ನಮ್ಮ ಕೆಲವು ನಾಯಕರತ್ನಗಳ ಬೇಕಾಬಿಟ್ಟಿ ಮಾತುಗಳು

Update: 2018-04-24 18:31 GMT

2014ರಿಂದೀಚೆಗೆ ಭಾರತದ ಗತವೈಭವದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ನಾಯಕರತ್ನಗಳ ಸಂಖ್ಯೆಯಲ್ಲಿ ಏಕಾಏಕಿಯಾಗಿ ವೃದ್ಧಿಯಾಗಿರುವುದನ್ನೂ, ಇವರೆಲ್ಲ ಒಂದೇ ಸೈದ್ಧಾಂತಿಕ ಹಾಗೂ ಧಾರ್ಮಿಕ ಹಿನ್ನೆಲೆಯಿಂದ ಬಂದಿರುವುದನ್ನೂ ನೀವೆಲ್ಲ ಗಮನಿಸಿಯೇ ಇರುತ್ತೀರಿ. ಅಂತಹ ಕೆಲವು ಅಲೌಕಿಕ ಭಾಷಣಗಳ ವೇಳೆ ಪ್ರಾಚೀನ ಭಾರತೀಯರಿಗೆ ಪ್ಲಾಸ್ಟಿಕ್ ಸರ್ಜರಿ ಕರಗತವಾಗಿತ್ತು, ವೈಮಾನಿಕ ತಂತ್ರಜ್ಞಾನ ತಿಳಿದಿತ್ತು, ವೇದಗಳಲ್ಲಿ ಐನ್‌ಸ್ಟೈನ್‌ನ ಸಾಪೇಕ್ಷತೆ ಸಿದ್ಧಾಂತವನ್ನು ಮೀರಿಸಿದ ಸಿದ್ಧಾಂತವಿದೆ, ದನಗಳು ಆಕ್ಸಿಜನ್ ಹೊರಸೂಸುತ್ತವೆ, ಮಹಾಭಾರತ ಕಾಲದಲ್ಲಿ ಅಂತರ್ಜಾಲ ಲಭ್ಯವಿತ್ತು ಎಂಬಿತ್ಯಾದಿ ವಿಲಕ್ಷಣ ಹೇಳಿಕೆಗಳನ್ನು ಕೇಳಿ ನಕ್ಕಿರುತ್ತೀರಿ. ಸದ್ಯ ದೇಶದ ಉಪರಾಷ್ಟ್ರಪತಿಯವರ ಸ್ಥಾನದಲ್ಲಿರುವ ವೆಂಕಯ್ಯ ನಾಯ್ಡು ಎಂಬ ಮತ್ತೋರ್ವ ನಾಯಕರು ಇತ್ತೀಚೆಗೆ ಇಂತಹುದೇ ಇನ್ನೊಂದು ವಿಚಿತ್ರ ಪ್ರತಿಪಾದನೆಯನ್ನು ಮಾಡಿದ್ದಾರೆ. ಸನ್ಮಾನ್ಯರು ಕುರುಕ್ಷೇತ್ರ ವಿಶ್ವವಿದ್ಯಾನಿಲಯದ ಪದವಿ ಪ್ರದಾನ ಸಂದರ್ಭದಲ್ಲಿ ಮಾತನಾಡುತ್ತಾ ಭಾರತದಲ್ಲಿ ಜನರು ಸ್ತ್ರೀಯರನ್ನು ಗೌರವದಿಂದ ಕಾಣದಿರುವುದಕ್ಕೆ ವಿದೇಶಿ ಆಡಳಿತ ಮತ್ತು ವಸಾಹತುಶಾಹಿ ಆಡಳಿತಗಳೇ ಕಾರಣವೆಂದು ಸಾರಿದ್ದಾರೆ. ಸಂಘ ಪರಿವಾರದ ಹಿನ್ನೆಲೆಯ ಸನ್ಮಾನ್ಯರು ವಿದೇಶಿ ಆಡಳಿತ ಎನ್ನುವಾಗ ಮುಸಲ್ಮಾನರ ಆಡಳಿತ ಎಂಬ ಅರ್ಥವನ್ನಿಟ್ಟುಕೊಂಡು ಮಾತಾಡಿರಬೇಕು ಎಂದು ಊಹಿಸಿದರೆ ತಪ್ಪಾಗದೆಂದು ತೋರುತ್ತದೆ. ಕಾರಣವೇನೆಂದರೆ ಮುಸ್ಲಿಮರು ಮತ್ತು ಕ್ರೈಸ್ತರು ಈ ದೇಶಕ್ಕೆ ಆಕ್ರಮಣಕಾರರಾಗಿ ಬಂದು ನಮ್ಮ ಸಂಪತ್ತನ್ನೆಲ್ಲಾ ಲೂಟಿಹೊಡೆದರು, ನಮ್ಮ ಭವ್ಯ ಸಂಸ್ಕೃತಿಯನ್ನು ಹಾಳುಗೆಡವಿದರೆಂಬುದು ಸಂಘ ಪರಿವಾರದ ಲಾಗಾಯ್ತಿನ ವಾದವಾಗಿದೆ. ಸೈದ್ಧಾಂತಿಕ ನಿಲುವುಗಳೇನೇ ಇದ್ದರೂ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲ, ಮುಖ್ಯಮಂತ್ರಿಯಂತಹ ಘನತೆಯ ಹುದ್ದೆಗಳನ್ನು ಅಲಂಕರಿಸಿದ ಬಳಿಕ ವ್ಯಕ್ತಿಗಳು ತಮ್ಮ ಮಾತುಗಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಅದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ಮಾತನಾಡಿದರೆ ಅವರು ತಮ್ಮ ಘನತೆಯೊಂದಿಗೆ ರಾಷ್ಟ್ರದ ಘನತೆಯನ್ನೂ ಮಣ್ಣುಪಾಲು ಮಾಡುತ್ತಾರೆ. ಕುರುಕ್ಷೇತ್ರ ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿಯೂ ಅದೇ ನಡೆದಿದೆ. ಸನ್ಮಾನ್ಯ ಉಪರಾಷ್ಟ್ರಪತಿಯವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲೇಬೇಕಾಗುತ್ತದೆ. ಉದಾಹರಣೆಗೆ ಮಹಾನ್ ಕೃತಿಯಾದ ಮಹಾಭಾರತವನ್ನೇ ಆರಿಸಿಕೊಳ್ಳಬಹುದು. ದುರ್ಯೋಧನನ ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆ ಎಳೆದಾಡಿ ಆಕೆಯನ್ನು ಅವಮಾನಿಸಿದವರು ವಿದೇಶಿಯರೇ ಅಥವಾ ವಸಾಹತುಕಾರರೇ?

