ಸರಕಾರದ ಮುಖ್ಯ ಕಾರ್ಯದರ್ಶಿ, ಶಾಸನಸಭೆ ಕಾರ್ಯದರ್ಶಿಗೆ ಹೈಕೋರ್ಟ್ ನೋಟಿಸ್

Update: 2018-04-24 16:25 GMT

ಬೆಂಗಳೂರು, ಎ.24: ಜೆಡಿಎಸ್ ತೊರೆದು ಬಿಜೆಪಿ ಪಕ್ಷ ಸೇರಿರುವ ಮಾನಪ್ಪ ಡಿ. ವಜ್ಜಲ್ ಮತ್ತು ಡಾ.ಎಸ್.ಶಿವರಾಜ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕರಿಸಿದ ವಿಧಾನಸಭೆ ಸ್ಪೀಕರ್ ಕ್ರಮ ರದ್ದುಪಡಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಶಾಸನಸಭೆ ಕಾರ್ಯದರ್ಶಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಈ ಸಂಬಂಧ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಅವರಿದ್ದ ಏಕಸದಸ್ಯ ಪೀಠ, ಮುಖ್ಯ ಚುನಾವಣಾಧಿಕಾರಿ, ಮಾಜಿ ಶಾಸಕರಾದ ಮಾನಪ್ಪ ಡಿ.ವಜ್ಜಲ್ ಮತ್ತು ಡಾ.ಎಸ್.ಶಿವರಾಜ ಪಾಟೀಲ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಜೆಡಿಎಸ್ ಶಾಸಕರಾಗಿದ್ದ ಮಾನಪ್ಪ ವಜ್ಜಲ್ ಮತ್ತು ಡಾ.ಶಿವರಾಜ ಪಾಟೀಲ್ ಅವರು ಇದೇ ಜ.18ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ಕಳುಹಿಸಿಕೊಟ್ಟಿದ್ದರು. ಸ್ಪೀಕರ್ ಅವರು ಎ.23 ರಂದು ರಾಜೀನಾಮೆ ಅಂಗೀಕರಿಸಿ ರಾಜ್ಯಪತ್ರ ಹೊರಡಿಸಿದ್ದರು. ಈ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಜೆಡಿಎಸ್ ಶಾಸಕರಾಗಿದ್ದ ಮಾನಪ್ಪ ವಜ್ಜಲ್ ಮತ್ತು ಡಾ.ಶಿವರಾಜ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸುವ ಮುನ್ನವೇ ಬಿಜೆಪಿ ಸೇರಿದ್ದರು. ಇದು ಪಕ್ಷಾಂತರ ನಿಷೇಧ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಹೀಗಾಗಿ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಜರುಗಿಸಲು ಕೋರಿ ಸ್ಪೀಕರ್‌ಗೆ ಪತ್ರ ಬರೆಯಲಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಆದರೆ, ಎ.24ರಂದು ರಾಜೀನಾಮೆ ಅಂಗೀಕಾರವಾಗಿ ರಾಜ್ಯಪತ್ರ ಹೊರಡಿಸಿರುವುದರಿಂದ ಮಾನಪ್ಪ ವಜ್ಜಲ್ ಮತ್ತು ಶಿವರಾಜ ಪಾಟೀಲ ಮಾಜಿ ಶಾಸಕರಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಯಾವುದೇ ಕ್ರಮ ಜರುಗಿಸಲಾಗದು ಎಂದು ಸ್ಪೀಕರ್ ಕಾರ್ಯದರ್ಶಿ ಎ.24ರಂದು ತಮಗೆ ತಿಳಿಸಿದ್ದಾರೆ. ರಾಜೀನಾಮೆ ಅಂಗೀಕರಿಸುವ ಮುನ್ನವೇ ಬಿಜೆಪಿ ಸೇರಿರುವುದರಿಂದ ಮಾನಪ್ಪ ವಜ್ಜಲ್ ವಿರುದ್ಧ ಡಾ.ಶಿವರಾಜ ಪಾಟೀಲ್ ವಿರುದ್ಧ ಪಂಕ್ಷಾತರ ನಿಷೇಧ ಕಾಯ್ದೆ ಅಥವಾ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಮ ಜರುಗಿಸಬೇಕು ಮತ್ತು ರಾಜೀನಾಮೆ ಅಂಗೀಕರಿಸಿದ ಸ್ಪೀಕರ್ ಕ್ರಮ ರದ್ದುಪಡಿಸಬೇಕು ಎಂದು ಶರವಣ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News