ಭೀಮ್ ಆರ್ಮಿ ಮುಖ್ಯಸ್ಥ 'ತಲೆಮರೆಸಿಕೊಂಡಿದ್ದಾನೆ' ಎಂಬ ಪೋಸ್ಟರ್ ಅಂಟಿಸಿ ಫಜೀತಿಗೊಳಗಾದ ಪೊಲೀಸರು!

Update: 2018-04-24 09:04 GMT

ಲಕ್ನೋ, ಎ.24: ಶನಿವಾರ ಸಹರಣಪುರದ ಫತೇಹಪುರ ಗ್ರಾಮದಲ್ಲಿರುವ ಭೀಮ್ ಆರ್ಮಿ ರಾಷ್ಟ್ರೀಯ ಅಧ್ಯಕ್ಷ ವಿನಯ್ ರತನ್  ನಿವಾಸಕ್ಕೆ ತೆರಳಿದ ಪೊಲೀಸ್ ತಂಡವೊಂದು ಅಲ್ಲಿ ಆತನ ತಾಯಿ ಹಾಗೂ ಸೋದರ ಸಚಿನ್ ಜತೆ ಮಾತನಾಡಿ ಮನೆಯ ಗೋಡೆಯ ಮೇಲೆ 'ವಿನಯ್ ತಲೆಮರೆಸಿಕೊಂಡ ಆರೋಪಿ' ಎಂಬ ಕೋರ್ಟ್ ಆದೇಶದ ಪ್ರತಿಯನ್ನು ಅಂಟಿಸಿ ಠಾಣೆಗೆ ಮರಳಿತ್ತು. ಅಷ್ಟರೊಳಗಾಗಿ ಪೊಲೀಸ್ ತಂಡ ವಿನಯ್ ಮನೆಯವರೊಂದಿಗೆ ಸಂಭಾಷಣೆ ನಡೆಸುತ್ತಿದ್ದ ವೀಡಿಯೋವೊಂದು ಬಹಿರಂಗಗೊಂಡಿತ್ತಲ್ಲದೆ, ಅಲ್ಲಿ ಪೊಲೀಸರು ವಿನಯ್ ರತನ್ ನ ಸಹೋದರನೆಂದು ಮಾತನಾಡಿದ ವ್ಯಕ್ತಿ ಸಚಿನ್ ಆಗಿರದೆ ವಿನಯ್ ಆಗಿದ್ದನೆಂಬ ಅಂಶವನ್ನು ಎತ್ತಿ ತೋರಿಸಿತ್ತು. ಇದು ತಿಳಿದಿದ್ದೇ ತಡ ಪೊಲೀಸರು ಮತ್ತೆ ಆ ಮನೆಯತ್ತ ಧಾವಿಸಿದ್ದರೂ ವಿನಯ್ ಅಲ್ಲಿರಲಿಲ್ಲ. ಈ ಘಟನೆಯ ಬಗ್ಗೆ ಸಹರಾನ್ಪುರ ಎಸ್‍ಎಸ್‍ಪಿ ತನಿಖೆಗೆ ಆದೇಶಿಸಿದ್ದಾರೆ.

ಜಿಲ್ಲೆಯಲ್ಲಿ ಮೇ 2017ರಲ್ಲಿ ನಡೆದ ಜಾತಿ ಸಂಘರ್ಷವೊಂದಕ್ಕೆ ಸಂಬಂಧಿಸಿದಂತೆ 35 ವರ್ಷದ ವಿನಯ್ ಪೊಲೀಸರಿಗೆ ಬೇಕಾಗಿದ್ದ. ಆತನನ್ನು ಪತ್ತೆ ಹಚ್ಚಿದವರಿಗೆ ರೂ 12,000 ನಗದು ಬಹುಮಾನವನ್ನೂ ಪೊಲೀಸರು ಘೋಷಿಸಿದ್ದರು. ವಿನಯ್ ಸೋಮವಾರ ನ್ಯಾಯಾಲಯದೆದುರು ಶರಣಾದರೂ ಶನಿವಾರದ ಘಟನೆ ಸಂಬಂಧ ತನಿಖೆ ಮುಂದುವರಿಯುವುದು.

ವಿನಯ್ ರತನ್ ವಿರುದ್ಧ ಕೋತ್ವಾಲಿ ದೇಹತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದುದರಿಂದ ಅಲ್ಲಿನ ಪೊಲೀಸರಿಗೆ ನ್ಯಾಯಾಲಯದ ಆದೇಶ ತಲುಪಿಸಲು ಹೇಳಿತ್ತು. ಇಬ್ಬರು ಎಸ್ಸೈ ಹಾಗೂ ಮೂವರು ಕಾನ್‍ಸ್ಟೇಬಲ್ ಗಳು ಅಲ್ಲಿಗೆ ತೆರಳಿದ್ದರು. ಆಗ ಅವರ ಬಳಿ ಬಂದ ರತನ್ ತಾಯಿ ತನ್ನ ಜತೆಗಿದ್ದವನನ್ನು ವಿನಯ್ ಸೋದರ ಸಚಿನ್ ಎಂದು ಪರಿಚಯಿಸಿದ್ದರು. ಪೊಲೀಸರು ವಿನಯ್ ನನ್ನು ಈ ಹಿಂದೆ ನೋಡಿಲ್ಲದೇ ಇದ್ದುದರಿಂದ ಈ ಪ್ರಮಾದವುಂಟಾಗಿದೆ. ಮೇಲಾಗಿ ಅಲ್ಲಿ ಆತನ ವಿರುದ್ಧ ಈ ಹಿಂದೆ ಯಾವುದೇ ಕ್ರಿಮಿನಲ್ ಪ್ರಕರಣವಿರಲಿಲ್ಲ ಎನ್ನಲಾಗಿದೆ.

ಸಹರಾನ್ಪುರದಲ್ಲಿ ಕಳೆದ ವರ್ಷದ ಮೇ 5ರಂದು ನಡೆದ ಹಿಂಸಾಚಾರದಲ್ಲಿ ಠಾಕುರ್ ಸಮುದಾಯದ ವ್ಯಕ್ತಿಯೊಬ್ಬನನ್ನು ಕೊಲ್ಲಲಾಗಿದ್ದರೆ, 25 ದಲಿತರ ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ರಜಪೂತ ಅರಸ ಮಹಾರಾಣ ಪ್ರತಾಪ್ ಗೌರವಾರ್ಥ ನಡೆದ ಮೆರವಣಿಗೆಯೊಂದರಲ್ಲಿ ದೊಡ್ಡ ದನಿಯಲ್ಲಿ ಧ್ವನಿವರ್ಧಕಗಳನ್ನು ಉಪಯೋಗಿಸಿದ್ದಕ್ಕೆ ಶಬ್ಬೀರಪುರದ ದಲಿತರು ಆಕ್ಷೇಪಿಸಿದ ನಂತರ ಹಿಂಸಾಚಾರ ಆರಂಭಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News