ಗೋವಿಂದರಾಜನಗರ ಕ್ಷೇತ್ರ: ‘ಗಣವೇಷ’ದಲ್ಲಿ ಆರೆಸೆಸ್ಸ್ ಮಾಜಿ ಮುಖಂಡ ಹನುಮೇಗೌಡ ನಾಮಪತ್ರ ಸಲ್ಲಿಕೆ

Update: 2018-04-24 15:37 GMT

ಬೆಂಗಳೂರು, ಎ. 24: ನಿನ್ನೆಯೆಷ್ಟೇ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ‘ಗಣವೇಷ’ದಲ್ಲಿ ನಾಮಪತ್ರ ಸಲ್ಲಿಸಿದ್ದ ಆರೆಸೆಸ್ಸ್ ಮಾಜಿ ಮುಖಂಡ ಹನುಮೇಗೌಡ, ‘ಪಕ್ಷಾಂತರಿಗಳ’ ವಿರುದ್ಧ ಇಂದು ಗೋವಿಂದರಾಜನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಮಂಗಳವಾರ ಗೋವಿಂದರಾಜನಗರ ಕ್ಷೇತ್ರದಲ್ಲಿನ ಚಂದ್ರಾ ಲೇಔಟ್‌ನಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಆರೆಸೆಸ್ಸ್ ಗಣವೇಷದಲ್ಲೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ‘ಬಿಜೆಪಿಯಲ್ಲಿನ ಪಕ್ಷಾಂತರಿಗಳು, ಭ್ರಷ್ಟರು ಹಾಗೂ ಸಮಯ ಸಾಧಕರ ವಿರುದ್ಧ ನನ್ನ ಹೋರಾಟ’ ಎಂದು ಹನುಮೇಗೌಡ ವಾಗ್ದಾಳಿ ನಡೆಸಿದರು.

ಈ ವೇಳೆ ಮಾತನಾಡಿದ ಹನುಮೇಗೌಡ, ರಾಜಕೀಯ ವ್ಯವಸ್ಥೆಯಲ್ಲಿ ಭಿನ್ನ ಸಿದ್ಧಾಂತವನ್ನಿಟ್ಟುಕೊಂಡಿರುವ ಬಿಜೆಪಿ ರಾಜಕೀಯವನ್ನು ಸ್ವಚ್ಛ ಮಾಡುವ ಬದಲು ಬಿಜೆಪಿಯೇ ಸ್ವಚ್ಛವಾಗದಷ್ಟು ಕೆಟ್ಟಿದೆ. ಆ ಪಕ್ಷದಲ್ಲಿ ಪ್ರಾಮಾಣಿಕರೇ ಇಲ್ಲ ಎಂದು ಟೀಕಿಸಿದರು.

ಕೆಲವರಿಗೆ ಆ ಪಕ್ಷ ತಮ್ಮ ಸ್ವಂತ ಆಸ್ತಿಯಂತಾಗಿದೆ. ಕುಟುಂಬ ರಾಜಕಾರಣವನ್ನು ವಿರೋಧಿಸಿ ಇದೀಗ ಕುಟುಂಬ ರಾಜಕಾರಣವನ್ನು ಮಾಡುತ್ತಿರುವ ಬಿಜೆಪಿ ನೈತಿಕವಾಗಿ ಭ್ರಷ್ಟಗೊಂಡಿದೆ. ಹೀಗಾಗಿ ಬೇರೆ ಪಕ್ಷಗಳಲ್ಲಿ ಬೆಳವಣಿಗೆಗಳ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News