ಡಿಜಿಪಿ ಹೆಸರಲ್ಲಿ ನಕಲಿ ಖಾತೆ ತೆರೆದ ಈ ಬಾಲಕ ಮಾಡಿದ್ದೇನು ಗೊತ್ತಾ?

Update: 2018-04-23 17:24 GMT

ಹೊಸದಿಲ್ಲಿ,ಎ.23: 10ನೇ ತರಗತಿಯ ವಿದ್ಯಾರ್ಥಿಯೋರ್ವ ಉತ್ತರ ಪ್ರದೇಶದ ಡಿಜಿಪಿ ಓಂ ಪ್ರಕಾಶ ಸಿಂಗ್ ಅವರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ತೆರೆದಿದ್ದು,ಗೋರಖ್ ಪುರ ಜಿಲ್ಲಾ ಪೊಲೀಸರು ಈ ನಕಲಿ ಖಾತೆಯಲ್ಲಿನ ನಿರ್ದೇಶಗಳನ್ನು ಅನುಸರಿಸುವ ಮೂಲಕ ಬೇಸ್ತು ಬಿದ್ದಿದ್ದಾರೆ. ವಂಚನೆ ಪ್ರಕರಣವೊಂದರಲ್ಲಿ ಬಾಲಕನ ಹಿರಿಯ ಸೋದರ ದುಬೈನಲ್ಲಿ ಕೆಲಸದ ಆಮಿಷಕ್ಕೊಳಗಾಗಿ 45,000 ರೂ.ಗಳನ್ನು ಕಳೆದುಕೊಂಡಿದ್ದು,ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹತಾಶೆಗೊಂಡು ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.

 ನಕಲಿ ಟ್ವಿಟರ್ ಖಾತೆಯು ನಿಜಕ್ಕೂ ಡಿಜಿಪಿಯವರದ್ದೇ ಎಂದು ಗೋರಖ್ ಪುರ ಪೊಲೀಸರು ನಂಬುವಂತೆ ಮಾಡಿದ್ದ ಬಾಲಕ, ಸಿಂಗ್ ಹೆಸರಿನಲ್ಲಿ ಗೋರಖಪುರದ ಎಸ್‌ಎಸ್‌ಪಿಗೆ ನಿರ್ದೇಶ ನೀಡಿ,ಅವರು ಕ್ರಮ ಕೈಗೊಂಡು ವಂಚಕನನ್ನು ಬಂಧಿಸುವಂತೆ ಮಾಡಿದ್ದಾನೆ. ಅಲ್ಲದೆ ಆತ ತನ್ನ ಸೋದರನಿಗೆ 30,000 ರೂ.ಗಳನ್ನು ಮರಳಿಸುವಂತೆಯೂ ಮಾಡಿದ್ದಾನೆ.

ಬಾಲಕ ಮತ್ತು ಆತನೊಂದಿಗೆ ಶಾಮೀಲಾಗಿದ್ದ ಸ್ನೇಹಿತನನ್ನು ಪೊಲೀಸರು ವಶಕ್ಕೆ ತೆಗದುಕೊಂಡು,ಕಠಿಣ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದಾರೆ.

 ಡಿಜಿಪಿ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಕಾರ್ಯಾಚರಿಸುತ್ತಿದೆ ಎಂದು ಶಂಕಿಸಿದ್ದ ಅವರ ಕಚೇರಿಯು ಕಳೆದ ತಿಂಗಳು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತ್ತು ಮತ್ತು ಪ್ರಕರಣವು ದಾಖಲಾಗಿತ್ತು. ಸೈಬರ್ ಘಟಕದ ಸಿಬ್ಬಂದಿ ದೂರವಾಣಿ ಕರೆಯೊಂದರ ಜಾಡು ಹಿಡಿದು ಕೊನೆಗೂ ಸೈಬರ್ ವಂಚಕ ಬಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News