ಕನ್ನಡ ಸಂಸ್ಕೃತಿ ಇರುವವರೆಗೂ ರಾಜ್‌ಕುಮಾರ್ ಜೀವಂತ: ಚಿರಂಜೀವಿ ಸಿಂಗ್

Update: 2018-04-24 16:23 GMT

ಬೆಂಗಳೂರು, ಎ.24: ರಾಜ್ಯದಲ್ಲಿ ರಾಜಕಾರಣಿಗಳಿಂದ ಕರ್ನಾಟಕದ ಏಕೀಕರಣವಾಯಿತು. ಹಾಗೆಯೇ ರಾಜ್‌ಕುಮಾರ್ ಅವರಿಂದ ಕನ್ನಡ ನುಡಿಯ ಏಕೀಕರಣ ಆಗಿದೆ. ಹೀಗಾಗಿ, ಕನ್ನಡ ಸಂಸ್ಕೃತಿ ಇರುವವರೆಗೂ ಡಾ.ರಾಜ್‌ಕುಮಾರ್ ಜೀವಂತವಾಗಿರುತ್ತಾರೆ ಎಂದು ರಾಜ್ಯ ಸರಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಅಭಿಪ್ರಾಯಿಸಿದರು.

ಮಂಗಳವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಡಾ.ರಾಜ್‌ಕುಮಾರ್ 90ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್‌ಕುಮಾರ್ ಸಾಂಸ್ಕೃತಿಕ ರಾಯಭಾರಿಯಾಗಿ ಎಲ್ಲರ ಹೃದಯದಲ್ಲಿದ್ದಾರೆ. ಅವರಂತಹ ನಟರನ್ನು ನಾನು ನೋಡಲಿಲ್ಲ. ಅವರ ಕೊಡುಗೆ ಕನ್ನಡಿಗರ ಮನದಲ್ಲಿ ಶಾಶ್ವತವಾಗಿದೆ ಎಂದರು.

ರಾಜ್‌ಕುಮಾರ್ ಕನ್ನಡದ ಸಾಂಸ್ಕೃತಿಕ ರಾಯಭಾರಿ. ಅಮೆರಿಕನ್, ಬ್ರಿಟಿನ್, ರಷ್ಯನ್, ಶೈಲಿಯಂತೆ ರಾಜ್‌ಕುಮಾರ್ ಅವರದು ಸ್ಥಳದಲ್ಲೆ ಪಾತ್ರಕ್ಕೆ ಜೀವ ತುಂಬುತ್ತಿದ್ದ ಶೈಲಿ ಎಲ್ಲರನ್ನು ತನ್ನತ್ತ ಸೆಳೆದಿತ್ತು. ಭಾವ ಭಾಷೆಯಿಂದ ನಟಿಸುವುದು ಅವರ ವೈಶಿಷ್ಟವಾಗಿತ್ತು. ಧಾರ್ಮಿಕ, ಪೌರಾಣಿಕ ಚಿತ್ರಗಳಿಗೆ ತಕ್ಕಂತೆ ಜೀವ ತುಂಬುತ್ತಿದ್ದರು. ಅವರ ಬಂಗಾರದ ಮನುಷ್ಯ ಚಿತ್ರಕ್ಕೆ ಯಾವುದೇ ಚಿತ್ರ ಸಾಟಿಯಾಗುವುದಿಲ್ಲ ಎಂದು ತಿಳಿಸಿದರು.

ನಾನು ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಂ ವೀರಭದ್ರಪ್ಪನವರೊಂದಿಗೆ ರಾಜ್ ಅಭಿನಯದ ಚಿತ್ರ ನೋಡಿದೆ. ಅಲ್ಲಿಂದ ನನಗೆ ಕನ್ನಡ ಚಿತ್ರದ ದರ್ಶನವಾಯಿತು. ಮುಂದೆ ಅವರ ಚಿತ್ರಗಳನ್ನು ನೋಡುತ್ತಿದ್ದೆ. ಅವರ ಚಿತ್ರಗಳಿಂದ ಪ್ರಭಾವಿತನಾಗಿ ಕನ್ನಡ ಕಲಿಯಲು ಆರಂಭಿಸಿದೆ ಎಂದು ಅವರು ಹೇಳಿದರು.

ಹಿಂದಿನ ಕಾಲದ ಚಿತ್ರಗಳಲ್ಲಿ ಸಂಗೀತದ ಮಾಧುರ್ಯವಿತ್ತು. ರಾಜ್ ಚಿತ್ರಗಳಲ್ಲಿ ಸಂಗೀತದ ಹೊಸ ಆಯಾಮವಿದ್ದು, ಹಾಡುಗಳ ನಿರೂಪಣೆಯಲ್ಲಿ ಸೌಜನ್ಯ ಇತ್ತು. ಕನ್ನಡ ಚಿತ್ರರಂಗಕ್ಕೆ ಅಂತಹ ಮಾಧುರ್ಯ ತುಂಬಿದ ಸಂಗೀತ ವಾಪಸ್ ಬರಲಿ ಎಂದ ಅವರು, ನಾನು ಎಷ್ಟೋ ವರ್ಷ ವಿಧಾನಸೌಧದಲ್ಲಿ ಕೆಲಸ ಮಾಡಿದ್ದೇನೆ, ಅಲ್ಲಿ ಬರುವ ರಾಜಕಾರಣಿಗಳ ನಡೆ, ನುಡಿ ದಿನಕಳೆದಂತೆ ಬದಲಾಗುತ್ತಿತ್ತು, ಆದರೆ ರಾಜ್‌ಕುಮಾರ್ ಪ್ರಸಿದ್ಧಿ ಶಿಖರದಲ್ಲಿದ್ದರೂ ವ್ಯಕ್ತಿತ್ವದಲ್ಲಿ ಸ್ವಲ್ಪವೂ ಬದಲಾವಣೆಯಾಗಲಿಲ್ಲ ಎಂದು ಶ್ಲಾಘಿಸಿದರು.

ನಟ ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ, ಅಪ್ಪಾಜಿಯವರಿಗೆ ಹುಟ್ಟುಹಬ್ಬದ ವಿಶೇಷ ಆಚರಣೆ ಇಷ್ಟವಿರಲಿಲ್ಲ. ಇದನ್ನು ಅಮ್ಮ ಪ್ರಶ್ನಿಸಿದರೆ ನಾನೇನು ಸಾಧನೆ ಮಾಡಿಲ್ಲ ಎನ್ನುತ್ತಿದ್ದರು ಎಂದ ಅವರು, ಅವರಿಗೆ ಸಂಪನ್ಮೂಲಗಳ ಬಗ್ಗೆ ವಿಶೇಷ ಕಾಳಜಿ ಇತ್ತು. ವಿದ್ಯುತ್, ನೀರು ಮಿತವ್ಯಯ ಮಾಡುತ್ತಿದ್ದರು. ಅಲ್ಲದೇ, ಅವರೊಳಗೆ ನಡೆದಾಡುವ ಗ್ರಂಥಾಲಯವಿತ್ತು ಎಂದು ಹೇಳಿದರು.

ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ, ರಾಜ್‌ಕುಮಾರ್ ಪುತ್ರರಾದ ಶಿವರಾಜ್ ಕುಮಾರ್, ಪುನೀತ್‌ರಾಜ್ ಕುಮಾರ್, ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News