ಉರ್ದುವನ್ನು ಒಂದು ಭಾಷೆಯಾಗಿ ಕಲಿಸುವುದು ಉತ್ತಮ: ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ
ಬೆಂಗಳೂರು, ಎ.25: ಉರ್ದುವನ್ನು ಮಾಧ್ಯಮವಾಗಿಸುವ ಬದಲು ಒಂದು ಭಾಷೆಯಾಗಿ ಕಲಿಸುವುದು ಉತ್ತಮ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದರು.
ಬುಧವಾರ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ (ಸಿಎಂಎ) ಕಬ್ಬನ್‌ಪೇಟೆಯ ಅಬ್ಬಾಸ್ ಖಾನ್ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ ಮತ್ತು ಸಿಎಂಎ ಅಧ್ಯಕ್ಷ ಜನಾಬ್ ಜಿಯಾವುಲ್ಲಾ ಶರೀಫ್ ಅವರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉರ್ದುವನ್ನು ಮಾಧ್ಯಮವಾಗಿಸುವ ಬದಲು ಒಂದು ಭಾಷೆಯಾಗಿ ಕಲಿಸುವುದು ಉತ್ತಮ. ಸಮುದಾಯದ ಹಿರಿಯರು ಹಾಗೂ ತಜ್ಞರು ಈ ಕುರಿತು ಗಂಭೀರವಾಗಿ ಚಿಂತನೆ ಮಾಡಬೇಕು ಎಂದ ಅವರು, ಹತ್ತನೇ ತರಗತಿವರೆಗೆ ಉರ್ದು ಮಾಧ್ಯಮದಲ್ಲಿ ಕಲಿತವರು ಆನಂತರ ಉರ್ದು ಮಾಧ್ಯಮ ಶಿಕ್ಷಣಕ್ಕೆ ಅವಕಾಶ ಇಲ್ಲದೆ ಇರುವುದರಿಂದ ಬೇರೆ ಭಾಷಾ ಮಾಧ್ಯಮದಲ್ಲಿ ಕಲಿಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಎಲ್ಲ ಧರ್ಮದಲ್ಲೂ ಶೋಷಣೆ ಎಂಬುದು ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಇದನ್ನು ತಡೆಗಟ್ಟಲು ಪ್ರತಿಯೊಂದು ಹೆಣ್ಣು ಮಗು ಶಿಕ್ಷಣ ಪಡೆಯಬೇಕು. ಸಮಾಜದಲ್ಲಿ ನಮಗೆ ಅನ್ಯಾಯವಾದಾಗ ಹೋರಾಟಗಳ ಮೂಲಕ ನ್ಯಾಯ ಪಡೆಯಬೇಕು. ನಾವು ಕಲಿತಂತಹ ವಿದ್ಯೆ ಪ್ರಯೋಜನವಾಗಲು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.
ಸಿಎಂಎ ಅಧ್ಯಕ್ಷ ಜನಾನ್ ಝೀಯಾವುಲ್ಲಾ ಶರೀಫ್ ಮಾತನಾಡಿ, ಅಬ್ಬಾಸ್ ಖಾನ್ ಕಾಲೇಜಿನಲ್ಲಿ ಹಲವು ತಂತ್ರಜ್ಞಾನಗಳ ಕೊರತೆ ಇದ್ದು, ಕೂಡಲೇ ಅಳವಡಿಸಲಾಗುತ್ತಿದೆ. ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರಿಗೆ 2 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು.
ಅಬ್ಬಾಸ್ ಖಾನ್ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಝುಬೇದಾ ಬೇಗಂ ಮಾತನಾಡಿ, ಈ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಉಂಟಾಗಿದ್ದು, ಆಡಳಿತ ಮಂಡಳಿ ಇದರ ಬಗ್ಗೆ ಗಮನಹರಿಸಬೇಕಿದೆ. ಮುಂದಿನ ವರ್ಷದಿಂದ ಈ ಕಾಲೇಜಿನಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಲ್ಲದೆ ಡಿಜಿಟಲ್ ಲೈಬ್ರರಿ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಎಂದು ತಿಳಿಸಿದರು.