ಈಗ ಈ ಕೆಳಗಿನ ಕೆಲವು ನಿಯಮಗಳನ್ನು ಪರಾಂಬರಿಸಿ:

* ಸ್ತ್ರೀಯರಿಗೆ ವೇದದ ಪಠ್ಯವನ್ನು ತಿಳಿಯುವ ಅಧಿಕಾರ ಇಲ್ಲ.

* ವೇದವನ್ನು..... (ಅನುಚಿತವಾಗಿ) ಶೂದ್ರರು ಮತ್ತು ಸ್ತ್ರೀಯರಿಗೆ ಹೊರಗೆಡಹುವ (ಮೂಲಕ ಪಾಪಕೃತ್ಯ ಎಸಗುವ) ದ್ವಿಜನು ಪ್ರಾಯಶ್ಚಿತ್ತವಾಗಿ ಒಂದು ವರ್ಷ ಬರೀ ಬಾರ್ಲಿ ತಿನ್ನಬೇಕು.

* ಕುಟುಂಬದ ಪುರುಷರು ಸ್ತ್ರೀ ತಮ್ಮನ್ನು ರಾತ್ರಿಹಗಲು ಅವಲಂಬಿಸಿರುವಂತೆ ನೋಡಿಕೊಳ್ಳಬೇಕು. ಆಕೆ ಇಂದ್ರಿಯ ಸುಖದಲ್ಲಿ ಮುಳುಗಿದಾಗ ಆಕೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು.

* ಸ್ತ್ರೀಯನ್ನು ಬಾಲ್ಯದಲ್ಲಿ ತಂದೆ, ಯೌವನದಲ್ಲಿ ಪತಿ, ವೃದ್ಧಾಪ್ಯದಲ್ಲಿ ಮಕ್ಕಳು ಕಾಪಾಡುತ್ತಾರೆ; ಸ್ತ್ರೀ ಯಾವತ್ತಿಗೂ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ.

* ಸ್ತ್ರೀಯನ್ನು ದುಷ್ಟ ಪ್ರವೃತ್ತಿಗಳಿಂದ - ಅವು ಎಷ್ಟೇ ಕ್ಷುಲ್ಲಕವಿರಲಿ - ಕಾಪಾಡಬೇಕು. ಇಲ್ಲವಾದರೆ ಆಕೆ ಎರಡು ಕುಟುಂಬಗಳಲ್ಲಿ ದುಃಖಕ್ಕೆ ಕಾರಣವಾಗುತ್ತಾಳೆ.

