×
Ad

ನನ್ನಿಂದ 1 ಲಕ್ಷ ಕೋ.ರೂ.ವಸೂಲಿ ಮಾಡುವುದಾಗಿ ಹೇಳಿದ್ದ ಸಿಎಂ 1 ರೂ. ಕೂಡಾ ವಸೂಲಿ ಮಾಡಿಲ್ಲ: ಜನಾರ್ದನ ರೆಡ್ಡಿ

Update: 2018-04-25 22:02 IST

ಬೆಂಗಳೂರು, ಎ. 25: "ಜನಾರ್ದನ ರೆಡ್ಡಿ 1ಲಕ್ಷ ಕೋಟಿ ರೂ.ಲೂಟಿ ಮಾಡಿದ್ದು, ಅದನ್ನು ವಸೂಲಿ ಮಾಡುವೆ" ಅಂತ ಹೇಳಿದ್ದ ಸಿಎಂ ಸಿದ್ದರಾಮಯ್ಯ, ಅಧಿಕಾರಕ್ಕೆ ಬಂದು 5 ವರ್ಷಗಳೇ ಕಳೆದರೂ ನನ್ನಿಂದ ಒಂದು ರೂ.ವನ್ನು ಕೂಡ ವಸೂಲಿ ಮಾಡಲು ಆಗಲಿಲ್ಲ’ ಎಂದು ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಬುಧವಾರ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಕೋಟ್ಯಂತರ ರೂ.ಲೂಟಿ ಮಾಡಿದ್ದಾರೆಂದು ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೋಸಗಾರ, ಸುಳ್ಳುಗಾರ. ಇವರಿಗೆ ಬಡವರ ಬಗ್ಗೆ ಯಾವುದೇ ರೀತಿಯ ಕಳಕಳಿ ಇಲ್ಲ. ರಾವಣನ ರೂಪದ ಸಿದ್ದರಾಮಯ್ಯನರ ಸಂಹಾರಕ್ಕೆ ರಾಮನಂತಿರುವ ಶ್ರೀರಾಮುಲು ಬಂದಿದ್ದಾರೆ ಎಂದ ಅವರು, ಮೈಸೂರಿನ ಚಾಮುಂಡೇಶ್ವರಿ ಹಾಗೂ ಬನಶಂಕರಿ ತಾಯಿ ಇಬ್ಬರೂ ಸಿದ್ದರಾಮಯ್ಯರಿಗೆ ಆಶೀರ್ವಾದ ಮಾಡುವುದಿಲ್ಲ ಎಂದು ಭವಿಷ್ಯ ನುಡಿದರು.

ಮೊಳಕಾಲ್ಮೂರು ಕ್ಷೇತ್ರ ಹಾಗೂ ಬಾದಾಮಿ ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರನ್ನು ಅತ್ಯಂತ ಹೆಚ್ಚು ಬಹುಮತಗಳಿಂದ ಗೆಲ್ಲಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಶ್ರೀರಾಮುಲು ಹಾಗೂ ವಿಜಯೇಂದ್ರ ಇಬ್ಬರೂ ಮಕ್ಕಳಿದ್ದಂತೆ ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News