ಅಂಬೇಡ್ಕರ್, ಬಸವಣ್ಣರನ್ನು ಜಾತಿ-ಧರ್ಮಗಳಲ್ಲಿ ಬಂಧಿಸಿದ್ದಾರೆ: ಪ್ರೊ.ಮೈಲಾರಪ್ಪ

Update: 2018-04-24 15:25 GMT

ಬೆಂಗಳೂರು, ಎ.25: ಭಾರತದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಮಾಜ ಸುಧಾರಕ ಬಸವಣ್ಣರನ್ನು ಜಾತಿ, ಧರ್ಮಗಳಲ್ಲಿ ಬಂಧಿಸಿದ್ದಾರೆ ಎಂದು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ದೂರ ಶಿಕ್ಷಣ ಕೇಂದ್ರದ ನಿರ್ದೇಶಕ ಪ್ರೊ.ಬಿ.ಸಿ.ಮೈಲಾರಪ್ಪ ಹೇಳಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಬಸವಣ್ಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮಾಜಿಕ ಪರಿವರ್ತನೆ, ಬದ್ಧತೆಯ ಜಾಗೃತಿ ಹಬ್ಬ-2018 ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಂಬೇಡ್ಕರ್ ಹಾಗೂ ಬಸವಣ್ಣ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ. ಅವರು ದೇಶದ ಆಸ್ತಿ. ಹೀಗಾಗಿ, ಅಂಬೇಡ್ಕರ್ ಮತ್ತು ಬಸವಣ್ಣನನ್ನು ಪ್ರತಿಯೊಬ್ಬರೂ ಮನಸ್ಸಿನೊಳಗೆ ಬಿಟ್ಟುಕೊಳ್ಳುವ ಕಾರ್ಯವಾಗಬೇಕು. ಆದರೆ, ಇಂದು ಪ್ರತಿ ಜಾತಿಗೊಬ್ಬರು, ಧರ್ಮಕ್ಕೊಬ್ಬರಂತೆ ಸ್ವಾಮೀಜಿಗಳಿದ್ದು, ಅವರನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ. ಇದರಿಂದ ಸಮಾಜ ಸುಧಾರಣೆಯಾಗಲ್ಲ. ಬದಲಿಗೆ, ಮಾನವ ಸಂಬಂಧಗಳು ದೂರವಾಗುತ್ತವೆ ಎಂದ ಅವರು, ಭಾರತದಲ್ಲಿ ಪ್ರತಿ ಐದು ನಿಮಿಷಕ್ಕೊಮ್ಮೆ ಒಂದು ಕೊಲೆಯಾಗುತ್ತಿದೆ. ಪ್ರತಿ ಐದು ನಿಮಿಷಕ್ಕೊಂದು ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜ್ಞಾನದ ಮುಂದೆ ಎಲ್ಲವೂ ಶೂನ್ಯ. ಪೂರಕ ಜ್ಞಾನ ಸಿಗದಿದ್ದರೆ ಎಲ್ಲ ಪದವಿಗಳೂ ವ್ಯರ್ಥ ಎಂದ ಅವರು, ಇಂದಿನ ಶಿಕ್ಷಣ ಕೇವಲ ಅಂಕಪಟ್ಟಿಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್‌ರಂತೆ ಶೋಷಿತರ ಪರವಾದ ಹೋರಾಟ ಮನೋಭಾವ ಇಂದಿನ ಯುವಕರಲ್ಲಿ ಮೂಡಬೇಕಿದೆ. ಜೀವನವಿಡೀ ಬಹುಜನರ ಏಳಿಗೆಗೆ ಹೋರಾಡಿದ ಮಹಾಪುರುಷ ಜನ್ಮದಿನ ಸಮಾಜಕ್ಕೆ ಒಂದು ಅರ್ಥಪೂರ್ಣವಾದ ಸಂದೇಶ ಸಾರಬೇಕು ಎಂದು ಅವರು ತಿಳಿಸಿದರು.

ಸಿ.ಎಸ್.ಸೋಮಶೇಖರ್ ಮಾತನಾಡಿ, ಸಾಮಾಜಿಕ ನ್ಯಾಯದ ಪರಿಕಲ್ಪನೆ ನೀಡಿದ ಅಂಬೇಡ್ಕರ್ ಹಾಗೂ ಕಾಯಕವೇ ಕೈಲಾಸ ಎಂದ ಬಸವಣ್ಣ ಜೀವನವಿಡೀ ಸಮಸಮಾಜಕ್ಕಾಗಿ ದುಡಿದವರು. ಅವರನ್ನು ಪ್ರತಿಯೊಬ್ಬರೂ ನೆನೆಯಬೇಕು. ಅವರ ಆಶಯಗಳನ್ನು ಸಾಕಾರಗೊಳಿಸುವ ಕಡೆಗೆ ಪ್ರಯತ್ನ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರೊ.ಬಿ.ಕೆ.ರವಿ, ಕುಪಪತಿ ಪ್ರೊ.ಐ.ಎಸ್.ಶಿವಕುಮಾರ್, ಟಿ.ಎಚ್.ಮೂರ್ತಿ, ಪ್ರೊ.ಗಂಗಾಧರ, ಪ್ರೊ.ಮುನಿರಾಜಪ್ಪ, ಪ್ರೊ.ಉಷಾರಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News