ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 763 ನಾಮಪತ್ರ ಸಲ್ಲಿಕೆ

Update: 2018-04-24 16:15 GMT

ಬೆಂಗಳೂರು, ಎ.24: ಬೆಂಗಳೂರು ನಗರದ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳಲ್ಲಿ 471 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಒಟ್ಟು 763 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಬಿಬಿಎಂಪಿ ಆಯುಕ್ತರೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುನಾಥ ಪ್ರಸಾದ್ ಮಾಹಿತಿ ನೀಡಿದರು.

ಮಂಗಳವಾರ ನಗರದ ಮಲ್ಲೇಶ್ವರಂನ ಐಪಿಪಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ವಿವರ ನೀಡಿದ ಅವರು, ಎ.27ರವರೆಗೆ ನಾಮಪತ್ರ ವಾಪಸ್ಸು ಪಡೆಯಲು ಅವಕಾಶವಿದೆ ಎಂದು ಹೇಳಿದರು.

ಇಂದಿನಿಂದಲೇ(ಬುಧವಾರ) ಎಲ್ಲ ಚುನಾವಣಾಧಿಕಾರಿಗಳು ನಾಮಪತ್ರಗಳ ಪರಿಶೀಲನಾ ಕಾರ್ಯ ಪ್ರಾರಂಭ ಮಾಡಲಿದ್ದು, ಅನುಮೋದಕರು, ಪಕ್ಷದ ಏಜೆಂಟ್ ಹಾಗೂ ಒಬ್ಬರು ವಕೀಲರೊಂದಿಗೆ ಬರಬಹುದಾಗಿದೆ. ಜತೆಗೆ ಬೇರೆ ಪಕ್ಷಗಳ ನಾಮಪತ್ರಗಳನ್ನು ಮುಟ್ಟದೆ ನೋಡಬಹುದಾಗಿದ್ದು, ನಾಮಪತ್ರಗಳ ಪರಿಶೀಲನಾ ಕಾರ್ಯವನ್ನು ವಿಡಿಯೋ ಚಿತ್ರೀಕರಣ ಮಾಡಲಾಗುವುದು ಎಂದರು.

ನಾಮಪತ್ರಗಳನ್ನು ಹಿಂಪಡೆಯಲು ನೀಡಿರುವ ಅವಧಿ ಮುಗಿದ ನಂತರ ಬ್ಯಾಲೆಟ್‌ನಲ್ಲಿರುವಂತೆ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ರಾಷ್ಟ್ರೀಯ ಹಾಗೂ ರಾಜ್ಯ ಪಕ್ಷಗಳಿಗೆ ಬ್ಯಾಲೆಟ್‌ನಲ್ಲಿ ಕನ್ನಡ ಅಕ್ಷರ ಮಾಲೆಗಳಂತೆ ಆದ್ಯತೆ ನೀಡಲಾಗುವುದು. ನಂತರದಲ್ಲಿ ನೋಂದಣಿ ಪಕ್ಷ ಹಾಗೂ ಕೊನೆಯದಾಗಿ ಪಕ್ಷೇತರರಿಗೆ ಹೆಸರನ್ನು ಬ್ಯಾಲೆಟ್‌ನಲ್ಲಿ ಹಾಕಲಾಗುವುದು ಎಂದು ಮಾಹಿತಿ ನೀಡಿದರು.

ನಾಮಪತ್ರ ಸಲ್ಲಿಸಿರುವ ಯಾವುದೇ ಅಭ್ಯರ್ಥಿಗಳು ಇತರೆ ಅಭ್ಯರ್ಥಿಗಳ ನಾಮಪತ್ರದ ಕುರಿತು ಆಕ್ಷೇಪಣೆ ಸಲ್ಲಿಸಿದರೆ, ಚುನಾವಣಾಧಿಕಾರಿಗಳು ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಿದ್ದಾರೆ. 25 ವರ್ಷಕ್ಕಿಂತ ಕಡಿಮೆ ವಯಸ್ಸು, ಬುದ್ಧಿಮಾಂದ್ಯತೆ, ಲಾಭರಹಿತ ಹುದ್ದೆಯಲ್ಲಿರುವುದು ಸೇರಿ ಗಂಭೀರವಾದ ಲೋಪಗಳು ಕಂಡುಬಂದಾಗ ಮಾತ್ರ ನಾಮಪತ್ರ ರದ್ದುಗೊಳಿಸಲಾಗುವುದೆಂದರು.

‘ಎ.27 ರವರೆಗೆ ನಾಮಪತ್ರ ವಾಪಸ್ಸು ಪಡೆಯಲು ಅವಕಾಶವಿದ್ದು, 25 ವರ್ಷಕ್ಕಿಂತ ಕಡಿಮೆ ವಯಸ್ಸು, ಬುದ್ಧಿಮಾಂದ್ಯತೆ, ಲಾಭರಹಿತ ಹುದ್ದೆಯಲ್ಲಿರುವುದು ಸೇರಿ ಗಂಭೀರವಾದ ಲೋಪಗಳು ಕಂಡುಬಂದಾಗ ಮಾತ್ರ ನಾಮಪತ್ರ ರದ್ದು’

-ಎನ್.ಮಂಜುನಾಥ್ ಪ್ರಸಾದ್, ಜಿಲ್ಲಾ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News