ವಿದೇಶದಲ್ಲಿ ಭಾರತೀಯ ವೈದ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ಪ್ರಧಾನಿ ಮೋದಿ ಸ್ಪಷ್ಟನೆಗೆ ವೈದ್ಯರ ಪಟ್ಟು

Update: 2018-04-24 15:06 GMT

ಬೆಂಗಳೂರು, ಎ.24: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ವಿದೇಶದಲ್ಲಿ ಭಾರತೀಯ ವೈದ್ಯರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆಂದು ಆರೋಪಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ವೈದ್ಯರು ಕಪ್ಪುಪಟ್ಟಿ ಧರಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಮಂಗಳವಾರ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದ ಪ್ರತಿಭಟನೆ ಬೆಂಬಲ ವ್ಯಕ್ತಪಡಿಸಿದ ವೈದ್ಯರು ದಿನನಿತ್ಯದ ಕರ್ತವ್ಯದ ಜೊತೆಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯ ಮಾಡಿದರು.

ಪ್ರತಿಭಟನೆ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಎಚ್.ಎನ್. ರವೀಂದ್ರ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ವೈದ್ಯರು ಸ್ವಯಂ ಕಪ್ಪು ಪಟ್ಟಿ ಧರಿಸುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿರುವುದು ನಮ್ಮ ಒಗ್ಗಟ್ಟು ತೋರಿಸುತ್ತದೆ. ಅಲ್ಲದೆ, ವೈದ್ಯರು ಸಹ ಸಾಮಾಜಿಕ ಮತ್ತು ದೇಶ ಸೇವೆಯಲ್ಲಿ ನಿರತರಾಗಿದ್ದಾರೆ ಎಂದರು.

ಇತ್ತೀಚೆಗೆ ಲಂಡನ್‌ನಲ್ಲಿ ಏರ್ಪಡಿಸಿದ್ದ ‘ಸಬ್ ಕೆ ಸಾಥ್ ಭಾರತ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತಾನಾಡುವ ವೇಳೆ ಭಾರತೀಯ ವೈದ್ಯರು ಸಿಂಗಾಪುರಕ್ಕೆ ಏಕೆ ಹೋಗುತ್ತಾರೆ, ಅಲ್ಲಿ ಹೋಗಿ ಏನು ಮಾಡುತ್ತಾರೆ. ಅಲ್ಲದೆ, ವೈದ್ಯರು ಕಮಿಷನ್‌ಗಾಗಿ ತೆರಳುತ್ತಾರೆ ಎಂದು ಅವಹೇಳನವಾಗಿ ನುಡಿದಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವಹಿತಾಸಕ್ತಿಗಾಗಿ ದೇಶ ಬಿಟ್ಟು ಹೋದವರ ಅನಿವಾಸಿ ಭಾರತೀಯರ ಮುಂದೆ ಭಾರತೀಯ ವೈದ್ಯರನ್ನು ಅಪಮಾನ ಮಾಡಿದ್ದಾರೆ. ನಾವು ಹಣದಾಸೆಗೋಸ್ಕರ ದೇಶಬಿಟ್ಟು ಹೊರಹೋಗಿಲ್ಲ. ದೇಶದಲ್ಲುಂಟಾಗಿರುವ ವಿಷಮ ಪರಿಸ್ಥಿತಿಯಲ್ಲೂ ಸಹ ನಾವು ಪ್ರಧಾನ ಸೇವಕರಾಗಿ ದೇಶದ ಆರೋಗ್ಯ ಕಾಪಾಡುತ್ತಿದ್ದೇವೆ. ನಮ್ಮ ಬಗ್ಗೆ ಹಗುರವಾಗಿ ಮಾತನಾಡುವ ಬದಲು, ದೇಶಬಿಟ್ಟು ಹೊರದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ಪ್ರಶ್ನಿಸಿ ಅವರನ್ನು ದೇಶಕ್ಕೆ ವಾಪಸ್ಸು ತರಲು ಮೊದಲು ಪ್ರಯತ್ನಿಸಿ ಎಂದು ಪ್ರಧಾನಿಗೆ ಸಲಹೆ ನೀಡಿದರು.

ಇಂಗ್ಲೆಂಡ್ ದೇಶದ ಬಜೆಟ್‌ನಲ್ಲಿ ಶೇ. 5ರಿಂದ 7ರಷ್ಟು ಹಣವನ್ನು ಆರೋಗ್ಯ ಸೇವೆಗಾಗಿ ಮೀಸಲಿಡುತ್ತಾರೆ. ಆದರೆ, ನಮ್ಮ ದೇಶದಲ್ಲಿ ಶೇ.0.5ನಷ್ಟು ಹಣ ಮೀಸಲಿಡುತ್ತಾರೆ. ಇದರಿಂದ ಸಮರ್ಪಕ ರೀತಿಯಲ್ಲಿ ಆರೋಗ್ಯ ಸೇವೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ವೈದ್ಯರನ್ನು ದೂರುವ ಬದಲು ಬೆಲೆ ನಿಯಂತ್ರಿಸಲು ಮುಂದಾಗಿ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News