* ಯಾವ ಪುರುಷನಿಂದಲೂ ಸ್ತ್ರೀಯನ್ನು ಕೇವಲ ಬಲಪ್ರಯೋಗದಿಂದ ಸಂಪೂರ್ಣ ಕಾಪಿಡಲು ಸಾಧ್ಯವಿಲ್ಲ. ಆದರೆ ಕೆಳಗಿನ ವಿಧಾನಗಳ ಮೂಲಕ ಆಕೆಯನ್ನು ಕಾಪಿಡಬಹುದು.

* ಪತಿಯು ತನ್ನ ಪತ್ನಿಯನ್ನು ಸಂಪತ್ತಿನ ಸಂಗ್ರಹ ಮತ್ತು ವಿನಿಯೋಗಕ್ಕೆ, ಎಲ್ಲವನ್ನೂ ಸ್ವಚ್ಛವಾಗಿರಿಸುವುದಕ್ಕೆ, ಆಹಾರದ ತಯಾರಿಗೆ ಮತ್ತು ಪಾತ್ರೆಪಡಗಗಳನ್ನು ಚೆನ್ನಾಗಿ ಇಟ್ಟುಕೊಳ್ಳುವುದಕ್ಕೆ ಬಳಸಲಿ.

* ಸ್ತ್ರೀಯನ್ನು ಎಷ್ಟೇ ಜಾಗರೂಕತೆಯಿಂದ ಕಾಪಿಟ್ಟರೂ ಪುರುಷರ ಮೇಲೆ ಲೈಂಗಿಕ ಆಸಕ್ತಿ, ಚಂಚಲ ಸ್ವಭಾವ, ಸಹಜವಾದ ನಿರ್ದಯತೆಗಳಿಂದಾಗಿ ಆಕೆ ತನ್ನ ಗಂಡನ ವಿಷಯದಲ್ಲಿ ನಿಷ್ಠೆಯಿಂದ ಉಳಿಯುವುದಿಲ್ಲ.

* ಮನುವು ಸ್ತ್ರೀಯರನ್ನು ಸೃಷ್ಟಿಸುವಾಗ ಅವರಿಗೆ ಮಂಚ, ಸ್ಥಾನಮಾನ, ಆಭರಣ, ಅನೈತಿಕ ಬಯಕೆಗಳು, ಸಿಟ್ಟು, ಅಪ್ರಾಮಾಣಿಕತೆ, ಮತ್ಸರ ಮತ್ತು ದುರ್ನಡತೆಗಳ ಮೇಲೆ ಮೋಹವನ್ನು ಕೊಟ್ಟಿದ್ದಾನೆ.

* ಸ್ತ್ರೀಯರಿಗೆ ಪವಿತ್ರ ಮಂತ್ರೋಚ್ಚಾರದಿಂದ ಕೂಡಿದ ಮತಸಂಸ್ಕಾರ ವಿಧಿ ನಿಷಿದ್ಧ ಎಂಬುದು ಸ್ಥಾಪಿತ ಕಾನೂನು. ಶಕ್ತಿ ಇಲ್ಲದ ಮತ್ತು ವೈದಿಕ ಮಂತ್ರಗಳ ಜ್ಞಾನವಿರದ ಸ್ತ್ರೀಯರು ಸುಳ್ಳಿನಷ್ಟೇ ಅಪವಿತ್ರರು ಎನ್ನುವುದು ಸ್ಥಾಪಿತ ಕಾನೂನು.

* ರಜಸ್ವಲೆಯರಿಗೆ ಮಂದಿರ ಪ್ರವೇಶ ನಿಷಿದ್ಧ .......
ಇವೇ ಮುಂತಾದ ಸ್ತ್ರೀ ಸ್ವಾತಂತ್ರ್ಯವನ್ನು ಹತ್ತಿಕ್ಕುವ, ಸಮಾನತೆಯನ್ನು ನಿರಾಕರಿಸುವ, ಅಗೌರವ ತೋರುವ ನಿಯಮಗಳನ್ನು ರೂಪಿಸಿದಾತ ವಿದೇಶಿಯನೂ ಅಲ್ಲ, ವಸಾಹತುಕಾರನೂ ಅಲ್ಲ, ಅಪ್ಪಟ ಸ್ವದೇಶಿಯಾದ ಮನು!
ನಮ್ಮ ಕೇಸರಿವಾದಿ ನಾಯಕಮಣಿಗಳು ತಮ್ಮ ಜ್ಞಾನದ ಬರಕ್ಕೆ ಪರಿಹಾರ ಕಂಡುಕೊಳ್ಳುವರೇ? ನಾಲಿಗೆಯನ್ನು ಉದ್ದುದ್ದ ಹರಿಬಿಡದೆ ದೇಶದ ಘನತೆಯನ್ನು ಉಳಿಸುವ ಬಗ್ಗೆ ಯೋಚಿಸುವರೇ? ಇದೀಗ ಮಿಲಿಯನ್ ಡಾಲರ್ ಪ್ರಶ್ನೆ.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News