ ಪ್ರಕ್ರಿಯೆ ನಡೆಸಲಾಗಿದೆ. ಮಾ ಪಂಚಭುರಾಹಿ ತಮ್ಮ ಗ್ರಾಮವನ್ನು ಪ್ರಾಕೃತಿಕ ವಿಪತ್ತಿನಿಂದ ರಕ್ಷಿಸುತ್ತಾಳೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿವೆ.

ಒಡಿಶಾ ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣಾ ಪ್ರಾಧಿಕಾರವು ವಿಶ್ವ ಬ್ಯಾಂಕ್ ನೆರವಿನ ಯೋಜನೆಯೊಂದರನ್ವಯ ಸಮುದ್ರ ಕೊರೆತದಿಂದ ಅಪಾಯವೆದುರಿಸುತ್ತಿರುವ ಸತಭಯ ಮುಂತಾದ ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದ್ದು ಕೇಂದ್ರಪರ ಎಂಬಲ್ಲಿನ ಬಗಪತಿಯ ಎಂಬ ಸ್ಥಳಕ್ಕೆ ಗ್ರಾಮಗಳ ಜನತೆಯನ್ನು ಸ್ಥಳಾಂತರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News