ಜೆಡಿಎಸ್ ಪಕ್ಷಕ್ಕೆ 2 ಲಕ್ಷ ರೂ. ದೇಣಿಗೆ ನೀಡಿದ ಸಾಮಾನ್ಯ ರೈತ
ಬೆಂಗಳೂರು, ಎ. 25: ಜಾತ್ಯತೀತ ಜನತಾ ದಳ(ಜೆಡಿಎಸ್) ಪಕ್ಷಕ್ಕೆ ಸಾಮಾನ್ಯ ರೈತನೊಬ್ಬ 2ಲಕ್ಷ ರೂ.ಹಣ ನೀಡುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಹಾರೈಸಿದ್ದಾರೆ.
ರಾಜಕೀಯ ಪಕ್ಷಗಳಿಗೆ ದೊಡ್ಡ-ದೊಡ್ಡ ಉದ್ಯಮಿಗಳು, ಕಾರ್ಪೊರೇಟ್ ಕಂಪೆನಿಗಳು, ರಿಯಲ್ ಎಸ್ಟೇಟ್‌ನಲ್ಲಿ ತೊಡಗಿರುವ ವ್ಯಕ್ತಿಗಳು ಪಕ್ಷಕ್ಕೆ ದೇಣಿಗೆ ನೀಡುವುದು ಸರ್ವೆ ಸಾಮಾನ್ಯ. ಆದರೆ, ಮಾಗಡಿ ಮೂಲದ ಸಾಮಾನ್ಯ ರೈತ ಕೃಷ್ಣಪ್ಪ ಎಂಬವರು ಜೆಡಿಎಸ್ 2 ಲಕ್ಷ ರೂ.ದೇಣಿಗೆ ನೀಡುವ ಮೂಲಕ ಶುಭ ಕೋರಿದ್ದಾರೆ.
ರೈತ ನೀಡಿದ ಹಣವನ್ನು ಕುಮಾರಸ್ವಾಮಿ ಪಡೆಯಲು ನಿರಾಕರಿಸಿದರೂ ಬಿಡದ ಕೃಷ್ಣಪ್ಪ, ನೀವು ಹಣ ಪಡೆದುಕೊಳ್ಳಲೇಬೇಕು ಎಂದು ಹಠ ಹಿಡಿದು ಅಭಿಮಾನ ಮೆರೆದಿದ್ದಾರೆ. ರೈತರ ಪರವಾಗಿ ನೀವು ಕೆಲಸ ಮಾಡುತ್ತಿದ್ದು, ಆ ಕಾರ್ಯಕ್ಕೆ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ನಾನು ಯಾರು ಅನ್ನೋದು ಕುಮಾರಸ್ವಾಮಿಗೆ ಗೊತ್ತೋ ಇಲ್ವೋ ಗೊತ್ತಿಲ್ಲ. ಆದರೆ ದೇವೇಗೌಡ ಮತ್ತು ಕುಮಾರಸ್ವಾಮಿ ರೈತರನ್ನ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಆ ನಂಬಿಕೆಯ ಮೇಲೆ ಅವರಿಗೆ ಹಣ ಸಹಾಯ ಮಾಡಿದ್ದೇನೆ ಎಂದು ರೈತ ಕೃಷ್ಣಪ್ಪ ತಿಳಿಸಿದ್ದಾರೆ.