ಬಿಜೆಪಿಯನ್ನು ತಿರಸ್ಕರಿಸಲು ಕರ್ನಾಟಕ ಛಲವಾದಿ ವೇದಿಕೆ ರಾಜ್ಯಾಧ್ಯಕ್ಷ ಕರೆ
ಬೆಂಗಳೂರು, ಎ.25: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಎಲ್ಲರೂ ತಿರಸ್ಕರಿಸಬೇಕು ಎಂದು ಕರ್ನಾಟಕ ಛಲವಾದಿ ವೇದಿಕೆ ರಾಜ್ಯಾಧ್ಯಕ್ಷ ಛಲವಾದಿ ಎಂ.ವೆಂಕಟೇಶ್ ಕರೆ ನೀಡಿದ್ದಾರೆ.
ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಭಾರತೀಯರು, ನಮ್ಮ ಧರ್ಮ ಗ್ರಂಥ ಸಂವಿಧಾನವಾಗಿದೆ. ಆದರೆ, ಬಿಜೆಪಿ ನಾಯಕರು ಸಂವಿಧಾನ ಬದಲಾವಣೆ ಮಾಡುವ ಮಾತುಗಳನ್ನಾಡುತ್ತಿದ್ದಾರೆ. ಅಲ್ಲದೆ, ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ನಾಶ ಮಾಡಲು ಮುಂದಾಗಿದ್ದಾರೆ. ಹಾಗೂ ದೇಶದಾದ್ಯಂತ ದಲಿತ ಮಹಿಳೆಯರ ಮೇಲೆ ನಿರಂತರವಾದ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರಗಳು ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಬಿಜೆಪಿ ಕಾರ್ಯಕರ್ತರು ಮೃಗಗಳಂತೆ ವರ್ತಿಸುತ್ತಿದ್ದಾರೆ. ಜಮ್ಮುವಿನಲ್ಲಿ ನಡೆದ 8 ವರ್ಷದ ಮಗುವಿನ ಮೇಲಿನ ಅತ್ಯಾಚಾರದಿಂದ ಆರಂಭವಾಗಿ ರಾಷ್ಟ್ರದ ವಿವಿಧ ಮೂಲೆಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಬಲಾತ್ಕಾರ ನಡೆಸುತ್ತಿದ್ದಾರೆ. ಅಲ್ಲದೆ, ಒಂದು-ಎರಡು ಅತ್ಯಾಚಾರಗಳು ನಡೆಯುತ್ತವೆ. ಅದನ್ನು ದೊಡ್ಡದಾಗಿ ಪ್ರಚಾರ ಮಾಡಬೇಡಿ ಎಂದು ಅತ್ಯಾಚಾರಗಳನ್ನು ಸಮರ್ಥನೆ ಮಾಡಿಕೊಳ್ಳುವ ಪಕ್ಷಕ್ಕೆ ಯಾರೂ ಮತ ಹಾಕಬಾರದು ಎಂದು ಮನವಿ ಮಾಡಿದರು.
ಕರ್ನಾಟಕ ಕುರುಬ ಸಂಘದ ಮರಿಯಪ್ಪ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಕಳೆದ ಐದು ವರ್ಷಗಳಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಿದೆ. ಸಮಾಜದ ಹಿತ ಕಾಪಾಡುತ್ತಾ ಬಂದಿದೆ. ರೈತರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯ ಸೇರಿದಂತೆ ಎಲ್ಲರಿಗೂ ಸಮಾನವಾದ ನ್ಯಾಯ ನೀಡಿದೆ. ಅಲ್ಲದೆ, ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಾಖೆ ಅಧ್ಯಕ್ಷ ಎಂ.ಕೃಷ್ಣಪ್ಪ, ಉಪಾಧ್ಯಕ್ಷ ದೇವರಾಜ್, ಮಧುಸೂದನ್, ಕೆಂಪಣ್ಣ ಉಪಸ್ಥಿತರಿದ್ದರು.