ನೋಟ್‌ಬ್ಯಾನ್ ಸಂಪೂರ್ಣ ವಿಫಲವಾಗಿದ್ದು, ಇದೀಗ ಫಲಿತಾಂಶ ಹೊರ ಬಂದಿದೆ: ದೇವೇಗೌಡ
ಬೆಂಗಳೂರು, ಎ.25: ಪ್ರಧಾನಿ ಮೋದಿ ಸರಕಾರದ ಗರಿಷ್ಠ ಮುಖಬೆಲೆಯ ನೋಟು ಏಕಾಏಕಿ ಅಮಾನ್ಯೀಕರಣ ಸಂಪೂರ್ಣ ವಿಫಲವಾಗಿದ್ದು, ಇದೀಗ ಫಲಿತಾಂಶ ಹೊರ ಬಂದಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.
ಬುಧವಾರ ಪದ್ಮನಾಭನಗರದ ನಿವಾಸದಲ್ಲಿ ಆಸ್ಟ್ರೇಲಿಯಾದ ಉಪಕೌನ್ಸಲೇಟ್ ಜನರಲ್ ಜಾನ್ ಬೋನರ್ ಅವರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಕಡೆಯೂ ಎಟಿಎಂಗಳು ಖಾಲಿ ಖಾಲಿಯಾಗಿವೆ. ನೋಟು ಅಮಾನ್ಯೀಕರಣ ಸಂಪೂರ್ಣ ವಿಫಲವಾಗಿದೆ ಎನ್ನುವುದಕ್ಕೆ ಇದು ನಿದರ್ಶನ ಎಂದರು.
ನೋಟ್ ಬ್ಯಾನ್ ವಿಫಲವಾಗುತ್ತೆ ಎಂದು ನಾನು ಅಂದೇ ಹೇಳಿದ್ದೆ. ಏನೋ ಸುಧಾರಣೆ ಮಾಡುತ್ತೇನೆ ಎಂದು ಹೊರಟಿದ್ದರು. ಆದರೆ ವಿಫಲ ಆಗಿದ್ದಾರೆ ಎಂದ ಅವರು, ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೊಂದಲ ಎಲ್ಲ ಮುಗಿದ ವಿಚಾರವಾಗಿದೆ. ಎಲ್ಲಾ ಕಡೆ ನಾಮಪತ್ರ ಸಲ್ಲಿಸಲಾಗಿದೆ. ಕೆಲವು ಕ್ಷೇತ್ರಗಳಲ್ಲಿ ಭಿನ್ನಮತ ಇರುವುದು ನಿಜ. ಆದರೆ, ಅದನ್ನು ಮಾತನಾಡಿ ಸರಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಬೇರೆ ದೇಶದವರು ಚುನಾವಣೆ ಸಂದರ್ಭದಲ್ಲಿ ರಾಜ್ಯಗಳಿಗೆ ಭೇಟಿ ಕೊಟ್ಟು ಪರಿಸ್ಥಿತಿ ಅವಲೋಕನ ಮಾಡುತ್ತಾರೆ. ಇದು ಸಹಜ ಪ್ರಕ್ರಿಯೆ. ಭೇಟಿ ವೇಳೆ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ನಮ್ಮ ಆಡಳಿತದ ವೇಳೆ ಸಾಕಷ್ಟು ಒಳ್ಳೆ ಕೆಲಸ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಸ್ಟ್ರೇಲಿಯಾದವರು ನಮ್ಮ ಬಗ್ಗೆ ಅರ್ಥ ಮಾಡಿಕೊಂಡಿದ್ದಾರೆ. ಆದರೆ, ನಮ್ಮವರಿಗೇ ಇದು ಅರ್ಥವಾಗಿಲ್ಲ ಎಂದು ದೇವೇಗೌಡರು ನುಡಿದರು.