ವಿಧಾನಸಭೆ ನಾಮಪತ್ರ ಸಲ್ಲಿಕೆ ಮುಕ್ತಾಯ: 2025 ಅಭ್ಯರ್ಥಿಗಳಿಂದ 2924 ನಾಮಪತ್ರಗಳು ಸಲ್ಲಿಕೆ

Update: 2018-04-24 15:32 GMT

ಬೆಂಗಳೂರು, ಎ.24: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಒಟ್ಟು 2025 ಅಭ್ಯರ್ಥಿಗಳಿಂದ 2924 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾತನಾಡಿ, ಚುನಾವಣೆ ಕಣದಲ್ಲಿ ಪುರುಷ ಅಭ್ಯರ್ಥಿಗಳು 1920, ಮಹಿಳಾ ಅಭ್ಯರ್ಥಿಗಳು 134 ಹಾಗೂ ಒಟ್ಟು ಪಕ್ಷೇತರ ಅಭ್ಯರ್ಥಿಗಳು 885 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

16 ಕ್ಷೇತ್ರಗಳಲ್ಲಿ 16 ಕ್ಕೂ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಮತಯಂತ್ರದಲ್ಲಿ ನೋಟಾ ಸೇರಿ 16 ಅಭ್ಯರ್ಥಿಗಳ ಪಟ್ಟಿ ಇರುತ್ತದೆ. ಅಂತಹ ಕ್ಷೇತ್ರಗಳಲ್ಲಿ ಎರಡೆರಡು ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು.

ಚುನಾವಣೆಯಲ್ಲಿ ಪಕ್ಷಗಳ ಪ್ರಚಾರದಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರಿಗೆ ಊಟೋಪಚಾರಕ್ಕೆ ನಿರ್ಬಂಧ ಇಲ್ಲ. ಆದರೆ, ಮತದಾರರಿಗೆ ಈ ಅವಕಾಶವಿರುವುದಿಲ್ಲ. ಒಂದು ವೇಳೆ ಮತದಾರರಿಗೆ ಆಸೆ, ಆಮಿಷ ಒಡ್ಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಾಗೂ ಕಾರ್ಯಕರ್ತರ ಮನೆಗಳಲ್ಲಿ ಪಕ್ಷಗಳ ಬಾವುಟ ಕಟ್ಟವುದಕ್ಕೆ ಯಾವುದೆ ನಿರ್ಬಂಧವಿಲ್ಲವೆಂದು ಅವರು ಹೇಳಿದರು.

ಚುನಾವಣಾ ಆಯೋಗ ಯಾವುದೆ ಮದ್ಯದಂಗಡಿಗಳ ಪರವಾನಿಗೆಯನ್ನು ರದ್ದು ಮಾಡಿಲ್ಲ. ಮದ್ಯ ಮಾರಾಟಕ್ಕೆ ಯಾವುದೆ ನಿರ್ಬಂಧವಿಲ್ಲ. ಚುನಾವಣಾ ಆಮಿಷಕ್ಕಾಗಿ ಮದ್ಯ ಮಾರಾಟವಾದರೆ ಮಾತ್ರ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ. ಅಂತಹ ಮದ್ಯದಂಗಡಿಗಳ ವಿರುದ್ಧ ಅಬಕಾರಿ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

41.94ಕೋಟಿ ರೂ.ನಗದು ವಶ
-ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ 41.94ಕೋಟಿ ರೂ.ದಾಖಲೆ ಮೊತ್ತವನ್ನು ವಶಪಡಿಸಿಕೊಳ್ಳುವಲ್ಲಿ ಚುನಾವಣಾ ಆಯೋಗ ಯಶಸ್ವಿಯಾಗಿದೆ. 19.62ಕೋಟಿ ರೂ. ಮೌಲ್ಯದ 407651ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. 2013ರಲ್ಲಿ 67,953 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿತ್ತೆಂದು ತಿಳಿಸಿದರು.

-ಎ.14ರವರೆಗೆ ಹೊಸದಾಗಿ 30.46ಲಕ್ಷ ಮಂದಿ ಮತದಾನದ ಹಕ್ಕನ್ನು ಪಡೆದಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News